ಬೆಂಗಳೂರು: ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೈಬರ್ ಕಳ್ಳರು 43.16 ಲಕ್ಷ ರೂ. ವಂಚಿಸಿದ್ದಾರೆ.
ಮಲ್ಲೇಶ್‌ಪಾಳ್ಯದ ನಿವಾಸಿ ರಾಜೇಶ್ ಕುಮಾರ್ (44) ವಂಚನೆಗೊಳಗಾದವರು.
ಅಪರಿಚಿತ ವಾಟ್ಸ್‌ಆ್ಯಪ್ ನಂಬರ್ ಮೂಲಕ ಇತ್ತೀಚೆಗೆ ರಾಜೇಶ್‌ಗೆ ಪಾರ್ಟ್ ಟೈಂ ಕೆಲಸ ಇರುವುದಾಗಿ ಸಂದೇಶ ಕಳುಹಿಸಿದ್ದರು. ಅಪರಿಚಿತರನ್ನು ರಾಜೇಶ್ ಸಂಪರ್ಕಿಸಿದಾಗ ಟೆಲಿಗ್ರಾಂನಿಂದ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿದ್ದರು. ರಾಜೇಶ್ ತಮ್ಮ ಹಾಗೂ ಪತ್ನಿಯ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗೆ 43.16 ಲಕ್ಷ ರೂ. ಜಮೆ ಮಾಡಿದ್ದರು.
ಇದಾದ ಬಳಿಕ ಸಂಪರ್ಕಕ್ಕೂ ಸಿಗದೇ, ಅಸಲು ದುಡ್ಡನ್ನು ಹಿಂತಿರುಗಿಸದೇ ಅಪರಿಚಿತರು ವಂಚಿಸಿದ್ದರು. ರಾಜೇಶ್ ತಮ್ಮ ಪರಿಚಿತರ ಮೂಲಕ ಅಪರಿಚಿತರ ಜಾಡು ಹಿಡಿಯಲು ಹೊರಟಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ತಿಳಿದು ಬಂದಿದೆ.
ಕೂಡಲೇ ಈ ಕುರಿತು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ತನಿಖೆ ನಡೆಸಲು ಆರೋಪಿಗಳಿಗೆ ಬಲೆ ಬೀಸಿದ್ದಾರೆ.