ಬೆಂಗಳೂರು: ಯಾವುದೇ ವ್ಯಕ್ತಿಗಳು ವೈಯಕ್ತಿಕವಾಗಿ ಉನ್ನತ ಹುದ್ದೆಗೇರಿದರೂ ಜೀವ ನೀಡಿದ ತಂದೆ-ತಾಯಿ, ಪಾಠ ಕಲಿಸಿದ ಗುರುಗಳು, ತಾಯಿ ಭಾಷೆ ಹಾಗೂ ತಾಯ್ನಾಡನ್ನು ಎಂದಿಗೂ ಮರೆಯಬಾರದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಸರ್ಜಾಪುರದಲ್ಲಿರುವ ಗ್ರೀನ್‌ವುಡ್ ಹೈ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕಲೆ, ಸಂಗೀತ ಭವನ ಮತ್ತು ಕ್ರೀಡಾ ಸಂಕೀರ್ಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮಾತೃ ಭಾಷೆಯು ನಮ್ಮ ಸಂಸ್ಕೃತಿ ಭಾಗವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಸಮರ್ಪಣ ಮನೋಭಾವ ಮತ್ತು ಭಕ್ತಿಯನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹೊÉàಟ್ ಮಾತನಾಡಿ, ಮಕ್ಕಳು ಮತ್ತು ಯುವಜನರಿಗೆ ಸರಿಯಾದ ಭವಿಷ್ಯ ಕಲ್ಪಿಸಲು ಹಾಗೂ ದೇಶದಲ್ಲಿ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ, ತರಬೇತಿ, ಅಂತರ್ಗತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾರಿಗೆ ತರಲಾಗಿದೆ. ಶಾಲೆಗಳು ವಿದ್ಯಾರ್ಥಿಯ ಸರ್ವೋತಮುಖ ಬೆಳವಣಿಗೆಯ ದೃಷ್ಟಿಯಿಂದ ವೇಳಾಪಟ್ಟಿ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಲೆ, ನಾಟಕ, ಸಂಗೀತ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳನ್ನು ಈ ವಿಭಾಗಗಳಲ್ಲಿ ಪರಿಣತರನ್ನಾಗಿಸಲು ಉತ್ತಮ ಸೌಲಭ್ಯ ಕಲ್ಪಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್, ಗ್ರೀನ್‌ವುಡ್ ಇಂಟರ್ ನ್ಯಾಷನಲ್ ಅಧ್ಯಕ್ಷ ವಿಜಯ್ ಅಗರ್ವಾಲ್ ಉಪಸ್ಥಿತರಿದ್ದರು.