ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಶುಕ್ರವಾರ ಮದುವೆ ಸಂಭ್ರಮ ಮನೆಮಾಡಿತ್ತು. ಇದಕ್ಕೆ ಕಾರಣ ನಿಲಯದಲ್ಲಿ ಕಳೆದ ನಾಲ್ಕು ವರ್ಷದಿಂದ ನಿವಾಸಿಯಾಗಿದ್ದ ಅಂಬಿಕಾ ಮತ್ತು ಏಳು ವರ್ಷಗಳಿಂದ ನಿವಾಸಿಯಾಗಿದ್ದ ಅಶ್ವಿನಿ ಮದುವೆ ಸಮಾರಂಭ. ಅಂಬಿಕಾಳನ್ನು ಗುಂಡುರಾವ್ ಜೋಷಿ ಹಾಗೂ ಅಶ್ವಿನಿಯನ್ನು ಪವನಕುಮಾರ ಕುಲಕರ್ಣಿ ಮದುವೆಯಾದರು.
ಶುಕ್ರವಾರ ಬೆಳಗ್ಗೆ 9:30 ಕ್ಕೆ ದೈವ ಅಕ್ಷತೆ ಹಾಗೂ 11:42 ಕ್ಕೆ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ನವ ವಧು-ವರರು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಚಾರ್ಯ ಬಾಪುರಾವ್ ಹಿಂದೂ ಧರ್ಮದ ಪ್ರಕಾರ ಮದುವೆ ಶಾಸ್ತ್ರ ಕಾರ್ಯ ನಡೆಸಿದರು ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ವಿಜಯಲಕ್ಷ್ಮಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ವಿ. ರಾಮನ್, ಸಿಡಬ್ಲ್ಯುಸಿ ಸಮಿತಿ ಅಧ್ಯಕ್ಷೆ ರೀನಾ ಡಿಸೋಜಾ ಹಾಗೂ ಸದಸ್ಯರು, ವರರ ಸಂಬಂಧಿಕರು ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.
19 ಮತ್ತು 20ನೇ ಮದುವೆ: ಇಲ್ಲಿನ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಇದೂವರೆಗೆ 18 ನಿವಾಸಿಗಳ ಮದುವೆಯಾಗಿದೆ. ಇಂದಿನದು 19 ಮತು 20ನೇ ನಿವಾಸಿಯ ಮದುವೆಯಾಗಿದೆ. 2014-15 ರಿಂದ 2017-18ನೇ ಸಾಲಿನ ವರೆಗೆ 9 ಮದುವೆಗಳು ವಸತಿ ನಿಲಯದಲ್ಲಿ ನಡೆದಿವೆ. ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಎಂಟು ಮಹಿಳಾ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.