Advertisement
ಹೀಗೆ ಎಲ್ಲ ಸಂಪತ್ತು ನಾಶವಾಗಿಹೋಗಲು ಆತ್ಮದೇವನು ಎದೆಬಡಿದುಕೊಂಡು ಅಳತೊಡಗಿದನು ಇಂತಹ ಪುತ್ರನು ಹುಟ್ಟುವುದಕ್ಕಿಂತ ಇವನ ತಾಯಿಯು ಬಂಜೆಯಾಗಿದ್ದರೆ ಚೆನ್ನಾಗಿರುತ್ತಿತ್ತೆಂದು ದುಃಖಿಸಿದನು. ಆಗ ಪರಮಜ್ಞಾನಿಯಾದ ಗೋಕರ್ಣನು ಅಲ್ಲಿಗೆ ಬಂದು ತಂದೆಗೆ ವೈರಾಗ್ಯವನ್ನು ಉಪದೇಶಿಸಿ ಸಮಾಧಾನ ಪಡಿಸಿದನು. ಅವನು ” ಅಪ್ಪಾ… ಈ ಪ್ರಪಂಚವು ಅಸಾರವಾಗಿದ್ದು ದುಃಖರೂಪವಾಗಿದೆ. ಆದ್ದರಿಂದ ನನ್ನ ಮಗ , ನನ್ನ ಸಂಸಾರವೆಂಬ ಮೋಹವನ್ನು ಬಿಟ್ಟು ತಪಸ್ಸಿಗಾಗಿ ಕಾಡಿಗೆ ಹೊರಟುಹೋಗಿ” ಎಂದು ಹೇಳಿದನು.
Related Articles
Advertisement
ನಂತರ ರಾತ್ರಿಯಲ್ಲಿ ಮಲಗಿದ್ದ ಧುಂಧುಕಾರಿಯನ್ನು ಕೈಕಾಲು ಕಟ್ಟಿ, ಕುತ್ತಿಗೆಗೆ ಉರುಳನ್ನು ಬಿಗಿದು, ಬಾಯಿಗೆ ನಿಗಿನಿಗಿಸುವ ಕೆಂಡವನ್ನು ಸುರಿದು ಸಾಯಿಸಿ ಅವನ ಶರೀರವನ್ನು ದೊಡ್ಡ ಹೊಂಡದಲ್ಲಿ ಹೂತುಹಾಕಿದರು. ಧುಂಧುಕಾರಿಯು ಅವನ ಕುಕರ್ಮಗಳಿಂದ ಭಯಂಕರವಾದ ಪ್ರೇತವಾದನು.
ಸ್ವಲ್ಪಸಮಯದ ನಂತರ ಗೋಕರ್ಣನು ಅಣ್ಣನ ಮರಣವಾರ್ತೆಯನ್ನು ತಿಳಿದು ಗಯಾದಿ ಪುಣ್ಯಕ್ಷೇತ್ರಗಳಲ್ಲಿ ಪಿಂಡಪ್ರದಾನವನ್ನು ಮಾಡಿ ರಾತ್ರಿ ತನ್ನ ಊರಿಗೆ ಬಂದು ಮನೆಯಲ್ಲಿ ಮಲಗಿದನು. ತನ್ನ ತಮ್ಮನು ಮಲಗಿರುವುದನ್ನು ಕಂಡ ಧುಂಧುಕಾರಿಯು ಅವನೆದುರಿಗೆ ತನ್ನ ವಿಕಾರರೂಪವನ್ನು ಪ್ರದರ್ಶಿಸಿದನು. ಅದನ್ನು ಕಂಡ ಗೋಕರ್ಣನು ಇವನ್ಯಾರೋ ದುರ್ಗತಿಯನ್ನು ಪಡೆದ ಆತ್ಮನಾಗಿದ್ದನೆಂದು ನಿಶ್ಚಯಿಸಿ, ಧೈರ್ಯವನ್ನು ತಂದು ಕೊಂಡು ನೀನು ಯಾರೆಂದು ಕೇಳಿದನು. ಮಾತನಾಡಲು ಶಕ್ತಿಯಿಲ್ಲದ ಧುಂಧುಕಾರಿಯ ಆತ್ಮವು ಜೋರಾಗಿ ಅಳುತ್ತ ಸಂಕೇತವನ್ನು ಮಾಡಿ ತಾನು ನಿನ್ನ ಅಣ್ಣನೆಂದು ಸೂಚ್ಯವಾಗಿ ತಿಳಿಸಿದನು. ಆಗ ಗೋಕರ್ಣನು ಬೊಗಸೆಯಲ್ಲಿ ನೀರನ್ನು ತುಂಬಿಸಿ ಅದನ್ನು ಅಭಿಮಂತ್ರಿಸಿ ಅವನಿಗೆ ಪ್ರೋಕ್ಷಿಸಲು ಸ್ವಲ್ಪ ಪಾಪಕ್ಷಯವಾಗಿ ಮಾತನಾಡುವ ಶಕ್ತಿಯನ್ನು ಹೊಂದಿದನು.
ಆಗ ಧುಂಧುಕಾರಿಯ ಗೋಕರ್ಣನನ್ನು ಕುರಿತು ” ತಮ್ಮ ನಾನು ಸ್ವಯಂಕೃತಾನರ್ಥದಿಂದ ಪ್ರೇತಯೋನಿಯನ್ನು ಪಡೆದು ಈ ದುರ್ದೆಶೆಯನ್ನು ಅನುಭವಿಸುತ್ತಿದ್ದೇನೆ ದಯಾಳುವಾದ ನೀನು ಏನಾದರೂ ಮಾಡಿ ನನಗೆ ಮುಕ್ತಿ ಕೊಡಿಸು ” ಎಂದು ಬೇಡಿದನು. ಅದಕ್ಕೆ ಗೋಕರ್ಣನು ” ನಾನು ನಿನಗಾಗಿ ವಿಧಿಪೂರ್ವಕ ಪಿಂಡದಾನಾದಿ ಸತ್ಕರ್ಮಗಳನ್ನು ಮಾಡಿದ್ದರೂ ನಿನಗೆ ಪ್ರೇತಯೋನಿಯಿಂದ ಮುಕ್ತವಾಗಿಲ್ಲವೇಕೆಂದು ಆಶ್ಚರ್ಯವಾಗುತ್ತಿದ್ದೆ. ಗಯಾ ಶ್ರಾದ್ಧದಿಂದಲೂ ನಿನಗೆ ಮುಕ್ತಿಯಾಗದಿದ್ದಲ್ಲಿ ಬೇರೆ ಯಾವ ಉಪಾಯವಿದೆಯೆಂದು ಅರಿತು ಹೇಳುವೆನು” ಎಂದು ಹೇಳಿದನು.
ಆಗ ಧುಂಧುಕಾರಿಯು “ನೂರಾರು ಗಯಾ ಶ್ರಾದ್ಧವನ್ನು ಮಾಡಿದರೂ ನನಗೆ ಮುಕ್ತಿಯಾಗದು ನೀನು ಇದಕ್ಕಾಗಿ ಬೇರೆ ಉಪಾಯವನ್ನು ಮಾಡು” ಎಂದು ಹೇಳಿದನು . ಪ್ರೇತದ ಈ ಮಾತನ್ನು ಕೇಳಿದ ಗೋಕರ್ಣನು ನೂರಾರು ಗಯಾಶ್ರಾದ್ಧದಿಂದಲೂ ನಿನಗೆ ಮುಕ್ತಿಯಾಗದಿದ್ದರೆ, ನಿನ್ನ ಮುಕ್ತಿಯು ಅಸಂಭವವೆಂದೇ ತೋರುತ್ತದೆ. ಇರಲಿ ಈಗ ನೀನು ನಿರ್ಭಯನಾಗಿ ಯಥಾಸ್ಥಾನದಲ್ಲಿ ಇರು. ನಿನ್ನ ಮುಕ್ತಿಯ ದಾರಿಯನ್ನು ನಾನು ವಿಚಾರಿಸಿ ನಿನಗೆ ತಿಳಿಸುವೆನು. ಎಂದು ಹೇಳಿದನು.
ಮರುದಿನ ಗ್ರಾಮಸ್ಥರೆಲ್ಲರೂ ಗೋಕರ್ಣನು ಬಂದಿರುವುದನ್ನು ತಿಳಿದು, ಅವನನ್ನು ಭೇಟಿಯಾಗಲು ಬಂದಿದ್ದರು. ಗೋಕರ್ಣನು ರಾತ್ರಿಯಲ್ಲಿ ಆದ ವಿಚಾರವನ್ನು ಅವರಿಗೆ ತಿಳಿಸಿ ವಿದ್ವಾಂಸರಲ್ಲಿ ಅಣ್ಣನ ಮುಕ್ತಿಯ ಮಾರ್ಗವನ್ನು ಕೇಳಿದನು. ಆದರೆ ಈವಿಷಯದಲ್ಲಿ ಎಲ್ಲರೂ ಅಸಮರ್ಥರಾದ ಕಾರಣ ಸೂರ್ಯದೇವನಲ್ಲಿ ಈ ಬಗ್ಗೆ ತಿಳಿಯುವುದಾಗಿ ನಿಶ್ಚಯಿಸಿದರು.
ಗೋಕರ್ಣನು ಸೂರ್ಯನನ್ನು ಸ್ತುತಿಸಿ ನಮಸ್ಕರಿಸಿ ಅಣ್ಣನ ಮುಕ್ತಿಯ ಮಾರ್ಗವನ್ನು ತಿಳಿಸು ಎಂದು ಬೇಡಲು ಸೂರ್ಯನಾರಾಯಣನು ದೂರದಿಂದಲೇ “ಭಾಗವತ ಸಪ್ತಾಹ ಕ್ರಮದಲ್ಲಿ ಪಾರಾಯಣವನ್ನು ಮಾಡು” ಎಂದು ಆಜ್ಞೆಮಾಡಿದನು. ನಂತರ ಗೋಕರ್ಣನು ಅಣ್ಣನ ಆತ್ಮವನ್ನು ಏಳು ಗಂಟುಗಳುಳ್ಳ ಒಂದು ಬಿದಿರಿನ ಕೋಲಿಗೆ ಆಕರ್ಷಿಸಿ ಭಾಗವತ ಸಪ್ತಾಹವನ್ನು ಪ್ರಾರಂಭಿಸಿದನು. ಅದನ್ನು ಕೇಳಲು ಊರ-ಪರಊರಿನವರೆಲ್ಲರೂ ಅಲ್ಲಿಗೆ ಆಗಮಿಸಿದ್ದರು. ದಿನದ ಭಾಗವತವು ಮುಗಿಯಲು ಆ ಬಿದಿರಿನ ಕೋಲಿನ ಒಂದೊಂದು ಗಂಟುಗಳು ಒಡೆಯಲಾರಂಭಿಸಿತು. ಈ ವಿಧವಾಗಿ ಏಳುದಿನಗಳಲ್ಲಿ ಹನ್ನೆರಡು ಸ್ಕಂದಗಳನ್ನು ಕೇಳಿದ ಧುಂಧುಕಾರಿಯ ಪ್ರೇತಾತ್ಮವು ಏಳು ಗಂಟುಗಳನ್ನು ಸೀಳಿ, ಪ್ರೇತಯೋನಿಯಿಂದ ಮುಕ್ತಗೊಂಡು, ಪವಿತ್ರನಾಗಿ, ದಿವ್ಯರೂಪವನ್ನು ಧರಿಸಿ ಎಲ್ಲರೆದುರು ಪ್ರಕಟಗೊಂಡನು. ಅವನು ಗೋಕರ್ಣನಿಗೆ ನಮಿಸುತ್ತಾ ತಮ್ಮ ನಿನ್ನ ಕೃಪೆಯಿಂದ ನನಗೆ ಮುಕ್ತಿಯು ದೊರಕಿದೆ ಪ್ರೇತ ಪೀಡೆಯನ್ನು ನಾಶಗೊಳಿಸುವಂತಹ, ಶ್ರೀಕೃಷ್ಣನ ಧಾಮವನ್ನು ದೊರಕಿಸಿಕೊಡುವಂತಹ ಭಾಗವತದ ಕಥೆಯು ಅತ್ಯದ್ಭುತವಾಗಿದೆ ಸಪ್ತಾಹ ಶ್ರವಣದ ಯೋಗದಿಂದ ಎಲ್ಲ ಪಾಪಗಳು ನಾಶವಾದವು ಎಂದು ಹೇಳಿದನು.
ಅದೇ ಸಮಯಕ್ಕೆ ವೈಕುಂಠದಿಂದ ದಿವ್ಯವಾದ ವಿಮಾನವು ಅಲ್ಲಿಗೆ ಬಂದು ಧುಂಧುಕಾರಿಯನ್ನು ಹತ್ತಿಸಿಕೊಳ್ಳಲು ಗೋಕರ್ಣನು ವಿಮಾನದಲ್ಲಿದ್ದ ದೇವತೆಗಳನ್ನು ಕುರಿತು ” ದೇವತೆಗಳೇ ಸಮಾನ ಮನಸ್ಕರಾಗಿ ಭಾಗವತ ಸಪ್ತಾಹ ಶ್ರವಣ ಮಾಡಿದ ಶ್ರೋತೃಗಳನೇಕರಿದ್ದರೂ ಧುಂಧುಕಾರಿಯನ್ನು ಮಾತ್ರ ಕರೆದೊಯ್ಯುವ ಕಾರಣವನ್ನು ತಿಳಿಸಿ” ಎಂದು ಕೇಳಿದನು. ಆಗ ದೇವತೆಗಳು “ಧುಂಧುಕಾರಿಯ ಪ್ರೇತವು ಏಳು ದಿನಗಳವರೆಗೆ ನಿರಾಹಾರದಿಂದ ಕಥಾಶ್ರವಣಮಾಡಿ ಆಯಾದಿನದ ವಿಷಯವನ್ನು ಮನನ ಮಾಡಿ ದೃಢವಾದ ವಿಶ್ವಾಸದಿಂದ ಕೇವಲ ಕೃಷ್ಣನನ್ನು ಸ್ಮರಿಸುತಿತ್ತು , ಆದಕಾರಣ ಅವನಿಗೆ ದಿವ್ಯ ದೇಹವು ದೊರೆತು ವೈಕುಂಠ ಪ್ರಾಪ್ತಿಯಾಯಿತು” ಎಂದು ಹೇಳಿ ಧುಂಧುಕಾರಿಯನ್ನು ಕರೆದುಕೊಂಡು ವೈಕುಂಠಕ್ಕೆ ಹೋದರು.
ಪುನಃ ಶ್ರಾವಣ ಮಾಸದಲ್ಲಿ ಗೋಕರ್ಣನು ಸಪ್ತಾಹಕ್ರಮದಿಂದ ಭಾಗವತ ಪಾರಾಯಣವನ್ನು ಮಾಡಲು ಈ ಮೊದಲು ಕಥಾಶ್ರವಣವನ್ನು ಮಾಡಿದ ಶ್ರೋತೃಗಳೆಲ್ಲರೂ ನಿಷ್ಠೆಯಿಂದ ಉಪವಾಸವಿದ್ದು ಕೃಷ್ಣ ಸ್ಮರಣೆಯೊಂದಿಗೆ ಭಾಗವತ ಶ್ರವಣವನ್ನು ಮಾಡಿದರು. ಆಗ ಭಗವಂತನು ದೇವತೆಗಳಿಂದೊಡಗೂಡಿದ ವಿಮಾನಗಳೊಂದಿಗೆ ಪ್ರಕಟಗೊಂಡನು. ಭಗವಂತನು ಹರ್ಷಿತನಾಗಿ ಗೋಕರ್ಣನನ್ನು ಆಲಿಂಗಿಸಿಕೊಂಡು ರೇಷ್ಮೆ ಪೀತಾಂಬರ ಕಿರೀಟ ಕುಂಡಲಾದಿಗಳಿಂದ ಶೋಭಿಸುವಂತೆ ಮಾಡಿ ಕಥಾಶ್ರವಣವನ್ನು ಮಾಡಿದ ಶ್ವಾನ ಚಾಂಡಾಲಾದಿಗಳೆಲ್ಲರನ್ನೂ ವಿಮಾನದಲ್ಲಿ ಹತ್ತಿಸಿ ಭಗವಧಾಮಕ್ಕೆ ಕರೆದೊಯ್ದನು. ಹೀಗೆ ಭಾಗವತದ ಮಹಿಮೆಯಿಂದ ಧುಂಧುಕಾರಿ ಸಹಿತ ಎಲ್ಲರಿಗೂ ಪರಮಪದವು ದೊರೆಯಿತು.
ಪಲ್ಲವಿ