Advertisement

ಇಂದಿನಿಂದ ಸಂಸತ್‌ ಅಧಿವೇಶನ: ಕಲಾಪ ಕಾವೇರುವ ಸಾಧ್ಯತೆ ದಟ್ಟ

01:01 AM Nov 29, 2021 | Team Udayavani |

ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರ ಶುರುವಾಗಲಿದೆ. ಹಲವು ವಿಚಾರಗಳಿಗೆ ಸಂಬಂಧಿಸಿ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧತೆ ನಡೆಸಿದ್ದು, ಕಲಾಪ ಕಾವೇರುವ ಎಲ್ಲ ಲಕ್ಷಣಗಳೂ ಇವೆ. ಅದಕ್ಕೆ ಪೂರಕವಾಗಿ ರವಿವಾರ ಹೊಸದಿಲ್ಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಸಭೆಯಲ್ಲಿ ಪೆಗಾಸಸ್‌ ಗೂಢಚರ್ಯೆ ವಿವಾದ, ಬಿಎಸ್‌ಎಫ್ ವ್ಯಾಪ್ತಿ ವಿಸ್ತರಣೆ, ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳನ್ನು ವಿಪಕ್ಷಗಳ ಮುಖಂಡರು ಪ್ರಸ್ತಾಪಿಸಿದ್ದಾರೆ.

Advertisement

ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಮಾನ್ಯತೆ ಬಗ್ಗೆ ಸರ್ಕಾರದ ನಿಲುವು ಹಾಗೂ ಲಾಭದಲ್ಲಿರುವ ಸರಕಾರಿ ಸಂಸ್ಥೆಗಳಿಂದ ಷೇರುಗಳನ್ನು ಮಾರಾಟ ಮಾಡುವ ಸರಕಾರದ ನಿರ್ಧಾರಗಳನ್ನು ಟಿಎಂಸಿ ಮುಖಂಡರಾದ ಸುದೀಪ್‌ ಬಂದೋಪಾಧ್ಯಾಯ, ಡೆರಿಕ್‌ ಒ ಬ್ರಿಯಾನ್‌ ಪ್ರಶ್ನಿಸಿದ್ದಾರೆ. ಅಧಿವೇಶನದಲ್ಲಿ ಮಹಿಳಾ ಮೀಸಲು ಮಸೂದೆ ಮಂಡಿಸಿ ಅನುಮೋದನೆ ನೀಡಬೇಕು ಎಂದು ಸಭೆಯಲ್ಲಿ ಪಕ್ಷಗಳು ಒತ್ತಾಯಿಸಿವೆ. ಟಿಎಂಸಿ, ವೈ.ಎಸ್‌.ಆರ್‌.ಕಾಂಗ್ರೆಸ್‌ ಮತ್ತು ಡಿಎಂಕೆ ಈ ಬಗ್ಗೆ ಪ್ರಸ್ತಾವ ಮಾಡಿವೆ. ಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ, ಆಮ್‌ ಆದ್ಮಿ ಪಕ್ಷದ ನಾಯಕರು ಹೊರ ನಡೆದಿದ್ದಾರೆ.

ಪ್ರಧಾನಿ ಗೈರು: ಸರ್ವಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರು ಗೈರುಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿಯವರು ಸಭೆಗೆ ಆಗಮಿಸಿ, ಮಾತನಾಡುವರು ಎಂಬ ನಿರೀಕ್ಷೆ ಇತ್ತು. ಮೂರು ಕೃಷಿ ಕಾಯ್ದೆಗಳು ಈಗ ರದ್ದಾದರೂ, ಮುಂದಿನ ದಿನಗಳಲ್ಲಿ ಅವುಗಳು ಯಾವುದಾದರೂ ಒಂದು ರೂಪದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಬಳಿ ಸ್ಪಷ್ಟನೆ ಕೇಳಬೇಕಾಗಿತ್ತು’ ಎಂದರು. ಇದೇ ವೇಳೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ “ಸಭೆಗೆ ಪ್ರಧಾನಿ ಹಾಜರಾಗಬೇಕು ಎಂಬ ಸಂಪ್ರದಾಯ ಇಲ್ಲ. ಸಭೆಗೆ ಪ್ರಧಾನಿ ಬರಬೇಕು ಎಂಬುದನ್ನು ಶುರು ಮಾಡಿದ್ದೇ  ಪ್ರಧಾನಿ ಮೋದಿಯವರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಕಾಂಗ್ರೆಸ್‌ ಸಭೆಗೆ ಟಿಎಂಸಿ ಗೈರು
ಅಧಿವೇಶನದ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎನ್ನುವುದು ಕಾಂಗ್ರೆಸ್‌ ಉದ್ದೇಶ. ಅದಕ್ಕಾಗಿ ಎಲ್ಲ ವಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಎಂಬಂತೆ ನ.29ಕ್ಕೆ ಸಭೆ ಕರೆ ದಿತ್ತು. ಆ ಸಭೆಗೆ ಗೈರಾಗಲು ತೃಣಮೂಲ ಕಾಂಗ್ರೆಸ್‌ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ನಾಯಕ ಅಧೀರ್‌ರಂಜನ್‌ ಚೌಧರಿ “ಸಭೆಯಲ್ಲಿ ಭಾಗವಹಿಸಲು ಆಹ್ವಾನವಂತೂ ನೀಡಿದ್ದೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟದ್ದು’ ಎಂದಿದ್ದಾರೆ. ಇನ್ನೊಂದೆಡೆ, ರವಿವಾರ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆದಿದ್ದು, ಸಂಸದರು ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ವಿಪಕ್ಷಗಳನ್ನು ಎದುರಿಸಲು ಸನ್ನದ್ಧರಾಗಿ ಬರುವಂತೆಯೂ ಸೂಚಿಸಲಾಗಿದೆ.

Advertisement

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ಬಗ್ಗೆ ಕೆಲವು ಮುಖಂ ಡರು ಪ್ರಸ್ತಾವ ಮಾಡಿದ್ದಾರೆ. ಚೀನ ಜತೆಗಿನ ಗಡಿ ವಿವಾದ, ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಬಗ್ಗೆ ಕೂಡ ಕೇಂದ್ರ ಸರಕಾರದ ಗಮನ ಸೆಳೆಯಲಾಗಿದೆ.
-ಮಲ್ಲಿಕಾರ್ಜುನ ಖರ್ಗೆ,ರಾಜ್ಯಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next