Advertisement

Parliament: ಇತಿಹಾಸವಾಗಲಿದೆ ಸಂಸತ್‌ ಭವನ

11:12 PM May 26, 2023 | Team Udayavani |

ಬರೋಬ್ಬರಿ 96 ವರ್ಷಗಳ ಇತಿಹಾಸವಿರುವ ಹಾಲಿ ಸಂಸತ್‌ ಭವನ ಇನ್ನೇನು ಚರಿತ್ರೆಯ ಪುಟ ಸೇರಲಿದೆ. ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಗಳಿಗೆಯಿಂದ ಹಿಡಿದು, ದೇಶವನ್ನು ಕಟ್ಟುವ ಎಲ್ಲ ಕಾಯ್ದೆಗಳು, ಕಾನೂನುಗಳನ್ನು ರೂಪಿಸುವಲ್ಲಿ ಸಾಕ್ಷಿಯಾಗಿರುವ ಈ ಸಂಸತ್‌ ಭವನ ಮ್ಯೂಸಿಯಂ ಆಗಿ ಮಾರ್ಪಾಡಾಗಲಿದೆ. ಈ ಭವನದ ಐತಿಹ್ಯವನ್ನು ಒಮ್ಮೆ ನೋಡಿದರೆ ದೇಶದ ಎಲ್ಲ ಸ್ಮರಣೀಯ ಸಂಗತಿಗಳೂ ಇದರ ಜತೆಗೆ ಮೇಳೈಸಿಕೊಂಡಿರುವುದು ಕಾಣಿಸುತ್ತದೆ. ಸ್ವಾತಂತ್ರ್ಯ ಸಿಕ್ಕಾಗ ಅಂದಿನ ಪ್ರಧಾನಿ ಪಂಡಿತ್‌ ನೆಹರೂ, ಶಾಸ್ತ್ರೀಜಿ, ಇಂದಿರಾ, ರಾಜೀವ್‌, ಅಟಲ್‌, ಪಿ.ವಿ.ನರಸಿಂಹರಾವ್‌, ದೇವೇಗೌಡ,  ಮನಮೋಹನ್‌ ಸಿಂಗ್‌, ನರೇಂದ್ರ ಮೋದಿ ವರೆಗೆ ಹಲವಾರು ಪ್ರಧಾನಿಗಳ ಆಡಳಿತಕ್ಕೂ ಸಾಕ್ಷಿಯಾಗಿದೆ.

Advertisement

ಅದು ಬ್ರಿಟಿಷ್‌ ಆಡಳಿತದ ದಿನಗಳು.ಹೊಸದಿಲ್ಲಿಯಲ್ಲಿ ಆಡಳಿತದ ಪ್ರಧಾನ ಕೇಂದ್ರಕ್ಕಾಗಿ ಬ್ರಿಟಿಷರು ಕಟ್ಟಡ ನಿರ್ಮಾಣಕ್ಕಾಗಿ ಯೋಚಿಸಿದ್ದರು. ಈ ಹಿನ್ನೆಲೆಯಲ್ಲಿ ಎಡ್ವಿನ್‌ ಲ್ಯೂಟೆನ್ಸ್‌ ಮತ್ತು ಹರ್ಬರ್ಟ್‌ ಬೇಕರ್‌ ಎಂಬ ಇಬ್ಬರು ಕಟ್ಟಡ ನಿರ್ಮಾಣಕಾರರು ಮತ್ತು ವಿನ್ಯಾಸಕಾರರಿಗೆ ಸೂಕ್ತ ಮತ್ತು ಆಕರ್ಷಕವಾಗಿರುವ ಆಡಳಿತ ಸೌಧದ ನಿರ್ಮಾಣಕ್ಕೆ ಸೂಚನೆ ಹಾಗೂ ಅದಕ್ಕೆ ಸಂಬಂಧಿಸಿದ ನೀಲ ನಕ್ಷೆ ಸಿದ್ಧಪಡಿಸಲು ಬ್ರಿಟಿಷ್‌ ಸರಕಾರ ಸೂಚಿಸಿತ್ತು. 1912-13ನೇ ಸಾಲಿನಲ್ಲಿ ಈ ಬಗ್ಗೆ  ಯೋಜನೆ ಕೈಗೊಳ್ಳಲಾಗಿತ್ತು. ಆಗ ಇದ್ದ ಬ್ರಿಟನ್‌ ರಾಜಕುಮಾರ ಪ್ರಿನ್ಸ್‌ ಆರ್ಥರ್‌ 1921ರಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಅನಂತರ ಕಾಮಗಾರಿ ಮುಕ್ತಾಯಗೊಂಡು 1927 ಜ.18ರಂದು ಬ್ರಿಟಿಷ್‌ ಆಡಳಿತದ ಭಾರತದ ವೈಸ್‌ರಾಯ್‌ ಆಗಿದ್ದ ಲಾರ್ಡ್‌ ಇರ್ವಿನ್‌ ಅದನ್ನು ಲೋಕಾರ್ಪಣೆ­ಗೊಳಿಸಿದ್ದರು. ಒಟ್ಟು ಆರು ಎಕ್ರೆ ಪ್ರದೇಶದಲ್ಲಿ ಈಗಿನ ಕಟ್ಟಡ ಇದೆ.

ಹೌಸ್‌ ಆಫ್ ಪಾರ್ಲಿಮೆಂಟ್‌

ಈ ಕಟ್ಟಡವನ್ನು ಆರಂಭದಲ್ಲಿ “ಹೌಸ್‌ ಆಫ್ ಪಾರ್ಲಿಮೆಂಟ್‌’ ಎಂದು ಕರೆಯಲಾಗಿತ್ತು. ಬ್ರಿಟಿಷ್‌ ಆಡಳಿತ ವ್ಯವಸ್ಥೆ ಇದ್ದ ಕಾರಣ ಅದನ್ನು “ಇಂಪೀರಿಯಲ್‌ ಲೆಜಿಸ್ಲೇಟಿವ್‌ ಕೌನ್ಸಿಲ್‌’ ಎಂದೂ ಹೆಸರಿಸ­ಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಲಿರುವ ಹಂತದ ಈ ಕಟ್ಟಡ ಸಂವಿಧಾನದ ರಚನಾ ಸಮಿತಿಯ ವ್ಯಾಪ್ತಿಗೆ ಬಂತು. ಅಂದ ಹಾಗೆ ಸದ್ಯ ಇರುವ ಸಂಸತ್‌ನಲ್ಲಿ 12 ಬಾಗಿಲುಗಳು ಇವೆ. ಸಂಸತ್‌ ಭವನದ ಮಧ್ಯದಲ್ಲಿಯೇ ಸೆಂಟ್ರಲ್‌ ಹಾಲ್‌ ಇದೆ. ಅದರಲ್ಲಿಯೇ 1947­ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದ್ಯೋತಕವಾಗಿ ಅಧಿಕಾರ ಹಸ್ತಾಂತರವೂ ನಡೆದಿತ್ತು.

ಲೋಕಸಭೆಯ ಹಾಲ್‌ 446 ಚದರ ಅಡಿ ಇದೆ. ಅದರಲ್ಲಿ 550 ಆಸನಗಳು ಇವೆ. ನೆಲಕ್ಕೆ ಹಸುರು ಹಾಸುಗಳನ್ನು ಅಳವಡಿಸ­ಲಾಗಿದೆ. ಆಡಳಿತ ಪಕ್ಷದ ಸದಸ್ಯರು ಬಲಭಾಗಕ್ಕೆ, ವಿಪಕ್ಷಗಳ ಸದಸ್ಯರು ಎಡಭಾಗಕ್ಕೆ ಕೂರುವಂತೆ ವ್ಯವಸ್ಥೆ ಇದೆ. ಇನ್ನು ರಾಜ್ಯಸಭೆಯಲ್ಲಿ 250 ಆಸನ ವ್ಯವಸ್ಥೆ ಇದೆ. ಸೆಮಿ ಸರ್ಕಲ್‌ ಮಾದರಿಯಲ್ಲಿ ಅದನ್ನು ಅಳವಡಿಸಲಾಗಿದೆ. ನೆಲಕ್ಕೆ ಕೆಂಪು ಹಾಸಿನ ವ್ಯವಸ್ಥೆ ಇದೆ.

Advertisement

ಬಾಂಬ್‌ ಎಸೆದಿದ್ದ ಭಗತ್‌, ಬಟುಕೇಶ್ವರ ದತ್ತ

ಉದ್ಘಾಟನೆಗೊಂಡ 2 ವರ್ಷಗಳ ಬಳಿಕ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕ್ರಾಂತಿಕಾರಿಗಳಾದ ಭಗತ್‌ ಸಿಂಗ್‌ ಮತ್ತು ಬಟುಕೇಶ್ವರ ದತ್ತ ಧೈರ್ಯದಿಂದ ಬಾಂಬ್‌  ಅನ್ನು ಅಸೆಂಬ್ಲಿ ಛೇಂಬರ್‌ನತ್ತ ಎಸೆದಿದ್ದರು. 1929 ಎ.8ರಂದು ಅಸೆಂಬ್ಲಿಯಲ್ಲಿ ನಡೆದಿದ್ದ ಕಲಾಪಗಳು ಮತ್ತು ದಾಖಲಾಗಿರುವ ಅಂಶಗಳ ಪ್ರಕಾರ “ಪ್ರೇಕ್ಷಕರ ಗ್ಯಾಲರಿಯಿಂದ 2 ಬಾಂಬ್‌ಗಳನ್ನು ಎಸೆಯಲಾಗಿತ್ತು. ಅಧಿಕಾರಿಗಳು ಮತ್ತು ಸದಸ್ಯರು ಆಸೀನರಾಗಿ ಇರುವ ಸ್ಥಳದಲ್ಲಿ ಅವುಗಳು ಬಿದ್ದು ಸ್ಫೋಟಗೊಂಡವು. ಇದರಿಂದಾಗಿ  ಗೊಂದಲಮಯ ವಾತಾವರಣ ಉಂಟಾಗಿತ್ತು ಹಾಗೂ ಕೆಲವರಿಗೆ ಗಾಯಗಳಾಗಿದ್ದವು. ಕೆಲವು ಸಮಯದ ಅನಂತರ ಅಧ್ಯಕ್ಷರು ಕಲಾಪಗಳನ್ನು ಮುಂದುವರಿಸಿದರು’ ಎಂದು ಉಲ್ಲೇಖಗೊಂಡಿದೆ.

ಮಹಾತ್ಮಾ ಗಾಂಧಿಯವರ ನಿಧನ ಘೋಷಣೆ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಒಂದು ವರ್ಷವಾಗುಷ್ಟರಲ್ಲಿಯೇ ಮಹಾತ್ಮಾ ಗಾಂಧೀಜಿ ಹತ್ಯೆಯಾಯಿತು. 1948 ಫೆ.2ರಂದು ಲೋಕಸಭೆ ಕಲಾಪದಲ್ಲಿ ಸ್ಪೀಕರ್‌ ಜಿ.ವಿ.ಮಾವ್ಲಂಕರ್‌ ಈ ಮಾಹಿತಿ ಪ್ರಕಟಿಸಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು “ನಾವು ಎರಡು ಆಘಾತಕಾರಿ ಸನ್ನಿವೇಶಗಳನ್ನು ಎದುರಿಸಲು ಸೇರಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಧಾನವಾಗಿ ಹೋರಾಟ ಮಾಡಿದ ನಮ್ಮ ಕಾಲದ ಬಲುದೊಡ್ಡ ವ್ಯಕ್ತಿ, ನಮ್ಮನ್ನು ಗುಲಾಮಗಿರಿ ಯಿಂದ ಮುಕ್ತಗೊಳಿಸಿದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ’ ಎಂದು ಹೇಳಿದ್ದರು. “ಬಲು ದೊಡ್ಡ ಶಕೆಯೊಂದು ಮುಕ್ತಾಯವಾಗಿದೆ. ನಮ್ಮ ಜೀವನ ಬೆಳಗುವಂತೆ ಮಾಡಿ, ಅನುಕೂಲಕರ ವಾತಾವರಣ ಸೃಷ್ಟಿಸಿದ ಸೂರ್ಯ ಉದಯಿಸಿ, ಪ್ರವರ್ಧಮಾನಕ್ಕೆ ಬಂದು ಮುಳುಗಿದ್ದಾನೆ. ಇನ್ನೀಗ ನಾವು ಕಗ್ಗತ್ತಲ ರಾತ್ರಿಯಲ್ಲಿ ನಡುಗಬೇಕಾಗಿದೆ’ ಎಂದು ನೆಹರೂ ಅವರು ಉದ್ಗರಿಸಿದ್ದರು.

1965ರ ಯುದ್ಧದಿಂದಾಗಿ ಆಹಾರ ಕೊರತೆ

ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಪ್ರಧಾನಮಂತ್ರಿಗಳಾಗಿದ್ದ ಅವಧಿ. 1965ರಲ್ಲಿ ಪಾಕಿಸ್ಥಾನದ ಜತೆಗೆ ನಡೆದಿದ್ದ ಯುದ್ಧದ ಪರಿಣಾಮ­ದಿಂದಾಗಿ ದೇಶದಲ್ಲಿ ಆಹಾರದ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡಿದ್ದ ಲಾಲ್‌ ಬಹದ್ದೂರ್‌ ಶಾಸಿŒ ದೇಶದ ನಾಗರಿಕರು ಪ್ರತೀ ವಾರಕ್ಕೆ ಒಂದು ಊಟವನ್ನು ತ್ಯಾಗ ಮಾಡಬೇಕು ಎಂದು ಮನವಿ ಮಾಡಿದ್ದರು.

1974ರ ಮೊದಲ ಅಣು ಪರೀಕ್ಷೆ

ಇಂದಿರಾ ಗಾಂಧಿ ನೇತೃತ್ವದ ಸರಕಾರ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿತ್ತು. ಈ ಬಗ್ಗೆ ಜು.22ರಂದು ಸಂಸತ್‌ನಲ್ಲಿ ಸಮಗ್ರ ಹೇಳಿಕೆಯನ್ನು ನೀಡಲಾಗಿತ್ತು. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಇಪ್ಪತ್ತನಾಲ್ಕು ವರ್ಷಗಳ ಬಳಿಕ ಅಂದರೆ 1998ರಲ್ಲಿ ಆಗ ಪ್ರಧಾನಮಂತ್ರಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಮೇ 11 ಮತ್ತು ಮೇ 13ರಂದು ಐದು ಪರಮಾಣು ಪರೀಕ್ಷೆಗಳನ್ನು ನಡೆಸಿ, ಭಾರತ ಈಗ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ಪ್ರಕಟಿಸಿದ್ದರು. “ಭಾರತ ಈಗ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ರಾಷ್ಟ್ರ. ಅದು ಈಗ ನಿಜವಾಗಿದೆ ಮತ್ತು ಅದನ್ನು ನಿರಾಕರಿಸುವಂತೆಯೂ ಇಲ್ಲ. ಈ ಗೌರವವನ್ನು ಯಾರೂ ಕೊಡಬೇಕಾಗಿಯೂ ಇಲ್ಲ ಅಥವಾ ಯಾರ ಬಳಿ ಬೇಡಲೂ ಇಲ್ಲ. ಇದು ನಿಜಕ್ಕೂ ನಮ್ಮ ದೇಶದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಸಾಧನೆಯೇ ಆಗಿದೆ’ ಎಂದರು .

ತುರ್ತು ಪರಿಸ್ಥಿತಿ ಕರಾಳ ನೆನಪು

ಇಂದಿರಾ ಗಾಂಧಿಯವರ ಆಡಳಿತ ಇದ್ದಾಗ 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. ಈ ಸಂದರ್ಭದಲ್ಲಿ ಲೋಕಸಭೆಯ ಕಲಾಪ ನಡೆಸಲು ನಿರ್ಧರಿಸಲಾಗಿತ್ತು. ತುರ್ತು ಪರಿಸ್ಥಿತಿ ಜಾರಿ ಮಾಡುವ ಆಗಿನ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಹಲವು ಸದಸ್ಯರು ಆಕ್ಷೇಪ ಮಾಡಿದ್ದರು. ಜತೆಗೆ ಸದಸ್ಯರಿಗೆ ನಿರ್ಣಯದ ವಿರುದ್ಧ ಆಕ್ಷೇಪಗಳನ್ನು ಮಂಡಿಸುವ ಹಕ್ಕು ಇರಲಿಲ್ಲ. 1975 ಜು.21ರಂದು ಗೃಹ ಖಾತೆ ಉಪ ಸಚಿವರಾಗಿದ್ದ ಎಫ್.ಎಚ್‌. ಮೊಹ್ಸಿàನ್‌ ಅವರು ತುರ್ತು ಪರಿಸ್ಥಿತಿ ಜಾರಿಗೆ ತರುವ ರಾಷ್ಟ್ರಪತಿಗಳ ಆದೇಶವನ್ನು ಸಂಸತ್‌ನಲ್ಲಿ ಮಂಡಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸದನದಲ್ಲಿ ಇದ್ದ ಸೋಮನಾಥ ಚಟರ್ಜಿ, ಇಂದ್ರಜಿತ್‌ ಗುಪ್ತಾ, ಜಗನ್ನಾಥ ರಾವ್‌ ಜೋಶಿ, ಎಚ್‌.ಎನ್‌.ಮುಖರ್ಜಿ ಮತ್ತು ಸ್ವತಂತ್ರ ಪಾರ್ಟಿಯ ಪಿ.ಕೆ.ದ್ಯೋ ಪ್ರಬಲವಾಗಿ ಆಕ್ಷೇಪಿಸಿದ್ದರು. “ಪ್ರಜಾಪ್ರಭುತ್ವಕ್ಕೆ ಇದೊಂದು ಹಂಸಗೀತೆಯಾಗಿರಬಹುದು. ನಿರ್ಣಯದ ವಿರುದ್ಧ ಆಕ್ಷೇಪ ಮಾಡುವ ಸದಸ್ಯರ ಹಕ್ಕುಗಳನ್ನು ಕಿತ್ತುಕೊಳ್ಳುವುದರ ಬಗ್ಗೆ ಯಾವ ನಿಯಮದಲ್ಲಿ ಕೂಡ ಉಲ್ಲೇಖೀಸಿಲ್ಲ. ಈ ಬಗ್ಗೆ ನಾನು ಹೆಚ್ಚು ಒತ್ತು ನೀಡಿ ಹೇಳುತ್ತೇನೆ ಮತ್ತು ಪ್ರತಿಪಾದಿಸುತ್ತಲೇ ಇರುತ್ತೇನೆ. ಅದನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದರು.

1971ರ ಯುದ್ಧದಲ್ಲಿ ಭಾರತಕ್ಕೆ ಜಯ

ಯಾವುದೇ ಷರತ್ತುಗಳು ಇಲ್ಲದೆ ಬಾಂಗ್ಲಾದೇಶದಲ್ಲಿ ಇದ್ದ  ಪಾಕಿಸ್ಥಾನದ ಅಧಿಕಾರಿಗಳು ಮತ್ತು ಸೈನಿಕರು 1971ರಲ್ಲಿ ಶರಣಾಗಿದ್ದಾರೆ ಎಂದು ಲೋಕಸಭೆಯಲ್ಲಿ ಪ್ರಧಾನಮಂತ್ರಿ­ಗಳಾಗಿದ್ದ ಇಂದಿರಾ ಗಾಂಧಿಯವರು ಪ್ರಕಟಿಸಿದರು. ಇದರಿಂದಾಗಿ ಸದಸ್ಯರು ಹರ್ಷದಿಂದ ಮೇಜುಗಳನ್ನು ಕುಟ್ಟಿ ಸಂತಸ ವ್ಯಕ್ತಪಡಿಸಿದ್ದರು. ಪಕ್ಷಭೇದ ಮರೆತು ಹರ್ಷೋದ್ಗಾರ ವ್ಯಕ್ತಪಡಿಸಿ “ಜೈ ಬಾಂಗ್ಲಾ”, “ಜೈ ಇಂದಿರಾ ಗಾಂಧಿ’, “ಜೈ ಬಾಂಗ್ಲಾದೇಶ’ ಎಂದು ಘೋಷಣೆ ಕೂಗಿದ್ದರು.  ಸದಸ್ಯರೆಲ್ಲರೂ ಎದ್ದುನಿಂತು ಇಂದಿರಾ ಗಾಂಧಿಯವರಿಗೆ ಗೌರವ ಸಲ್ಲಿಸಿದ್ದರು.

ಸಂಸತ್‌ ಭವನದ ಮೇಲೆ ದಾಳಿ

2001ರಲ್ಲಿ ಸಂಸತ್‌ ಭವನದ ಮೇಲೆ ಪಾಕಿಸ್ಥಾನ ಮೂಲದ ಉಗ್ರರು ದಾಳಿಯನ್ನೂ ನಡೆಸಿದ್ದರು. ಎಲ್‌ಇಟಿ ಮತ್ತು ಜೆಇಎಂ ನಡೆಸಿದ್ದ ದಾಳಿಯಲ್ಲಿ ಆರು ಪೊಲೀಸರು, ಇಬ್ಬರು ಸಂಸತ್‌ ಭವನ ಭದ್ರತಾ ಸಿಬಂದಿ ಮತ್ತು ಒಬ್ಬರು ಗಾರ್ಡನರ್‌ ಸೇರಿ ಒಂಬತ್ತು ಮಂದಿ ಹುತಾತ್ಮರಾದರು. ಈ ಘಟನೆ ನಡೆಯುವ ಮುನ್ನ ಉಭಯ ಸದನದ ಕಲಾಪವನ್ನು 40 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಗಿತ್ತು. ಘಟನೆಯಾದಾಗ ಎಲ್‌.ಕೆ.ಆಡ್ವಾಣಿ ಸಹಿತ ಹಲವಾರು ನಾಯಕರು ಸಂಸತ್‌ ಭವನದ ಒಳಗೇ ಇದ್ದರು.

ಜಿಎಸ್‌ಟಿ ಜಾರಿಗೆ ನಡುರಾತ್ರಿ ಕಲಾಪ

ಜಿಎಸ್‌ಟಿ ಜಾರಿಗೆ ತರುವ ನಿಟ್ಟಿನಲ್ಲಿ 2017ರ ಜೂ.30 ರಂದು ಮಧ್ಯರಾತ್ರಿ ಸಂಸತ್‌ನ ಜಂಟಿ ಅಧಿವೇಶನ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅನಂತ ಕುಮಾರ್‌ ಎಲ್ಲ ಸದಸ್ಯರಿಗೆ ಖುದ್ದಾಗಿ ಪತ್ರ ಬರೆದು, ಜಿಎಸ್‌ಟಿ ಮಸೂದೆಯನ್ನು ಅಂಗೀಕಾರ ಮಾಡುವ ನಿಟ್ಟಿನಲ್ಲಿ ಜಂಟಿ ಅಧಿವೇಶನ ಕರೆದಿರುವ ಬಗ್ಗೆ ಪ್ರಸಾವಿಸಿದ್ದರು. 1992ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ಐವತ್ತು  ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಹಾಗೂ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಗೆ ಐದು ದಶಕಗಳು ಸಂದಿದ್ದ ಹಿನ್ನೆಲೆಯಲ್ಲಿ ಸಂಸತ್‌ನ ವಿಶೇಷ ಜಂಟಿ ಅಧಿವೇಶನ ನಡೆಸಲಾಗಿತ್ತು.

ಮಧ್ಯರಾತ್ರಿ ಸ್ವಾತಂತ್ರ್ಯ

ಬಹಳಷ್ಟು ವರ್ಷಗಳ ಕಾಲ ನೀವು ವಿಧಿಯೊಂದಿಗೆ ಹೋರಾಟ ನಡೆಸಿದೆವು. ನಮ್ಮ ಈ ಹಿಂದಿನಶಪಥವನ್ನು ಈಡೇರಿಸುವ ಕಾಲ ಬಂದಿದೆ. ಈ ಮಧ್ಯರಾತ್ರಿ ಇಡೀ ಜಗತ್ತು ನಿದ್ರಿಸುವಾಗ ಭಾರತವು ಸ್ವಾತಂತ್ರ್ಯದೊಂದಿಗೆ ಹೊಸ ಜೀವನ ಆರಂಭಿಸಿದೆ. – ಜವಾಹರ ಲಾಲ್‌ ನೆಹರೂ

ಇದೋ ನೋಡಿ ರಾಜೀನಾಮೆ ಸಲ್ಲಿಸುತ್ತೇನೆ

ನಾನು ಇಲ್ಲಿ ಬಹುಮತಕ್ಕೆ ಸಂಪೂರ್ಣವಾಗಿ ತಲೆ ಬಾಗುತ್ತೇನೆ. ನಾನಿಲ್ಲಿ ಭರವಸೆ ನೀಡುತ್ತಿದ್ದೇನೆ. ನಮ್ಮ ಖಾಲಿ ಕೈನಲ್ಲಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೈಗೊಂಡ ಕೆಲಸಗಳು ಮುಗಿದಿಲ್ಲ. ಹೀಗಾಗಿ ನಾವು ವಿಶ್ರಾಂತಿ ತೆಗೆದುಕೊಳ್ಳಲ್ಲ. –ಅಟಲ್‌ ಬಿಹಾರಿ ವಾಜಪೇಯಿ

ಇಡೀ ದೇಶವೇ ಖುಷಿಯಾಗಿದೆ…

ಈ ಸದನ ಮತ್ತು ಇಡೀ ದೇಶವೇ ಇಂದು ಖುಷಿಯಾಗಿದೆ. ಜಯಕ್ಕಾಗಿ ಬಾಂಗ್ಲಾದೇಶದ ಜನರನ್ನೂ ಶ್ಲಾಘಿಸುತ್ತೇನೆ. ನಾವು ನಮ್ಮ ಸೇನೆ, ನೌಕಾಪಡೆ, ವಾಯು ಸೇನೆ, ಗಡಿ ಭದ್ರತಾ ಪಡೆಯ ಶೌರ್ಯಕ್ಕೆ ಹೆಮ್ಮೆ ಪಡುತ್ತೇನೆ. –ಇಂದಿರಾ ಗಾಂಧಿ

ಹಾಲಿ ಸಂಸತ್‌ ಭವನ ಆಗಲಿದೆ ಮ್ಯೂಸಿಯಂ

ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಕಾಯ್ದೆ, ಕಾನೂನು ರಚಿಸುವಲ್ಲಿ ಸಾಕ್ಷಿಯಾಗಿರುವ ಪ್ರಸಕ್ತ ಸಂಸತ್‌ ಭವನವನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಹೊಸ ಸಂಸತ್‌ ಭವನ ಆರಂಭವಾದ ಮೇಲೆ, ಹಳೆ ಸಂಸತ್‌ ಕಟ್ಟಡವನ್ನು ದುರಸ್ತಿಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ 2021ರ ಮಾರ್ಚ್‌ನಲ್ಲಿ ಹೇಳಿದ್ದರು.   ಅದಕ್ಕೆ ಐತಿಹಾಸಿಕ ಮಹತ್ವವೂ ಇರು ವುದರಿಂದ ಅದನ್ನು ರಕ್ಷಿಸಲಾಗುತ್ತದೆ. ಸಂಸತ್‌ಗೆ ಸಂಬಂಧಿಸಿದ ಕಾರ್ಯಕ್ರಮ ಗಳನ್ನು ಅಲ್ಲಿ ನಡೆಸಲು ಚಿಂತನೆ ನಡೆಸಲಾ ಗುತ್ತಿದೆ. ಇದಲ್ಲದೆ ಒಂದು ಭಾಗವನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲೂ ಉದ್ದೇಶ ಹೊಂದಲಾಗಿದೆ. ಪ್ರವಾಸಿಗರಿಗೆ ಈಗ ಇರುವ ಲೋಕಸಭೆಗೆ ಭೇಟಿ ನೀಡಿ ಅಲ್ಲಿನ ವಿಚಾರಗಳ ಬಗ್ಗೆ ತಿಳಿದು ಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next