Advertisement

Railways ಮೂರು ವಿಭಾಗಗಳ ಸಭೆ: ವಿವಿಧ ಸಮಿತಿ ರಚಿಸಿದ ಸಂಸದ ಕ್ಯಾ| ಚೌಟ

01:17 AM Jul 21, 2024 | Team Udayavani |

ಮಂಗಳೂರು: ಕೊಂಕಣ, ನೈಋತ್ಯ ಮತ್ತು ದಕ್ಷಿಣ ರೈಲ್ವೇ ವಲಯಗಳಿಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ರೈಲ್ವೇ ವ್ಯಾಪ್ತಿಯ ಸಮಸ್ಯೆಗಳನ್ನು ಜನರ ಬೇಡಿಕೆಗಳಿಗೆ ಪೂರಕವಾಗಿ ಸ್ಥಳೀಯವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮುಖ್ಯಸಮಿತಿ ಹಾಗೂ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಹೇಳಿದರು.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮೂರು ರೈಲ್ವೇ ವಿಭಾಗಗಳ ಹಿರಿಯ ಅಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉನ್ನತ ಮಟ್ಟದ ಸಮಿತಿಯಲ್ಲಿ ಸಂಸದರು, ಮೂರು ರೈಲ್ವೇ ವಿಭಾಗಗಳ ಮುಖ್ಯ ಅಧಿಕಾರಿಗಳು, ಸ್ಥಳೀಯ ಮೂವರು ಶಾಸಕರು, ಜಿಲ್ಲಾಧಿಕಾರಿ, ಇಬ್ಬರು ಎಸಿಗಳು, ಪೊಲೀಸ್‌ ಆಯುಕ್ತರು ಹಾಗೂ ಜಿಪಂ ಸಿಇಒ ಅವರು ಇರುತ್ತಾರೆ. ಕಾರ್ಯಕಾರಿ ಸಮಿತಿ ಮೂರು ವಿಭಾಗದ ಹಿರಿಯ ಅಧಿಕಾರಿಗಳು, ಹಿರಿಯ ಎಂಜಿನಿಯರ್‌ಗಳು, ವಿಭಾಗೀಯ ವ್ಯವಸ್ಥಾಪಕರು, ಕೆಸಿಸಿಐ ಸಹಿತ ಇತರ ರೈಲ್ವೇ ಬಳಕೆದಾರರ ಸಂಘಟನೆಗಳಿಂದ ಒಬ್ಬ ಸದಸ್ಯರು ಇರುತ್ತಾರೆ. ಮುಖ್ಯ ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದರೆ, ಅದಕ್ಕೆ ಪೂರಕವಾಗಿ ಕಾರ್ಯಕಾರಿ ಸಮಿತಿ ತಿಂಗಳಿಗೊಮ್ಮೆ ಸಮಾಲೋಚಿಸಲಿದೆ ಎಂದರು.

310 ಕೋ.ರೂ. ವೆಚ್ಚದಲ್ಲಿ ಸೆಂಟ್ರಲ್‌ ನಿಲ್ದಾಣ ಅಭಿವೃದ್ಧಿ
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸುಮಾರು 310 ಕೋಟಿ ರೂ. ಮೊತ್ತದ ಮಾಸ್ಟರ್‌ ಪ್ಲಾನ್‌ ತಯಾರಿ ಸಲಾಗುತ್ತಿದ್ದು, 2025 ಮಾರ್ಚ್‌ ನೊಳಗೆ ಟೆಂಡರ್‌ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭಿಸಲಾಗುವುದು. ಮೂರು ವರ್ಷಗಳಲ್ಲಿ ಇದು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ದಕ್ಷಿಣ ರೈಲ್ವೇಯ ಪಾಲಾ^ಟ್‌ ವಿಭಾಗದ ಡಿಆರ್‌ಎಂ ಅರುಣ್‌ ಚತುರ್ವೇದಿ ಮಾಹಿತಿ ನೀಡಿದರು.

ಪಾಂಡೇಶ್ವರದಲ್ಲಿ ಗೂಡ್‌ಶೆಡ್‌, ಕುಡುಪು ಶಕ್ತಿನಗರ ಬಳಿ ಸಂಪರ್ಕ ರಸ್ತೆ ಮುಂತಾದವು ಚರ್ಚೆಗೆ ಬಂದವು.

Advertisement

ರೈಲ್ವೇ ಬಳಕೆದಾರರ ಪರವಾಗಿ ಮಾತನಾಡಿದ ಹನುಮಂತ ಕಾಮತ್‌, ಸಿಎಸ್‌ಟಿ ಮುಂಬಯಿ – ಮಂಗಳೂರು ರೈಲು ಮಂಗಳೂರು ಸೆಂಟ್ರಲ್‌ಗೆ ಮಂಜೂರಾಗಿದ್ದರೂ, ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಯಾಗುತ್ತಿದೆ. ಅದನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದರು
ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಕೊಂಕಣ ರೈಲ್ವೇಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ. ನಿಕಂ, ನೈಋತ್ಯ ರೈಲ್ವೇ ಮೈಸೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಮಲ್ಲಿಕಾ ಮೊದಲಾದವರಿದ್ದರು.

ಮಹಾಕಾಳಿಪಡ್ಪು ಅಂಡರ್‌ಪಾಸ್‌ ಜನವರಿಗೆ ಪೂರ್ಣ
ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಮೂರು ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ಗರ್ಡರ್‌ ಅಳವಡಿಕೆ ವೇಳೆ ಏಳು ಗಂಟೆಗಳ ಕಾಲ ಆ ಮಾರ್ಗದಲ್ಲಿ ರೈಲುಗಳ ಸಂಚಾರ ನಿಲ್ಲಿಸಬೇಕಾಗುತ್ತದೆ. ಅಲ್ಲಿ ಬಾಕ್ಸ್‌ಗಳನ್ನು ರಚನೆ ಮಾಡಲು ಸ್ಥಳಾವಕಾಶದ ಕೊರತೆಯಿಂದ ತೊಂದರೆ ಆಗಿದೆ. ಜನವರಿಯೊಳಗೆ ಕಾಮಗಾರಿ ಮುಗಿಸಲಾಗುವುದು. ಸಾಧ್ಯವಾದಲ್ಲಿ ಒಂದು ಲೇನ್‌ ಬೇಗ ಮುಗಿಸುವ ಮೂಲಕ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣ್‌ ಚತುರ್ವೇದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next