ನವದೆಹಲಿ:ಸಂಸತ್ ಭವನದ ಕ್ಯಾಂಟೀನ್ ಗೆ ನೀಡುತ್ತಿರುವ ಸಬ್ಸಿಡಿಯನ್ನು ರದ್ದುಗೊಳಿಸಲು ಉಭಯ ಸದನಗಳ ಎಲ್ಲಾ ಸಂಸದರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಸಂಸತ್ ಭವನದ ಕ್ಯಾಂಟೀನ್ ನಲ್ಲಿರುವ ಎಲ್ಲಾ ಉಪಹಾರ, ಊಟದ ಸಬ್ಸಿಡಿಯನ್ನು ರದ್ದುಗೊಳಿಸಲು ಆರ್ಥಿಕ ಸಲಹಾ ಸಮಿತಿ(ಬಿಎಸಿ) ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಪಕ್ಷಗಳ ಸಂಸದರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದೆ.
ಎಲ್ಲಾ ಸಂಸದರ ಒಮ್ಮತದ ಅಭಿಪ್ರಾಯದ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರವೇ ಜಾರಿಯಾಗುವಂತೆ ಸಂಸತ್ ಕ್ಯಾಂಟೀನ್ ಸಬ್ಸಿಡಿ ಅಂತ್ಯಗೊಳ್ಳಲಿದ್ದು, ಇನ್ಮುಂದೆ ಫುಡ್ ಐಟಂ ಕ್ರಮಬದ್ಧ ದರದಲ್ಲಿಯೇ ಲಭ್ಯವಾಗಲಿದೆ ಎಂದು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಈವರೆಗೆ ಸಂಸತ್ ಕ್ಯಾಂಟೀನ್ ನಲ್ಲಿ ಟೀ, ಕಾಫಿಗೆ 5 ರೂಪಾಯಿ, ಬ್ರೆಡ್ ಬಟರ್ 6 ರೂಪಾಯಿ, ವಡಾಕ್ಕೆ 12 ರೂಪಾಯಿ, ಕಟ್ಲೆಟ್ ಗೆ 18 ರೂಪಾಯಿ, ಕೇಸರಿಬಾತ್ 24 ರೂಪಾಯಿ, ವೆಜ್ ತಾಲಿಗೆ 35 ರೂಪಾಯಿ, ವೆಜ್ ಕರಿಗೆ 7 ರೂಪಾಯಿ, ದಾಲ್ ಗೆ 5 ರೂಪಾಯಿ, ಚಪಾತಿಗೆ 2 ರೂಪಾಯಿ, ಸಲಾಡ್ ಗೆ 9 ರೂಪಾಯಿ, ಚಿಕನ್ ಕರ್ರಿಗೆ 50 ರೂಪಾಯಿ, ಚಿಕನ್ ಬಿರಿಯಾನಿಗೆ 65 ರೂಪಾಯಿ, ಮಟನ್ ಕರ್ರಿಗೆ 40 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು.
ಸಂಸದರ ಸಂಸತ್ ಭವನದ ಕ್ಯಾಂಟೀನ್ ಗೆ ಬರೋಬ್ಬರಿ 17 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂಬ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿತ್ತು.