ಮೈಸೂರು: ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮೈಸೂರು ನಗರದ ಪುರಭವನದ ಬೇಸ್ಮೆಂಟ್ ಪಾರ್ಕಿಂಗ್ ಕಟ್ಟಡ ಮತ್ತು ಹೊರಾಂಗಣ ಅಭಿವೃದ್ಧಿ ಅಪೂರ್ಣ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದರು.
ಸೋಮವಾರ ಮಧ್ಯಾಹ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಅಪೂರ್ಣ ಕಾಮಗಾರಿ ಪರಿಶೀಲಿಸಿದ ಅವರು, ಇಂಥ ದೊಡ್ಡ ಮಟ್ಟದ ಕಾಮಗಾರಿಗಳ ನಿರ್ಲಕ್ಷ್ಯ ಸಲ್ಲದು. ಕೂಡಲೇ ಉಳಿಕೆ ಕಾಮಗಾರಿಗೆ ಟೆಂಡರ್ ಕರೆದು ಪೂರ್ತಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರಸು ರಸ್ತೆ, ಅಶೋಕ ರಸ್ತೆ ಹಾಗೂ ಸಯ್ನಾಜಿ ರಾವ್ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಪಾರ್ಕಿಂಗ್ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ 2011-12ರಲ್ಲಿ 18.28 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಜೊತೆಗೆ ಕೋರ್ಟ್‌ನಲ್ಲಿ ಪ್ರಕರಣವಿದೆ ಎಂದು ಪಾಲಿಕೆ ಎಂಜಿನಿಯರ್‌ಗಳು ಸಚಿವರಿಗೆ ಮಾಹಿತಿ ನೀಡಿದರು.
ಪುರಭವನದ ನೆಲಮಹಡಿಯ ವಿಶಾಲ ಪ್ರದೇಶದಲ್ಲಿ 600 ವಾಹನಗಳ ನಿಲುಗಡೆ ಹಾಗೂ ಒಂದು ಆ್ಯಂಪಿ ಥಿಯೇಟರ್ ನಿರ್ಮಾಣದ ಯೋಜನೆ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು, ಇಡೀ ಪಾರ್ಕಿಂಗ್ ವ್ಯಾಪ್ತಿಯಲ್ಲಿ ಸಂಚರಿಸಿ ಹಾಲಿ ಇರುವ ಕಟ್ಟಡದ ಸದೃಢತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇದಕ್ಕೆ ಕೆಆರ್‌ಎಸ್‌ನ ಕರ್ನಾಟಕ ತಾಂತ್ರಿಕ ಸಂಶೋಧನಾ ಕೇಂದ್ರದಿಂದ ಸದೃಢತೆ ವರದಿಯನ್ನೂ ಪಡೆದಿದ್ದಾಗಿ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ :ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಯದುವೀರ್ ಭೇಟಿ
ಕಾಮಗಾರಿಯನ್ನು ಟೆಂಡರ್ ಮಾಡಿ, ಅದಕ್ಕೆ ತಮ್ಮಿಂದ ಆಗಬೇಕಾದ ಅನುಕೂಲವನ್ನು ಮಾಡಿಕೊಡುವುದಾಗಿ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಲ್ಲದೆ, ಪಾರ್ಕಿಂಗ್ ವ್ಯವಸ್ಥೆ ಒಂದೇ ಕಡೆ ಸ್ಥಳಾಂತರವಾದರೆ ರಸ್ತೆಗಳು ಸಹ ವಿಶಾಲವಾಗಿ ಕಾಣುವುದರ ಜೊತೆಗೆ ನಗರವೂ ಸುಂದರವಾಗಿ ರೂಪುಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈ ವೇಳೆ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಬಿ. ನಾಗರಾಜು ಸೇರಿದಂತೆ ಮತ್ತಿತರರಿದ್ದರು.