Advertisement

ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿಲ್ಲ

03:51 PM Dec 08, 2017 | |

ವಿಟ್ಲ : ಇಲ್ಲಿಯ ಪೇಟೆಯಲ್ಲಿ ವಾಹನ ಜಂಜಾಟ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಗಾಗಿ ಪಟ್ಟಣ ಪಂಚಾಯತ್‌ ನಾಮ ಫಲಕಗಳನ್ನು ಅಳವಡಿಸಿದೆ. ಆದರೆ ಕಾನೂನು ಕ್ರಮ ಇನ್ನೂ ಜಾರಿಗೆ ಬಂದಿಲ್ಲ. ಹಾಗಾಗಿ ಸಮಸ್ಯೆ ಮುಂದುವರಿದಿದ್ದು, ಪಾದಚಾರಿಗಳಿಗೆ ತೊಂದರೆಯಾಗಿದೆ. ರಸ್ತೆ ಸಂಚಾರ ಅಸ್ತವ್ಯಸ್ತ ಸಾಮಾನ್ಯ ಎಂದು ನಾಗರಿಕರು ದೂರುತ್ತಾರೆ.

Advertisement

ವಿಟ್ಲ ನಾಲ್ಕು ಮಾರ್ಗ ಸೇರುವ ಜಂಕ್ಷನ್‌. ಇಲ್ಲಿ ಒಂದು ರಸ್ತೆಯಿಂದ ಇನ್ನೊಂದಕ್ಕೆ ವಾಹನಗಳು ಸರಾಗವಾಗಿ ತಿರುಗಿಕೊಳ್ಳುತ್ತವೆ. ಜಂಕ್ಷನ್‌ನಲ್ಲಿ ಬ್ಲಾಕ್‌ ಆಗುತ್ತಿಲ್ಲ. ಇಲ್ಲಿಯ ಜಂಕ್ಷನ್‌ ಮತ್ತು ಹಳೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಹಾಗೂ ಪುತ್ತೂರಿಗೆ ಸಾಗುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತವೆ. ಇದರಿಂದ ಮುಖ್ಯ ರಸ್ತೆ ಬ್ಲಾಕ್‌ ಆಗುತ್ತಿದೆ.

ವಿದ್ಯುತ್‌ ಕಂಬ ಸ್ಥಳಾಂತರ
ವಿಟ್ಲ-ಪುತ್ತೂರು ರಸ್ತೆ ವಿಸ್ತರಣೆಗೊಂಡಿದ್ದರೂ ಅಡ್ಡಿಯಾದ ಏಳು ವಿದ್ಯುತ್‌ ಕಂಬಗಳನ್ನು ಸ್ಥಳಾಂತರಗೊಳಿಸದ ಕಾರಣ ಕಾಮಗಾರಿ ಮಾತ್ರ ಪೂರ್ತಿಯಾಗಿಲ್ಲ. ಆದರೆ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ಅವರು ಕಂಬಗಳ ಸ್ಥಳಾಂತರಕ್ಕೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ, ಲೋಕೋಪಯೋಗಿ ಇಲಾಖೆಗೆ ಕಳುಹಿಸಿ ಕೊಡಲು ಆದೇಶಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಂದಾಜುಪಟ್ಟಿ ತಲುಪಿದ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಿಕ್ಷಾ ಪಾರ್ಕಿಂಗ್‌
 ಇಲ್ಲಿಯ ರಿಕ್ಷಾ ಪಾರ್ಕಿಂಗ್‌ಗೆ ಅಲ್ಲಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹಳೆ ಬಸ್‌ ನಿಲ್ದಾಣದಲ್ಲಿ ಎರಡು ಸಾಲು ರಿಕ್ಷಾ ನಿಲ್ಲುವುದಕ್ಕೆ ಅವಕಾಶವಿದೆ. ಅದೇ ರೀತಿ ವಿಟ್ಲ ಪೊಲೀಸ್‌ ಠಾಣೆ ಮುಂದೆ, ದೇವಸ್ಥಾನ ರಸ್ತೆ ಮುಂದೆ, ಮಂಗಳೂರು ರಸ್ತೆಯಲ್ಲಿ, ಅಡ್ಡದಬೀದಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅಡ್ಡದ ಬೀದಿಯ ಮುಂದೆ ನೋ ಪಾರ್ಕಿಂಗ್‌ ಇರುವ ಸ್ಥಳದಲ್ಲಿ ರಿಕ್ಷಾ ಚಾಲಕರು ಅಡ್ಡವಾಗಿ ನಿಲ್ಲಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ವಿಜಯ ಬ್ಯಾಂಕ್‌ ಮುಂದೆಯೂ ಇರುವ ಈ ಸಮಸ್ಯೆಯನ್ನು ಬಗೆಹರಿಸಬೇಕೆಂಬುದು ಅವರ ಆಗ್ರಹ.

ಬಸ್‌ ನಿಲ್ದಾಣದಲ್ಲಿ ಹೊಂಡ
ವಿಟ್ಲ ಹಳೆ ಬಸ್‌ ನಿಲ್ದಾಣದಲ್ಲಿ ಹೊಂಡಗಳು ಜಾಸ್ತಿಯಾಗಿವೆ. ಪೂರ್ತಿ ಡಾಮರು ಹಾಕಿ ಸುಸಜ್ಜಿತಗೊಳಿಸಬೇಕೆಂದು ವಾಹನ ಚಾಲಕ, ಮಾಲಕರು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಬಸ್‌ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next