Advertisement

ಲಾಭ ತಾರದ ಮಾರ್ಕೆಟ್‌ಗಳ ಜಾಗದಲ್ಲಿ ಪಾರ್ಕಿಂಗ್‌ ಲಾಟ್‌

12:39 PM Mar 08, 2017 | |

ಬೆಂಗಳೂರು: ಬಿಬಿಎಂಪಿಗೆ ಯಾವುದೇ ಆದಾಯ ತರದಂತಹ 13 ಅನುಪಯುಕ್ತ ಮಾರುಕಟ್ಟೆಗಳನ್ನು ನೆಲಸಮಗೊಳಿಸಿ, ಆ ಜಾಗದಲ್ಲಿ ಬಹುಮಹಡಿ ವಾಹನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌ ತಿಳಿಸಿದ್ದಾರೆ. 

Advertisement

ನಗರದ 50ರಿಂದ 60 ವರ್ಷಗಳಷ್ಟು ಹಳೆಯದಾದ ನಿಷ್ಪ್ರಯೋಜಕವಾಗಿರುವ ಕೃಷ್ಣರಾಜೇಂದ್ರ ಮಟನ್‌ ಮಾರುಕಟ್ಟೆ, ಕಬ್ಬನ್‌ಪೇಟೆ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 15 ರಿಂದ 20 ವರ್ಷಗಳಿಂದ ಯಾವುದೇ ಮಾರುಕಟ್ಟೆ ಚಟುವಟಿಕೆಗಳನ್ನು ನಡೆಸದೆ ಅಕ್ಷರಶಃ ಪಾಳುಬಿದ್ದಿರುವ ಪಾಲಿಕೆಗೆ ಸೇರಿದ ಈ ಮಾರುಕಟ್ಟೆಗಳನ್ನು ನೆಲಸಮಗೊಳಿಸಿ ಅಲ್ಲಿ ವಾಹನ ನಿಲ್ದಾಣವನ್ನಾಗಿ ಪರಿವರ್ತಿಸಲು ಪ್ರಸಕ್ತ ಪಾಲಿಕೆ ಬಜೆಟ್‌ನಲ್ಲಿ ಹಣ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

“ನಗರದಲ್ಲಿ ಪಾಳುಬಿದ್ದಿರುವ 13 ಮಾರುಕಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಎಲ್ಲ ಮಾರುಕಟ್ಟೆಗಳ ಸುತ್ತ ವಾಹನದಟ್ಟಣೆ ಹೆಚ್ಚಾಗಿದೆ. ಅತ್ಯಂತ ಕಿರಿದಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಮಾರುಕಟ್ಟೆಗಳನ್ನು ವಾಹನ ನಿಲ್ದಾಣಗಳನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ,” ಎಂದರು. 

ಕೃಷ್ಣರಾಜೇಂದ್ರ ಮಟನ್‌ ಮಾರುಕಟ್ಟೆಯಲ್ಲಿ 182 ಅಂಗಡಿಗಳಿಂದ ಪಾಲಿಕೆಗೆ ಕೇವಲ 99,812 ರೂ. ಮಾಸಿಕ ಬಾಡಿಗೆ ಬರುತ್ತಿದೆ. ಕಬ್ಬನ್‌ ಪೇಟೆ ಮಾರುಕಟ್ಟೆಯಲ್ಲಿ 59 ಅಂಗಡಿಗಳಿಂದ ಕೇವಲ 19,720 ರೂ. ಸಂಗ್ರಹವಾದರೆ, ಬಳ್ಳಾಪುರ ಮಾರುಕಟ್ಟೆಯಲ್ಲಿರುವ 52 ಅಂಗಡಿಗಳಿಂದ ಕೇವಲ 6,256 ರೂ. ಬಾಡಿಗೆ ಸಂಗ್ರಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಳ್ಳಾಪುರ ಮಾರುಕಟ್ಟೆಯಲ್ಲಿ ಪಾರ್ಕಿಂಗ್‌ಗೆ 5 ರೂ. ಚೀಟಿ ನೀಡಿ 10 ರೂ.ಗಳನ್ನು ಸಂಗ್ರಸಲಾಗುತ್ತಿದೆ. ಇದು ಸಾಬೀತಾದರೆ ಅಂತಹ ಅಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗುವುದು ಎಂದರು. ಬಹುತೇಕ ಮಾರುಕಟ್ಟೆಗಳಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಅಲ್ಲದೆ, ಅಲ್ಲಿರುವ ಎಷ್ಟೋ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಇರುವ ಕೆಲವೇ ಅಂಗಡಿಗಳಿಂದ ಕಡಿಮೆ ಬಾಡಿಗೆ ಸಂಗ್ರಹವಾಗುತ್ತಿರುವ ಅಂಶವನ್ನು ಸಮಿತಿ ಪತ್ತೆಹಚ್ಚಿತು.

Advertisement

ಆರಂಭದಲ್ಲಿ ಕಬ್ಬನ್‌ ರಸ್ತೆಯ ಎಂ.ಕೆ. ನಾಗಣ್ಣ ಮಾರುಕಟ್ಟೆಗೆ ಭೇಟಿ ನೀಡಿದಾಗ, ಅಂಗಡಿಯನ್ನೇ ಮನೆಯನ್ನಾಗಿ ಪರಿವರ್ತಿಸಿ ವಾಸ ಮಾಡುತ್ತಿದ್ದರು. ಗ್ರಾಹಕರ ಸಂಖ್ಯೆಯೂ ತೀರಾ ವಿರಳವಾಗಿತ್ತು. ಅದೇ ರೀತಿ, ಕಬ್ಬನ್‌ ಮುಖ್ಯರಸ್ತೆಯ ಮಟನ್‌ ಮಾರುಕಟ್ಟೆಯಲ್ಲಿ ಕೆಲವರು ಪಾಲಿಕೆಗೆ ಬಾಡಿಗೆಯನ್ನೇ ಪಾವತಿಸದಿರುವುದು ಕಂಡುಬಂದಿತು. 

Advertisement

Udayavani is now on Telegram. Click here to join our channel and stay updated with the latest news.

Next