ಗುಡಿಬಂಡೆ: ಪಟ್ಟಣ ಈಗ ತಾನೆ ಬೆಳವಣಿಗೆ ಹೊಂದುತ್ತಿದ್ದು, ವಾಹನಗಳ ಬಳಕೆದಾರರ ಸಂಖ್ಯೆ ಪ್ರತಿವರ್ಷವೂ ದ್ವಿಗುಣಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಪಪಂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಅಲ್ಲದೆ, ಪಾರ್ಕಿಂಗ್ ಮಾಡಲು ಸಾಕಷ್ಟು ಜಾಗವಿದ್ದರೂ ಜನ ಉಳಿದವರು ಹೋಗಲಿ, ಬಿಡಲಿ ಆ ಚಿಂತೆ ನಮಗಿಲ್ಲ ಎಂದು ವಾಹನಗಳನ್ನು ನಡುರಸ್ತೆ ನಿಲ್ಲಿಸುತ್ತಿದ್ದಾರೆ. ಇದರಿಂದ ಇತರೆ ವಾಹನ ಸವಾರರಿಗಷ್ಟೇ ಅಲ್ಲ, ಪಾದಚಾರಿಗಳಿಗೂ ತೀವ್ರ ತೊಂದರೆಯಾಗಿದೆ.
ಎರಡು ಮೂರು ವರ್ಷಗಳಿಂದ ಗುಡಿಬಂಡೆ ಪಟ್ಟಣದಲ್ಲಿ ಪಾರ್ಕಿಂಗ್ ತಲೆನೋವು ಕಾಡುತ್ತಿದೆ. ಮುಖ್ಯರಸ್ತೆ ಅಗಲೀಕರಣವಾದ್ರೂ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ರಸ್ತೆ ಇಕ್ಕೆಲಗಳಲ್ಲಿ, ಫುಟ್ಪಾತ್‌ನಲ್ಲಿ ಬೈಕ್, ಕಾರ್ ಪಾರ್ಕಿಂಗ್ ಸಾಮಾನ್ಯ. ಪಾದಚಾರಿಗಳೇ ಉಸಿÃನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ತಾಲೂಕಿನಿಂದ ರೈತರು, ಸಾಮಾನ್ಯ ಜನರು ಕೃಷಿ ಪರಿಕರಗಳು, ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಲು, ಸರ್ಕಾರಿ ಕಚೇರಿಯಲ್ಲಿನ ಕೆಲಸದ ಮೇಲೆ ಪಟ್ಟಣಕ್ಕೆ ಬರುತ್ತಾರೆ. ಬೆಳಗ್ಗೆ ಬಂದು ವಾಹನವನ್ನು ಮುಖ್ಯರಸ್ತೆಯಲ್ಲಿ ನಿಲ್ಲಿಸಿ ಹೋದ್ರೆ ಕೆಲಸ ಮುಗಿಸಿಕೊಂಡು ಸಂಜೆಯೇ ತೆಗೆಯುವುದು. ಇದರಿಂದ ಇತರೆ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತದೆ. ಇದು ಬೆಳೆಯುತ್ತಿರುವ ಗುಡಿಬಂಡೆಯಲ್ಲಿ ಓಡಾಡುವ ಪ್ರತಿಯೊಬ್ಬ ಪ್ರಯಾಣಿಕನ ಗಮನಕ್ಕೂ ಬರುವ ಟ್ರಾಫಿಕ್ ಗೋಳು.
ಪಟ್ಟಣದ ಅಭಿವೃದ್ಧಿ ಜತೆಗೆ ಟ್ರಾಫಿಕ್ ಸಮಸ್ಯೆಯೂ ಬಳುವಳಿಯಾಗುತ್ತಿದೆ. ವಾಹನ ಓಡಾಟಕ್ಕೆ ದ್ವಿಪಥವಾದರೂ ಸುಗಮ ಸಂಚಾರ ಕಷ್ಟ. ರಸ್ತೆ ಇಕ್ಕೆಲಗಳಲ್ಲೇ ಅಂಗಡಿ ಮುಂಗಟ್ಟು, ಆಸ್ಪತ್ರೆ, ಸರ್ಕಾರಿ ಕಚೇರಿ, ಹೆಚ್ಚಿನ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ರೂ ಅಲ್ಲಿಯೂ ವಾಹನ ಗಳು ತುಂಬಿರುತ್ತವೆ. ಹೀಗಾಗಿ ರಸ್ತೆಯ ಕಾರು, ಬೈಕ್ ಪಾರ್ಕ್ ಮಾಡಿ ಕೆಲಸ ಕಾರ್ಯಗಳಿಗೆ ತೊಡಗಿಕೊಳ್ಳುತ್ತಾರೆ.
ಒತ್ತುವರಿ: ಕೆಲವು ಕಡೆ ವಾಹನಗಳು ಪಾರ್ಕಿಂಗ್ ಮಾಡುವ ಸ್ಥಳವನ್ನು ಬೀದಿ ಬದಿ ವ್ಯಾಪಾರಿಗಳು, ತರಕಾರಿ ಜ್ಯೂಸ್ ಮಾರಾಟ ಮಾಡುವವರು ಒತ್ತುವರಿ ಮಾಡಿಕೊಂಡಿರುವ ಕಾರಣ ಜನ ರಸ್ತೆಯಲ್ಲೇ ವಾಹನ ನಿಲ್ಲಿಸುವಂತಾಗಿದೆ. ಕಿರಿಕಿರಿ ಆದ್ರೂ ಪಾದಚಾರಿಗಳು ಅನುಸರಿಸಿಕೊಂಡು ಓಡಾಡುತ್ತಿದ್ದಾರೆ.
ಅಂಗಡಿ ಮಾಲಿಕರಿಗೂ ತೊಂದರೆ: ಸಾಮಾನು ಖರೀದಿಸಲು ಅಂಗಡಿ ಬರುವ ಗ್ರಾಹಕರು ವಾಹನವನ್ನು ಅಂಗಡಿ ಮುಂದೆಯೇ ನಿಲ್ಲಿಸಿ, ಒಂದು ಸಣ್ಣ ಕೆಲಸ ಇದೆ, ಮುಗಿಸಿಕೊಂಡು ಬಂದು ವಾಹನ ತೆಗೆದುಕೊಂಡು ಹೋಗುತ್ತೇನೆ, ಅಲ್ಲಿಯವರೆಗೂ ವಾಹನ ಇಲ್ಲೇ ಇರಲಿ ಎಂದು ಹೇಳಿ ಹೋದವರು ಎರಡು ಮೂರು ಗಂಟೆಯಾದ್ರೂ ಬರುವುದಿಲ್ಲ. ಇದರಿಂದ ಅಂಗಡಿ ಮಾಲಿಕರಿಗೂ, ಇತರೆ ವಾಹನಗಳ ಚಾಲಕರಿಗೂ ತೊಂದರೆಯಾಗುತ್ತದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗವೂ ವಾಹನ ಗಳನ್ನು ಮನಬಂದಂತೆ ನಿಲ್ಲಿಸಲಾಗುತ್ತಿದೆ. ನಿತ್ಯ ನೂರಾರು ರೋಗಿಗಳು ಆರೋಗ್ಯ ತಪಾಸಣೆ, ಚಿಕಿತ್ಸೆಗೆಂದು ಬರುತ್ತಾರೆ. ಇಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾರಣ ಆಸ್ಪತ್ರೆ ಮುಂಭಾಗವೇ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪಟ್ಟಣಕ್ಕೆ ಕೆಲಸದ ನಿಮಿತ್ತ ಆಗಮಿಸುವ ಸಾರ್ವಜನಿಕರೂ ಇಲ್ಲೇ ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ. ಇದ ರಿಂದ ಆ್ಯಂಬುಲೆನ್ಸ್ ಹೋಗಲು ಹರಸಾಹಸ ಪಡುವ ಸನ್ನಿವೇಶ ನಿರ್ಮಾಣವಾಗಿದೆ.