Advertisement

KGF: ತಾಲೂಕು ಕಚೇರಿಯಲ್ಲಿ ಪಾರ್ಕಿಂಗ್‌ ಅವ್ಯವಸ್ಥೆ!

04:24 PM Sep 13, 2023 | Team Udayavani |

ಕೆಜಿಎಫ್‌: ತಾಲೂಕು ಆಡಳಿತ ಸೌಧದ ಆವರಣದಲ್ಲಿ ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ದೈನಂದಿನ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆಗೆ ಸಮಸ್ಯೆ ಎದುರಿಸುವಂತಾಗಿದೆ.

Advertisement

ನಗರದ ನ್ಯಾಯಾಲಯ ಸಂಕೀರ್ಣದ ಪಕ್ಕದಲ್ಲಿ 2 ಎಕರೆ ವಿಶಾಲವಾದ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡು ಕಳೆದ 2022ರ ಅಕ್ಟೋಬರ್‌ 27ರಂದು ಕಾರ್ಯಾರಂಭ ಮಾಡಿರುವ ಸುಸಜ್ಜಿತವಾದ ತಾಲೂಕು ಆಡಳಿತ ಸೌಧದ ಬಳಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸಮಸ್ಯೆ ಬಿಗಡಾಯಿಸಿದೆ.

ಹಲವು ಸರ್ಕಾರಿ ಇಲಾಖೆ ಕಾರ್ಯ: ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬಂಗಾರಪೇಟೆ, ಮುಳಬಾಗಿಲು ಮತ್ತು ಕೆಜಿಎಫ್‌ ಮೂರು ತಾಲೂಕುಗಳನ್ನೊಳಗೊಂಡಂತೆ ಅಬಕಾರಿ ಉಪ ವಿಭಾಗ ಕಚೇರಿ ಹಾಗೂ 2023ರ ಏಪ್ರಿಲ್‌ 24ರಿಂದ ನೂತನವಾಗಿ ಕಾರ್ಯಾರಂಭ ಮಾಡಿರುವ ಉಪ ನೊಂದಣಾಧಿಕಾರಿಗಳ ಕಚೇರಿ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.

ವಾಹನ ಸವಾರರಿಗೆ ಸಮಸ್ಯೆ: ಈ ಮೊದಲು ತಾಲೂಕು ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ಸಿಕ್ಕ ಸಿಕ್ಕಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು. ಆದರೆ, ಕಳೆದ ತಿಂಗಳು ನೂತನ ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿಕೊಂಡ ನಾಗವೇಣಿ ಅವರು ಕಚೇರಿಯ ಮುಂಭಾಗದಲ್ಲಿ ಸಿಕ್ಕ ಸಿಕ್ಕಲ್ಲಿ ಗಾಡಿ ನಿಲ್ಲಿಸುವುದಕ್ಕೆ ಬ್ರೇಕ್‌ ಹಾಕಿದ್ದರಿಂದ ಆವರಣದಲ್ಲಿ ಪಾರ್ಕಿಂಗ್‌ ಸಮಸ್ಯೆ ನಿವಾರಣೆಯಾಗಿದೆಯಾದರೂ, ಕಚೇರಿಯ ಗೇಟ್‌ನ ಮುಂಭಾಗದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಜನರು ಮನಬಂದಂತೆ ಗಾಡಿ ನಿಲ್ಲಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆಯುಂಟಾಗಿದೆ ಎನ್ನಲಾಗಿದೆ.

ನಿಯಮ ಉಲ್ಲಂಘಿಸಿದರೆ ದಂಡ: ಗೇಟ್‌ನ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸಬಾರದು. ನಿಯಮ ಉಲ್ಲಂಘಿಸಿದಲ್ಲಿ ದ್ವಿಚಕ್ರ ವಾಹನಗಳಿಗೆ 200 ರೂ. ಮತ್ತು ನಾಲ್ಕು ಚಕ್ರ ವಾಹನಗಳಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ಬ್ಯಾನರ್‌ ಹಾಕಿದ್ದರೂ, ಜನರು ಕ್ಯಾರೆ ಎನ್ನದೇ ಗೇಟ್‌ನ ಮುಂಭಾಗದಲ್ಲಿ ಗಾಡಿ ನಿಲ್ಲಿಸುತ್ತಿದ್ದಾರೆ.

Advertisement

ಮೂಲಸೌಕರ್ಯ ಮರೀಚಿಕೆ: ಆಡಳಿತ ಸೌಧದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ನೀರಿಗಾಗಿ ಕಚೇರಿಯ ಹೊರಗಿನ ಅಂಗಡಿ ಗಳ ಬಳಿಗೆ ಹೋಗಿ ನೀರನ್ನು ದುಡ್ಡು ಕೊಟ್ಟು ಕೊಂಡುಕೊಂಡು ಕುಡಿಯಬೇಕಾದ ಅನಿವಾ ರ್ಯತೆ ಎದುರಾಗಿದೆ. ಆಡಳಿತ ಸೌಧದ ಮುಂಭಾಗ ಸುಮಾರು 2 ಎಕರೆ ವಿಶಾಲವಾದ ಪ್ರದೇಶವಿ ದ್ದರೂ, ಕಚೇರಿಯ ಹೊರಗೆ ಸಾರ್ವಜನಿಕ ಶೌಚಾಲಯ ಗಳಿಲ್ಲದೇ ಇರುವುದರಿಂದ ಸಾರ್ವಜನಿಕರು ಮತ್ತು ಮಹಿಳೆಯರು ಕಿರಿಕಿರಿಯನ್ನು ಅನುಭವಿಸುವಂತಾಗಿದೆ.

ಕುಳಿತುಕೊಳ್ಳಲು: ಜನರಿಗೆ ಆಸನ ಇಲ್ಲ ಒಂದೇ ಸೂರಿನಡಿಯಲ್ಲಿ ಹತ್ತು ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವು ದರಿಂದ ಸಹಜವಾಗಿಯೇ ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆಂದು ನೂರಾರು ಜನರು ಬಂದು ಹೋಗುತ್ತಿದ್ದು, ಆಡಳಿತ ಸೌಧದ ಆವರಣದ ಲ್ಲಾಗಲಿ, ಉಪ ನೊಂದಣಾಧಿಕಾರಿಗಳ ಕಚೇರಿ ಆವರಣದಲ್ಲಾಗಲಿ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲದೇ ಇರುವುದರಿಂದ ನಾಗರಿಕರು ಪರದಾಡುವಂತಾಗಿದೆ.

ತಾಲೂಕು ಆಡಳಿತ ಸೌಧದ ಆವರಣದಲ್ಲಿ ವಾಹನಗಳ ನಿಲುಗಡೆಗೆ ಬೇಕಾದಷ್ಟು ಸ್ಥಳಾವಕಾಶವಿದ್ದು, ಪ್ರತ್ಯೇಕ ಶೆಡ್‌ ನಿರ್ಮಿಸಿದಲ್ಲಿ ಸಾರ್ವಜನಿಕರು ಯಾರಿಗೂ ತೊಂದರೆಯಾಗದಂತೆ ತಮ್ಮ ವಾಹನ ನಿಲ್ಲಿಸಿಕೊಳ್ಳಲು ಅನುವಾಗುತ್ತದೆ. ಸಂಬಂಧಪಟ್ಟ ವರು ಇತ್ತ ಗಮನ ಹರಿಸಬೇಕಿದೆ. – ಶೇಖರಪ್ಪ, ಹಿರಿಯ ನಾಗರಿಕ

ತಾಲೂಕು ಆಡಳಿತ ಸೌಧದ ಆವರ ಣದಲ್ಲಿ ದ್ವಿಚಕ್ರ ವಾಹನಗಳ ನಿಲುಗ ಡೆಗೆ ಸ್ಥಳಾವಕಾಶವನ್ನು ಗುರುತಿಸಲಾ ಗಿದ್ದು, ಮುಂದಿನ ನಾಲ್ಕೈದು ದಿನದಲ್ಲಿ ಶೆಡ್‌ನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುವು ಮಾಡಿ ಕೊಡಲಾಗುವುದು. – ನಾಗವೇಣಿ, ತಹಶೀಲ್ದಾರ್‌

-ನಾಗೇಂದ್ರ ಕೆ. 

 

Advertisement

Udayavani is now on Telegram. Click here to join our channel and stay updated with the latest news.

Next