Advertisement
ಬಿಬಿಎಂಪಿ ಹಾಗೂ ಬಿಎಂಟಿಸಿ ವತಿಯಿಂದ ನಿರ್ಮಾಣಗೊಂಡಿರುವ ಬಹುಮಹಡಿ ವಾಹನ ನಿಲುಗಡೆ ತಾಣಗಳ ಪರಿಣಾಮಕಾರಿ ಬಳಕೆ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರಕ್ಕಾಗಿ ನಗರದ ಸಂಚಾರ ಪೊಲೀಸರು ಇಂತಹ ಕ್ರಮಕ್ಕೆ ಮುಂದಾಗಿದ್ದು, ಅದರಂತೆ ಇನ್ನು ಮುಂದೆ ವಾಹನ ನಿಲುಗಡೆ ತಾಣಗಳ 500 ಮೀಟರ್ ಸುತ್ತಳತೆಯ ವ್ಯಾಪ್ತಿಯ ರಸ್ತೆಬದಿ ವಾಹನ ನಿಲುಗಡೆ ನಿಷೇಧಿಸಿದೆ.
Related Articles
Advertisement
ಬಹಳಷ್ಟು ಸಾರ್ವಜನಿಕರು ವಾಹನಗಳನ್ನು ರಸ್ತೆಬದಿಯಲ್ಲೇ ನಿಲುಗಡೆ ಮಾಡುತ್ತಿದ್ದಾರೆ. ಕೆ.ಆರ್.ಮಾರುಕಟ್ಟೆಯ ನೆಲಮಹಡಿಯಲ್ಲಿ 70 ಕಾರು ಹಾಗೂ 300 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದ್ದರೂ, ನಿತ್ಯ 25 ಕಾರು ಹಾಗೂ 150 ಬೈಕ್‌ಗಳಷ್ಟೇ ನಿಲುಗಡೆಯಾಗುತ್ತಿವೆ ಎಂದು ತಿಳಿದುಬಂದಿದೆ.
ಮುಖ್ಯ ಕಾರ್ಯದರ್ಶಿಗಳಿಂದ ಸೂಚನೆ: ನಗರದಲ್ಲಿ ವಿವಿಧ ಸಮಸ್ಯೆಗಳ ಕುರಿತು ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಗರದಲ್ಲಿರುವ ಬಹುಮಹಡಿ ವಾಹನ ನಿಲುಗಡೆ ತಾಣಗಳ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯ ರಸ್ತೆಬದಿ ನಿಲುಗಡೆ ನಿಷೇಧಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಹೆಚ್ಚುವರಿ ಸಂಚಾರ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ. ಅದರಂತೆ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕರಲ್ಲಿ ಗೊಂದಲ: ಹೆಚ್ಚುವರಿ ಸಂಚಾರ ಪೊಲೀಸ್ ಆಯುಕ್ತರು ಪಾರ್ಕಿಂಗ್ ತಾಣಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ ನಿಯಮ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅದರಂತೆ ಯಶವಂತಪುರ, ವಿಜಯನಗರ, ಕೋರಮಂಗಲ ಸೇರಿದಂತೆ ಹಲವೆಡೆ ನಿಯಮ ಜಾರಿಗೊಳಿಸಲಾಗುತ್ತಿದೆ. ಆದರೆ, ಕೆ.ಆರ್.ಮಾರುಕಟ್ಟೆ, ಜೆ.ಸಿ.ನಗರ ಸೇರಿದಂತೆ ಹಲವೆಡೆ ದಿಢೀರ್ ನಿಯಮ ಜಾರಿಗೊಳಿಸಿದ್ದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ದಿಢೀರ್ ಅನುಷ್ಠಾನ ಕಷ್ಟಕರ ಎಂದು ಸಂಚಾರ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.
ಬಹುಮಹಡಿ ವಾಹನ ನಿಲುಗಡೆ ತಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ರಸ್ತೆಬದಿ ವಾಹನ ನಿಲುಗಡೆ ನಿಷೇಧಿಸುವಂತೆ ಮುಖ್ಯಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ. ಅದರಂತೆ ತಾಣಗಳಿರುವ ಕಡೆಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಲಾಗುತ್ತಿದೆ. -ಹಿತೇಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಬಿಬಿಎಂಪಿ ವಾಹನ ನಿಲುಗಡೆ ತಾಣಗಳು
* ಮಹಾರಾಜಾ ಶಾಪಿಂಗ್ ಕಾಂಪ್ಲೆಕ್ಸ್ (30 ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ) (60ಕಾರು ಹಾಗೂ 300 ಬೈಕ್‌ಗಳಿಗೆ ಅವಕಾಶ)
* ಕೆ.ಆರ್.ಮಾರುಕಟ್ಟೆ (60 ಕಾರು ಹಾಗೂ 300 ಬೈಕ್‌ಗಳಿಗೆ ಅವಕಾಶ)
* ಜೆ.ಸಿ.ನಗರ (150 ಕಾರು ಹಾಗೂ 150 ಬೈಕ್‌ಗಳ ನಿಲುಗಡೆ ಅವಕಾಶ) ಬಿಎಂಟಿಸಿ ವಾಹನ ನಿಲುಗಡೆ ತಾಣಗಳು
* ಯಶವಂತಪುರ
* ವಿಜಯನಗರ
* ಶಿವಾಜಿನಗರ
* ದೊಮ್ಮಲೂರು
* ಶಾಂತಿನಗರ
* ಜಯನಗರ
* ಕೆಂಗೇರಿ
* ಬನಶಂಕರಿ
* ಕೋರಮಂಗಲ
(ಎಲ್ಲ ಪಾರ್ಕಿಂಗ್ ತಾಣಗಳಲ್ಲಿ 100 ಕಾರುಗಳು ಹಾಗೂ 300 ದ್ವಿಚಕ್ರ ವಾಹನಗಳ ನಿಲುಗಡೆ ಅವಕಾಶವಿದೆ) * ವೆಂ.ಸುನೀಲ್‌ಕುಮಾರ್