Advertisement

ಪರ್ಕಳ ರಾ.ಹೆ.-169ಎ: ಇನ್ನೂ ಮುಗಿಯದ ಕಾಮಗಾರಿ

12:53 AM Jun 16, 2020 | Sriram |

ಉಡುಪಿ: ಮಣಿಪಾಲ ಮುಖ್ಯ ಪೇಟೆಯಿಂದ ಕೇವಲ ಎರಡೇ ಕಿ.ಮೀ. ದೂರದಲ್ಲಿರುವ ಪರ್ಕಳ ಪೇಟೆಯ ನಿವಾಸಿಗಳು ಪ್ರತಿ ಮಳೆಗಾಲ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಪರ್ಕಳ ಪೇಟೆ ಬಸ್‌ ನಿಲ್ದಾಣದ ಮೂಲಕ ರಾ.ಹೆ. 169ಎ ಹಾದು ಹೋಗುತ್ತದೆ. ಎಲ್ಲ ಕಡೆ ಕಾಮಗಾರಿ ಪೂರ್ಣಗೊಂಡಿದ್ದರೂ, ಈ ಭಾಗದಲ್ಲಿ ಇನ್ನೂ ಪೂರ್ತಿಯಾಗಿಲ್ಲ.

ಜಾಗದ ಸಮಸ್ಯೆ

ರಸ್ತೆ ವಿಸ್ತರಣೆಗೆ ಜಾಗದ ವಿಚಾರವಾಗಿ ಸಮನ್ವಯದ ಕೊರತೆ, ಜಾಗದ ತಕರಾರುಗಳಿವೆ. ಇವೆಲ್ಲ ಸಮಸ್ಯೆಗಳು ನಿವಾರಣೆಯಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

Advertisement

ಅಗಲ ಕಿರಿದಾದ ರಸ್ತೆ
ಪರ್ಕಳ ಪೇಟೆಯ ರಸ್ತೆ ಅಗಲ ಕಿರಿದಾಗಿದ್ದು , ಪ್ರತಿ ವರ್ಷ ಮಳೆಗಾಲದಲ್ಲಿ ಬಸ್‌ ನಿಲ್ದಾಣದ ಸಮೀಪ ಹೊಂಡಗಳಿಂದ ಕೂಡಿರುತ್ತದೆ.

ವಾಹನ ಸವಾರರ ಸಂಕಷ್ಟ
ಜೋರಾಗಿ ಮಳೆ ಸುರಿದಾಗ ಪರ್ಕಳ ಕೆನರಾ ಬ್ಯಾಂಕ್‌ ಎದುರು ಮಣ್ಣು ಹಾಕಿದ ರಸ್ತೆಯಲ್ಲಿ ಕೆಸರು ತುಂಬಿ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಮಾರ್ಗವಾಗಿ ತೆರಳುವ ಲಘು ವಾಹನ ಮತ್ತು ದ್ವಿಚಕ್ರ ವಾಹನಗಳ ಸವಾರರು ಹಲವು ಬಾರಿ ಜಾರಿ ಬೀಳುತ್ತಿದ್ದಾರೆ. ಸಾರ್ವಜನಿಕರು ಕಾಲ್ನಡಿಗೆ ಯಲ್ಲಿ ತೆರಳಲು ಕಷ್ಟ ಪಡುತ್ತಿದ್ದಾರೆ. ರವಿವಾರ ಐದಾರು ಮಂದಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.ಇಲ್ಲಿ ಅವಘಡ ಆಗಿ ಪ್ರಾಣ ಹಾನಿ ಸಂಭವಿಸುವ ಮೊದಲು ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಗಮನಹರಿಸಿ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೊದಲಿನಂತೆ ದುರಸ್ತಿ ನಡೆದಿಲ್ಲ
ಹಿಂದೆ ರಸ್ತೆಗಳ ಬದಿ ಹೊಂಡಗಳು ಬಿದ್ದಾಗ ನಗರಸಭೆ ಅಥವಾ ಲೋಕೋಪ ಯೋಗಿ ಇಲಾಖೆ ದುರಸ್ತಿ ಮಾಡುತ್ತಿತ್ತು. ರಾ.ಹೆ. ಕಾಮಗಾರಿ ಆರಂಭವಾದ ಬಳಿಕ ಅಧಿಕಾರಿಗಳು ರಸ್ತೆ ದುರಸ್ತಿಗೆ ಮನಸ್ಸು ಮಾಡಿಲ್ಲ ಎಂಬುದು ಜನರ ದೂರು.

ಪ್ರಧಾನಿಗೆ ಪತ್ರ
ಬರೆದದ್ದೂ ಆಯಿತು
ಪರ್ಕಳ ಪೇಟೆಯ ಬಸ್‌ ನಿಲ್ದಾಣ ಕೂಡ ದುಃಸ್ತಿತಿಯಲ್ಲಿದೆ. ನಿಲ್ದಾಣದ ಸ್ಥಿತಿ ಕಂಡ ಪರ್ಕಳ ಅಚ್ಯುತನಗರ ನಿವಾಸಿ ಕೆ.ಎಸ್‌.ರೈ ಅವರು 2017ರಲ್ಲಿ ಪ್ರಧಾನಮಂತ್ರಿಯವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದರು. ಪ್ರಧಾನಿಯವರಿಗೆ ದೂರು ಸಲ್ಲಿಸಿದರೆ, ತ್ವರಿತವಾಗಿ ಪರಿಹಾರ ಸಿಗುತ್ತದೆ ಎಂಬ ಆಶಾಭಾವನೆಯಿತ್ತು. ಆ ಬಳಿಕವೂ ನಿಲ್ದಾಣದ ಗತಿ ಬದಲಾಗಿಲ್ಲ.

Advertisement

ಶಾಸಕರಿಂದ ಸಮಸ್ಯೆ ಬಗೆಹರಿಸುವ ಭರವಸೆ
ಪರ್ಕಳ ಪರಿಸರದಲ್ಲಿ ಕಾಮಗಾರಿ ನಿಂತಿರುವುದರಿಂದ ಬಹಳಷ್ಟು ಸಮಸ್ಯೆ ಉಂಟಾಗಿದೆ.ಕಾಮಗಾರಿ ವೇಳೆ ರಸ್ತೆಯನ್ನು ಎತ್ತರಿಸಿದ್ದರಿಂದ ತಗ್ಗು ಪ್ರದೇಶದ ಮನೆಗಳಿಗೂ ಅಡಚಣೆಯಾಗಿದೆ.ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ. ಅವರು ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅಧಿಕಾರಿಗಳ ಗಮನಕ್ಕೂ ಅಲ್ಲಿನ ಸಮಸ್ಯೆ ತಂದಿದ್ದೇನೆ.
-ಸುಮಿತ್ರಾ ಆರ್‌.ನಾಯಕ್‌,ವಾರ್ಡ್‌ ಸದಸ್ಯೆ ಪರ್ಕಳ

ತುರ್ತಾಗಿ ದುರಸ್ತಿಗೊಳಿಸಿ
ಪರ್ಕಳ ಪೇಟೆಯ ರಸ್ತೆ ಪೂರ್ತಿ ಕೆಸರು ತುಂಬಿಕೊಂಡಿದ್ದು ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ.ಪೂರ್ತಿ ಮಳೆಗಾಲ ಆರಂಭವಾಗುವ ಮೊದಲು ತುರ್ತಾಗಿ ದುರಸ್ತಿ ಮಾಡಬೇಕಿದೆ.
-ಜಗದೀಶ್‌. ವೈ.ಕೆ.,
ಸ್ಥಳೀಯ ನಾಗರಿಕರು

Advertisement

Udayavani is now on Telegram. Click here to join our channel and stay updated with the latest news.

Next