ಬೆಂಗಳೂರು: ರಾಜ್ಯದಲ್ಲಿ ಸತತ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ಜನ ಮತ್ತು ಜಾನುವಾರುಗಳ ರಕ್ಷಣೆಗೆ ರಾಜ್ಯ ಸರ್ಕಾರ ಮಳೆಗಾಗಿ ಮೋಡ ಬಿತ್ತನೆ ಜತೆಗೆ ದೇವರ ಮೊರೆ ಹೋಗಲು ನಿರ್ಧರಿಸಿದೆ. ಜೂನ್ 6ರಂದು ಮಳೆಗಾಗಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ, ಹೋಮ ಹಾಗೂ ವಿಶೇಷ ಪೂಜೆ ಮಾಡಲು ತೀರ್ಮಾನಿಸಿದೆ.
ಈ ಕುರಿತಂತೆ ಆಗಮ ಪಂಡಿತರು ನೀಡಿದ್ದ ಸಲಹೆ ಮೇರೆಗೆ ಮುಜರಾಯಿ ಇಲಾಖೆ ವತಿಯಿಂದ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಜ್ಯದ 34 ಸಾವಿರ ದೇವಸ್ಥಾನಗಳಲ್ಲಿಯೂ ಅಂದು ಬ್ರಾಹ್ಮಿ ಮುಹೂರ್ತದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.
ಈ ವಿಶೇಷ ಪೂಜೆಗೆ ತಗಲುವ ವೆಚ್ಚವನ್ನು ಪ್ರತಿ ದೇವಸ್ಥಾನದ ಹುಂಡಿಯಲ್ಲಿ ಜಮೆಯಾದ ಹಣದಲ್ಲಿಯೇ ಗರಿಷ್ಠ 10 ಸಾವಿರ ರೂ.ಮೀರದಂತೆ ವೆಚ್ಚ ಮಾಡಲು ಸೂಚಿಸಲಾಗಿದೆ. ಜೂ.6 ರಂದು ಮುಜರಾಯಿ ಸಚಿವರಾಗಿರುವ ಪಿ.ಟಿ.ಪರಮೇಶ್ವರ್ ನಾಯ್ಕ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿ ಪರ್ಜನ್ಯ ಹೋಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಕಳೆದ ವರ್ಷವೂ ಬರಗಾಲ ಎದುರಿಸಿದ್ದು, ಮಳೆ ಬಾರದಿದ್ದಲ್ಲಿ ರಾಜ್ಯದ ಹಲವೆಡೆ ಜನ- ಜಾನುವಾರುಗಳ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಹೀಗಾಗಿ ದೇವರ ಮೊರೆ ಹೋಗುವುದು ಅನಿವಾರ್ಯವಾಗಿದೆ.
-ಪಿ.ಟಿ. ಪರಮೇಶ್ವರ ನಾಯ್ಕ, ಮುಜರಾಯಿ ಸಚಿವ