ಸೈಂಟ್‌ಪೀಟರ್ ಬರ್ಗ್(ರಷ್ಯಾ): “ನಾವು ಹವಾ ಮಾನ ರಕ್ಷಣೆಗೆ ಬದ್ಧವಾಗಿದ್ದೇವೆ. ಪ್ಯಾರಿಸ್ ಒಪ್ಪಂದ ಇರಲಿ, ಇಲ್ಲದೇ ಇರಲಿ, ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ’ ಹೀಗೆಂದು ಅಮೆರಿಕಕ್ಕೆ ದಿಟ್ಟ ಪ್ರತ್ಯುತ್ತರವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಪ್ಯಾರಿಸ್ ಹವಾಮಾನ ಬದಲಾವಣೆ ಕುರಿತ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಹೀಗೆ ತಿರುಗೇಟು ನೀಡಿದ್ದಾರೆ.
ಅವರು ರಷ್ಯಾದ ಸೈಂಟ್‌ಪೀಟರ್ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ (ಎಸ್‌ಪಿಐಇಎಫ್) ಉದ್ದೇಶಿಸಿ ಮಾತನಾಡುತ್ತ, ಭಾರತ ಹಿಂದಿನಿಂದಲೂ ಪ್ರಕೃತಿಯನ್ನು ಆರಾಧಿಸುವ ಗೌರವಿಸುವ ಸಂಪ್ರದಾಯವನ್ನು ಹೊಂದಿದ್ದು, ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವುದಕ್ಕೆ ವಿರುದ್ಧ ವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಜನಾಂಗಕ್ಕೆ ಹವಾಮಾನ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ. ಭಾರತ ಜವಾಬ್ದಾರಿಯುತ ದೇಶವಾಗಿದ್ದು, ಪ್ರಕೃತಿ ಯನ್ನು ಹಾನಿ ಮಾಡುವುದು ನಮ್ಮ ಧೋರಣೆಗೆ ವಿರುದ್ಧವಾದದ್ದು ಎಂದರು. ಅಲ್ಲದೇ ಕಾರ್ಯಕ್ರಮ ಬಳಿಕ ಮಾಧ್ಯಮ ಮಂದಿಯೊಬ್ಬರು ಕೇಳಿದ ಪ್ರಶ್ನೆಗೆ “ಮುಂದಿನ ಜನಾಂಗಕ್ಕೆ ಉಸಿರಾಟಕ್ಕೆ ಶುದ್ಧವಾದ ಗಾಳಿ, ಉತ್ತಮ ಬದುಕಿಗೆ ಅವಕಾಶವನ್ನು ನಾವು ಮಾಡಿಕೊಡಬೇಕಿದೆ ಎಂದು ಹೇಳಿದರು. ಅಲ್ಲದೇ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಪರಿಸರ ಸಂರಕ್ಷಣೆಗಾಗಿಯೇ ಪ್ರತ್ಯೇಕ ಸಚಿವಾಲಯವನ್ನು ತೆರೆದಿದ್ದಾಗಿ ಹೇಳಿದರು.
ಹೂಡಿಕೆಗೆ ಆಹ್ವಾನ: ಇದರೊಂದಿಗೆ ಭಾರತದಲ್ಲಿ ಹೂಡಿಕೆಗೆ ರಷ್ಯಾದ ಉದ್ಯಮಿಗಳಿಗೆ ಕರೆ ನೀಡಿದ ಅವರು ಹೂಡಿಕೆಗೆ ಜಗತ್ತಿನಲ್ಲೇ ಅತ್ಯಂತ ಪ್ರಶಸ್ತ ವಾದ ಸ್ಥಳ ಭಾರತವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಹಲವು ಅಮೂಲ್ಯ ಸುಧಾರಣೆಗಳನ್ನು ಕೈಗೊಳ್ಳಲಾ ಗಿದೆ. ರಾಜಕೀಯ ಇಚ್ಛಾಶಕ್ತಿ, ರಾಜಕೀಯ ಸ್ಥಿರತೆ ಮತ್ತು ಸ್ಪಷ್ಟ ದೂರದರ್ಶಿತ್ವ ಮತ್ತು ಪರಿವರ್ತನೆಯ ಸುಧಾರಣೆಗಳಿಂದಾಗಿ ಜಗತ್ತಿನಲ್ಲೇ ಭಾರತವನ್ನು ಒಂದು ಮೌಲ್ಯಯುತ ಮಾರುಕಟ್ಟೆಯನ್ನಾಗಿ ಮಾಡಿ ದೆ ಎಂದರು. ಇದೇ ವೇಳೆ 70 ವರ್ಷದ ಭಾರತ- ರಷ್ಯಾ ಬಾಂಧವ್ಯವನ್ನು ಅವರು ಶ್ಲಾ ಸಿದರು.
ಬೌದ್ಧ ಪವಿತ್ರ ಗ್ರಂಥ ಸಮರ್ಪಣೆ: ಸೈಂಟ್ ಪೀಟರ್ಬರ್ಗ್‌ನಲ್ಲಿರುವ ಪ್ರಧಾನಿ ಮೋದಿ ಶುಕ್ರ ವಾರ ದಟ್ಸನ್ ಗುನ್ಸಶೆನೈ ಬೌದ್ಧ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಪ್ರಧಾನ ಅರ್ಚಕರಿಗೆ ಪವಿತ್ರ ಗ್ರಂಥ “ಉರ್ಗಾ ಕಂಜೂರ್’ ಅನ್ನು ಉಡುಗೊರೆ ಯಾಗಿ ನೀಡಿದರು. ಜೊತೆಗೆ ಪ್ರಸಿದ್ಧ ಹೆರ್ಮಿಟೇಜ್ ಮ್ಯೂಸಿಯಂಗೆ ಭೇಟಿ ನೀಡಿ ಗುಜರಾತಿ ಭಾಷೆಯಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು.
ನೀವು ಟ್ವಿಟ್ಟರ್‌ನಲ್ಲಿದ್ದೀರಾ? ಮೋದಿಗೆ ಪತ್ರಕರ್ತೆ ಪ್ರಶ್ನೆ!
“ನೀವು ಟ್ವಿಟ್ಟರ್‌ನಲ್ಲಿ ಇದ್ದೀರಾ?’ ವಿಶ್ವದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರು ಮತ್ತು ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕೀಯ ನಾಯಕರ ಪೈಕಿ ಎರಡನೆಯವರು ಎಂಬ ಖ್ಯಾತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಯಿದು! ಈ ಪ್ರಶ್ನೆ ಕೇಳಿದ “ಮೆಗ್ಯಾನ್ ಕೆಲ್ಲಿ’ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ಹಾಗೂ ನಿಂದನೆಗೆ ಗುರಿಯಾಗಿದ್ದಾರೆ. “ಎನ್‌ಬಿಸಿ ನ್ಯೂಸ್’ ವಾಹಿನಿಯಲ್ಲಿ ಹೊಸ ಶೋ ಆರಂಭಿಸಿದ ಕೆಲ್ಲಿ, ಮೋದಿ ಅವರ ಬಗ್ಗೆ ಮಾಹಿತಿ ಕಲೆಹಾಕದೆ ಮಾತಿಗಿಳಿದ ಕಾರಣ ಈ ಅಚಾತುರ್ಯ ನಡೆದಿದೆ.