ಕೌಲಾಲಂಪುರ: ಪ್ಯಾರಿಸ್ ಒಲಿಂಪಿಕ್ಸ್ ಪಂದ್ಯಾವಳಿಯ ಬ್ಯಾಡ್ಮಿಂಟನ್ ಡ್ರಾ ಪ್ರಕಟಗೊಂಡಿದೆ. ಎರಡು ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ ಸುಲಭ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವದ 13ನೇ ರ್‍ಯಾಂಕ್ ಆಟಗಾರ್ತಿ ಸಿಂಧು ಗ್ರೂಪ್ “ಎಂ’ನಲ್ಲಿ ಸ್ಥಾನ ಪಡೆದಿದ್ದಾರೆ. ಇಲ್ಲಿನ ಉಳಿದಿಬ್ಬರು ಆಟಗಾರ್ತಿಯರೆಂದರೆ ಎಸ್ತೋನಿಯಾದ ಕ್ರಿಸ್ಟಿನ್ ಕೂಬಾ (75) ಮತ್ತು ಮಾಲ್ಡೀವ್ಸ್‌ನ ಫಾತಿಮಾ ನಬಾ ಅಬ್ದುಲ್ ರಜಾಕ್ (111).
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಟೋಕಿಯೊ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಸಿಂಧು, 16ರ ಸುತ್ತಿನ ಪಂದ್ಯದಲ್ಲಿ ಚೀನದ 5ನೇ ಶ್ರೇಯಾಂಕದ ಆಟಗಾರ್ತಿ ಹೆ ಬಿಂಗ್ ಜಿಯಾವೊ ಸವಾಲನ್ನು ಎದುರಿಸುವ ಸಾಧ್ಯತೆ ಇದೆ. “ಜಿಯಾವೊ ಟೆಸ್ಟ್’ನಲ್ಲಿ ತೇರ್ಗಡೆ ಯಾದರೆ ಒಲಿಂಪಿಕ್ ಚಾಂಪಿಯನ್, ಚೀನದ ಚೆನ್ ಯು ಫಿ ಎದುರಾಗಬಹುದು.
ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಎಚ್.ಎಸ್. ಪ್ರಣಯ್ “ಕೆ’ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ವಿಯೆಟ್ನಾಮ್‌ನ ಲೆ ಡಕ್ ಫಾಟ್ ಹಾಗೂ ಜರ್ಮನಿಯ ಫ್ಯಾಬಿಯನ್ ರೋತ್ ವಿರುದ್ಧ ಸೆಣಸಬೇಕಿದೆ.
ಲಕ್ಷ್ಯ ಸೇನ್‌ಗೆ ಕ್ರಿಸ್ಟಿ ಸವಾಲು
ಲಕ್ಷ್ಯ ಸೇನ್ “ಎಲ್’ ಗ್ರೂಪ್‌ನಲ್ಲಿದ್ದಾರೆ. ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಮತ್ತು ಗ್ವಾಟೇಮಾಲಾದ ಕೆವಿನ್ ಕಾರ್ಡನ್ ಅವರನ್ನು ಸೇನ್ ಎದುರಿಸುವರು.