ಪ್ಯಾರಿಸ್: ಸದ್ಯ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ (Paris Olympics) ಭಾರತದ ಯುವ ಶೂಟರ್ ಮನು ಭಾಕರ್ (Manu Bhaker) ಅವರು ತನ್ನ ಅತ್ಯದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಶುಕ್ರವಾರ (ಆ 02) ನಡೆದ 25 ಮೀ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ ಪ್ರವೇಶ ಮಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಈಗಾಗಲೇ ಎರಡು ಪದಕ ಗೆದ್ದುಕೊಂಡಿರುವ ಮನು ಭಾಕರ್ ಇದೀಗ ಹ್ಯಾಟ್ರಿಕ್ ಕನಸು ಬಿತ್ತಿದ್ದಾರೆ. 25 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ಫೈನಲ್ ಪಂದ್ಯ ನಡೆಯಲಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆಟದ ಸಮಯದಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣದಿಂದ ನಿರಾಸೆ ಅನುಭವಿಸಿದ್ದ ಮನು ಈ ಬಾರಿ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುವ ಮನು ಭಾಕರ್ ಇದೀಗ 25 ಮೀ ಏರ್ ಪಿಸ್ತೂಲ್ ನಲ್ಲಿ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಸೆಮಿ ಫೈನಲ್ ಗೆ ಆರ್ಚರಿ ತಂಡ
ಮಿಶ್ರ ಆರ್ಚರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದೆ. ಭಾರತದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರಿದ್ದ ಮಿಶ್ರ ತಂಡವು ಸೆಮಿ ಫೈನಲ್ ಗೆ ಅರ್ಹತೆ ಪಡೆದಿದೆ.
ಕ್ವಾರ್ಟರ್ ಫೈನಲ್ ನಲ್ಲಿ ಭಾರತವು ಸ್ಪೇನ್ ತಂಡವನ್ನು 5-3ರಿಂದ ಸೋಲಿಸಿತು.