ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ದಿನ ಶನಿವಾರ ಶೂಟರ್ ಗಳು ತೀವ್ರ ನಿರಾಸೆ ಮೂಡಿಸಿದ ಬೆನ್ನಲ್ಲೇ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್ ಪ್ರವೇಶಿಸಿದ್ದಾರೆ.
ಈಗ ಕಳೆದ 20 ವರ್ಷಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ವನಿತಾ ಶೂಟರ್ ಆಗಿದ್ದಾರೆ. 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸುಮಾ ಶಿರೂರ್ ಕೊನೆಯ ಬಾರಿಗೆ ಫೈನಲ್ ತಲುಪಿದ್ದರು.
ಇದನ್ನೂ ಓದಿ: Paris Olympics ; ಮೊದಲ ಎರಡು ಚಿನ್ನದ ಪದಕ ಗೆದ್ದ ಚೀನಾ!
22ರ ಹರೆಯದ ಭಾಕರ್ 580 ಅಂಕ ಗಳಿಸಿ ಅರ್ಹತೆಯಲ್ಲಿ ಮೂರನೇ ಸ್ಥಾನಿಯಾಗಿ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಹಂಗೇರಿಯ ಏಸ್ ವೆರೋನಿಕಾ ಮೇಜರ್ 582 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ದಕ್ಷಿಣ ಕೊರಿಯಾದ ಓ ಏ ಜಿನ್ 582 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದಾರೆ. ಭಾರತದ ಇನ್ನೋರ್ವ ಪ್ರತಿನಿಧಿ ರಿದಮ್ ಸಾಂಗ್ವಾನ್ 573 ಅಂಕಗಳೊಂದಿಗೆ 15ನೇ ಸ್ಥಾನ ಪಡೆದರು. ಫೈನಲ್ ಭಾನುವಾರ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.