ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿ ಚಿನ್ನದ ಆಸೆ ಚಿಗುರಿಸಿದ್ದ ಭಾರತದ ವಿನೀಶ್ ಫೋಗಾಟ್ (Vinesh Phogat) ಅವರು ದೇಹತೂಕದ ಕಾರಣದಿಂದ ಅನರ್ಹಗೊಂಡ ವಿಚಾರ ಗೊತ್ತೇ ಇದೆ. ಬಳಿಕ ಅವರು ಮೇಲ್ಮನವಿ ಸಲ್ಲಿಸಿದ್ದು, ಅವರ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (CAS) ಪರಿಗಣಿಸಿದೆ.
ಇದೀಗ ವಿನೀಶ್ ಫೋಗಾಟ್ ಮತ್ತು ಶತಕೋಟಿ ಭಾರತೀಯರ ಭರವಸೆಯು ಹಿರಿಯ ವಕೀಲ ಹರೀಶ್ ಸಾಳ್ವೆ (Harish Salve) ಅವರ ಹೆಗಲ ಮೇಲೆ ನಿಂತಿದೆ. ಯಾಕರೆಂದರೆ ಪೋಗಾಟ್ ಅವರ ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆ ಪ್ರಕರಣದಲ್ಲಿ ಸಿಎಎಸ್ ನಲ್ಲಿ ವಾದ ಮಂಡಿಸಲು ಸಿದ್ಧರಾಗಿದ್ದಾರೆ.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಮತ್ತು ಕಿಂಗ್ಸ್ ಕೌನ್ಸಿಲ್, ಸಾಳ್ವೆ ಅವರು ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸುವುದರಿಂದ ಹಿಡಿದು, ಸೈರಸ್ ಮಿಸ್ತ್ರಿ ವಿರುದ್ಧದ ಹೋರಾಟದಲ್ಲಿ ರತನ್ ಟಾಟಾ ಅವರನ್ನು ಪ್ರತಿನಿಧಿಸುವವರೆಗೆ ಉನ್ನತ ಮಟ್ಟದ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.
ಒಲಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿನೇಶ್ ಫೋಗಟ್, ಬುಧವಾರ ನಡೆದ ಚಿನ್ನದ ಪದಕದ ಪಂದ್ಯದ ಮೊದಲು 100 ಗ್ರಾಂ ಅಧಿಕ ತೂಕವಿದ್ದ ಕಾರಣ ಅನರ್ಹತೆಗೆ ಒಳಗಾಗಿದ್ದರು.
ಅನರ್ಹತೆಯ ವಿರುದ್ಧ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಒತ್ತಾಯಿಸಿದ್ದಾರೆ.