ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics) ವನಿತಾ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ದಿಗ್ಗಜ ಓಟಗಾರ್ತಿಯರನ್ನು ಹಿಂದಿಕ್ಕಿ ಸೈಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್ (Julien Alfred) ಮೊದಲ ಸ್ಥಾನ ಪಡೆದಿದ್ದಾರೆ. ಜೂಲಿಯನ್ ಗೆದ್ದ ಚಿನ್ನದ ಪದಕವು ಕೆರಿಬಿಯನ್ ದ್ವೀಪ ರಾಷ್ಟ್ರ ಸೈಂಟ್ ಲೂಸಿಯಾದ (Saint Lucia) ಚೊಚ್ಚಲ ಒಪಿಂಪಿಕ್ ಪದಕವಾಗಿದೆ.
ಭಾರಿ ಮಳೆಯ ಕಾರಣಿದಿಂದ ತೊಯ್ದ ಟ್ರ್ಯಾಕ್ ನಲ್ಲಿ ನಡೆದ ಓಟದಲ್ಲಿ ಜೂಲಿಯನ್ ಆಲ್ ಫ್ರೆಡ್ ಅವರು ರಾಷ್ಟ್ರೀಯ ದಾಖಲೆಯ 10.72 ಸೆಕೆಂಡ್ಸ್ ನಲ್ಲಿ ಓಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ವಿಶ್ವ ಚಾಂಪಿಯನ್ ಮತ್ತು ಕೂಟದ ಫೇವರೆಟ್ ಆಗಿದ್ದಅಮೆರಿಕದ ಶಾ’ಕಾರಿ ರಿಚರ್ಡ್ಸನ್ ಅವರು ಎರಡನೇ ಸ್ಥಾನ ಪಡೆದರು. ಅವರು 10.87 ಸೆಕೆಂಡ್ಸ್ ಗಳಲ್ಲಿ ಗುರಿ ಮುಟ್ಟಿದರು. ಮೂರನೇ ಸ್ಥಾನ ಪಡೆದ ಅಮೆರಿಕ ಮೆಲಿಸ್ಸಾ ಜೆಫರ್ಸನ್ ಅವರು 10.92 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿದರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್, ಐದನೇ ಒಲಿಂಪಿಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಜಮೈಕಾದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್ ಫೈನಲ್ ನಲ್ಲಿ ಗೈರು ಹಾಜರಾಗಿದ್ದು ವಿವಾದಕ್ಕೆ ಕಾರಣವಾಯಿತು. ಫ್ರೇಸರ್ ಅವರು ತಡವಾಗಿ ಸ್ಟೇಡಿಯಂಗೆ ಬಂದ ಕಾರಣದಿಂದ ಅವರನ್ನು ಸೆಕ್ಯುರಿಟಿ ತಂಡವು ಒಳಗೆ ಬಿಡಲಿಲ್ಲ. ಹಾಗಾಗಿ ಅವರು ಫೈನಲ್ ನಲ್ಲಿ ಭಾಗವಹಿಸಲಿಲ್ಲ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಅವರು ಗಾಯಗೊಂಡ ಕಾರಣದಿಂದ ಆಡಿಲ್ಲ ಎಂದು ಜಮೈಕಾ ಸ್ಪಷ್ಟನೆ ನೀಡಿದೆ.