Advertisement

ಅಧಿಕಾರಿಗಳ ನಿರ್ಲಕ್ಷ್ಯ: ಕೈತಪ್ಪಿದ ಪರೀಕ್ಷಾ ಪೇ ಚರ್ಚಾ ಅವಕಾಶ

01:25 AM Feb 11, 2023 | Team Udayavani |

ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಬೇಕಾಗಿದ್ದ ಕರ್ನಾಟಕದ ನಾಲ್ವರು ವಿದ್ಯಾರ್ಥಿಗಳಿಗೆ ಈ ಅವಕಾಶ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೈತಪ್ಪಿದ ಘಟನೆ ನಡೆದಿದೆ.

Advertisement

ಈ ವಿದ್ಯಾರ್ಥಿಗಳು ಜ. 18 ರಂದು ಹೊಸದಿಲ್ಲಿಯಲ್ಲಿ ಹಾಜರಿರಬೇಕಾಗಿತ್ತು. ಆದರೆ ಈ ವಿದ್ಯಾರ್ಥಿಗಳಿಗೆ ಮಾಹಿತಿ ಲಭಿಸಿದ್ದೇ ಜ. 19ರಂದು. ಅವರು ಜ. 22ರಂದು ಹೊರಟು ಹೊಸದಿಲ್ಲಿ ತಲುಪಿದ್ದು ಜ. 24ರಂದು.
ಈ ವಿದ್ಯಾರ್ಥಿಗಳು ಪಟ್ಟ ಸಂಕಷ್ಟ ಗಳನ್ನು ಪ್ರಧಾನಿಯವರಿಗೆ ಟ್ವೀಟ್‌ ಮೂಲಕ, ಮಕ್ಕಳ ಸಹಾಯವಾಣಿಗೆ ಲಿಖೀತವಾಗಿ ದೂರು ಸಲ್ಲಿಸಲಾಗಿದ್ದು, ತನಿಖೆ ನಡೆಯುವ ಲಕ್ಷಣಗಳು ಕಂಡುಬಂದಿವೆ.

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಪಡೆದ ಮೂಡುಬಿದಿರೆ ರೋಟರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಕಡಂದಲೆ ತಾನು ಮತ್ತು ತನ್ನ ಜತೆಗಿದ್ದ ಕರ್ನಾಟಕದ ಒಟ್ಟು ನಾಲ್ವರು ಅನುಭವಿಸಿದ ಸಂಕಷ್ಟಗಳನ್ನು ಶಾಲೆ ಯಲ್ಲಿ ಗುರುವಾರ ವಿವರಿಸಿದರು.
ಗಣರಾಜ್ಯೋತ್ಸವ ಪೆರೇಡ್‌ ಮತ್ತು ಪರೀಕ್ಷಾ ಪೆ ಚರ್ಚಾದಲ್ಲಿ ಅತಿಥಿಗಳಾಗಿ ಭಾಗವಹಿಸುವ ಕುರಿತಾಗಿ ಎಲ್ಲ ರಾಜ್ಯಗಳ ಪ್ರತಿಭಾವಂತರಿಗೆ ಮಾಹಿತಿಯು ಎನ್‌ಸಿಇಆರ್‌ಟಿ ಮೂಲಕ ಆಯಾ ರಾಜ್ಯಗಳ ಡಿಎಸ್‌ಇಆರ್‌ಟಿಗಳಿಗೆ ರವಾನಿ  ಸಲ್ಪಟ್ಟಿತ್ತು. ರಾಜ್ಯವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿ ಯನ್ನು ಹೊರಬೇಕಾಗಿದ್ದ ಕರ್ನಾಟಕ ಡಿಎಸ್‌ಇಆರ್‌ಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಯಿತು.

ಸಮಸ್ಯೆಯ ಗಹನತೆ ಅರ್ಥ ಮಾಡಿಕೊಂಡ ಸಂಸದ ನಳಿನ್‌ ಕುಮಾರ್‌, ಪೇಜಾವರ ಶ್ರೀಗಳು ಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದರು. ಸಚಿವರಾದ ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ, ಕಟೀಲು ಹರಿನಾರಾಯಣದಾಸ ಆಸ್ರಣ್ಣ. ಪ್ರದ್ಯುಮ್ನ ರಾವ್‌ ಕಯ್ನಾರು, ಉಡುಪಿ ಬಾಲಾಜಿ ರಾಘವೇಂದ್ರ ರಾವ್‌ ಅವರ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತು ಎಂದು ಪ್ರಹ್ಲಾದ ಮೂರ್ತಿ ವಿವರಿಸಿದರು.

ಇತರ ರಾಜ್ಯಗಳ ವಿದ್ಯಾರ್ಥಿಗಳು ಹೊಸದಿಲ್ಲಿಗೆ ತೆರಳಲು ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕರ್ನಾಟಕದ ಅಧಿಕಾರಿಗಳು ನಮ್ಮನ್ನು ರೈಲಿನಲ್ಲಿ ಕಳುಹಿಸಿದ್ದರು. ಎಲ್ಲರಿಗೂ ಒಂದೇ ಬೋಗಿಯಲ್ಲಿ ಟಿಕೆಟ್‌ ಮಾಡಿಸದೆ ಸಮಸ್ಯೆ ಆಯಿತು. ಊಟ-ಉಪಾಹಾರದಲ್ಲೂ ಅವ್ಯವಸ್ಥೆ ಎದ್ದು ಕಂಡಿತು ಎಂದು ಪ್ರಹ್ಲಾದ ಮೂರ್ತಿ ನೋವು ತೋಡಿಕೊಂಡರು.

Advertisement

ರೋಟರಿ ಎಜುಕೇಶನ್‌ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ.ಎಂ., ಉಪಾಧ್ಯಕ್ಷ ಅಬ್ದುಲ್‌ ರವೂಫ್‌, ಕಾರ್ಯದರ್ಶಿ ಎ.ಕೆ. ರಾವ್‌, ಸಂಚಾಲಕರಾದ ಮೋಹನ್‌ ಭಟ್‌, ಪ್ರವೀಣ್‌ ಚಂದ್ರ ಜೈನ್‌, ವಿವಿಧ ವಿಭಾಗಗಳ ಮುಖ್ಯಸ್ಥರಾದ ಶೀಲಾ ಕಾಂತರಾಜ್‌, ರೂಪಾ ಮಸ್ಕರೇನ್ಹಸ್‌, ತಿಲಕಾ ಅನಂತವೀರ್‌ ಜೈನ್‌, ಗಜಾನನ ಮರಾಠೆ, ತರಬೇತುದಾರ ಮೋಹನ್‌ ಹೊಸ್ಮಾರ್‌, ಸತೀಶ್‌, ನಿತೇಶ್‌ ಮಾರ್ನಾಡ್‌ ಉಪಸ್ಥಿತರಿದ್ದರು.

ದೂರು ಹಿಂಪಡೆಯಲು ಒತ್ತಡ
ಮಕ್ಕಳ ವಾಣಿಗೆ ಮತ್ತು ಪ್ರಧಾನಿಯವರಿಗೆ ಟ್ವೀಟ್‌ ಮೂಲಕ ದೂರು ನೀಡುವುದು ಅನಿವಾರ್ಯವಾಗಿತ್ತು. ಆದರೆ ಈಗ ದೂರನ್ನು ಹಿಂಪಡೆ ಯುವಂತೆ ನೋಡೆಲ್‌ ಅಧಿಕಾರಿ ಮಹಾದೇವಮ್ಮ ಅವರು ಎಸ್ಕಾರ್ಟ್‌ ಅಧಿಕಾರಿ ಛಾಯಾ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಹ್ಲಾದ ಮೂರ್ತಿ ಆರೋಪಿಸಿದರು.

 

 

 

Advertisement

Udayavani is now on Telegram. Click here to join our channel and stay updated with the latest news.

Next