ಉಡುಪಿ: ಮಲ್ಪೆ ಭಾಗದಿಂದ ಮೀನುಗಾರಿಕೆಗೆ ತೆರಳಿ ಗೋವಾ ಗಡಿಯಲ್ಲಿ ಬಂಧನವಾದಾಗ ಮುಖ್ಯಮಂತ್ರಿಯಾಗಿದ್ದ ಮನೋಹರ ಪಾರೀಕರ್ ಮಾಡಿದ ನೆರವನ್ನು ಮೀನುಗಾರರು ಎಂದಿಗೂ ಮರೆಯುವಂತಿಲ್ಲ.
11 ಬೋಟುಗಳಲ್ಲಿ ತಲಾ ಐದಾರು ಮೀನುಗಾರರಿದ್ದರು. ಇವರು ಕಾನೂನು ಉಲ್ಲಂ ಸಿದರೆಂದು ಗೋವಾದಲ್ಲಿ ಬೋಟುಗಳನ್ನು ವಶಕ್ಕೆ ತೆಗೆದು ಕೊಳ್ಳಲಾಗಿತ್ತು. ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಮೂಲಕ ತಿಳಿಸಿ ಶಾಸಕ ಕೆ.ರಘುಪತಿ ಭಟ್ ಅವರು ಮೀನುಗಾರರ ನಿಯೋಗದೊಂದಿಗೆ ಗೋವಾಕ್ಕೆ ತೆರಳಿದರು. ಪಾರೀಕರ್ ಅವರು ಚಹಾ ಕೊಟ್ಟು ಮುಖ್ಯ ಕಾರ್ಯದರ್ಶಿಯವರನ್ನು ಕರೆಸಿ ಅತಿ ಕಡಿಮೆ ದಂಡ ವಿಧಿಸಿ ಬಿಡುಗಡೆಗೊಳಿಸುವಂತೆ ಸೂಚಿಸಿದರು.
“ಒಂದು ವೇಳೆ ಪಾರೀಕರ್ ಮಧ್ಯ ಪ್ರವೇಶ ಮಾಡದೆ ಇದ್ದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತಿತ್ತು ಮತ್ತು ತುಂಬ ಸಮಸ್ಯೆ ಆಗುತ್ತಿತ್ತು’ ಎಂಬುದನ್ನು ರಘುಪತಿ ಭಟ್ ಅವರು ಸ್ಮರಿಸಿಕೊಳ್ಳುತ್ತಾರೆ. ರಕ್ಷಣಾ ಸಚಿವರಾಗಿದ್ದಾಗ ಅವರ ಸರಳತೆ ಮಾಧ್ಯಮಗಳಲ್ಲಿ ಕಂಡಿದ್ದ ಭಟ್ ಅವರಿಗೆ ಮುಖ್ಯಮಂತ್ರಿಯಾಗಿದ್ದಾಗ ಸಮೀಪದಲ್ಲಿ ನೋಡುವ ಅವಕಾಶ ದೊರಕಿತು.
ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಪಡುಬಿದ್ರಿಯಲ್ಲಿ ಎರಡು ವರ್ಷಗಳ ಹಿಂದೆ ಸಮಾವೇಶವನ್ನು ಆಯೋಜಿಸಿದಾಗ ಪಾರೀಕರ್ ಅವರು ಕೇಂದ್ರ ರಕ್ಷಣಾ ಸಚಿವರಾಗಿದ್ದರು. ಆ ಸಂದರ್ಭ ಉಧ್ಘೋಧಕ ಸಂದೇಶ ನೀಡಿದ ಪರಿಕ್ಕರ್ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ರಾಜಾಂಗಣದ ಸಭೆಯಲ್ಲಿಯೂ ಪಾಲ್ಗೊಂಡರು. ಆಗ ಪೇಜಾವರ ಶ್ರೀಗಳ ಐದನೆಯ ಪರ್ಯಾಯದ ಅವಧಿ. ಪರಿಕ್ಕರ್ ಅವರು ಚುನಾವಣೆ ವೇಳೆಯೂ ಆಗಮಿಸಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ್ದರು.
ಪಾರೀಕರ್ ನಿಧನಕ್ಕೆ ಸಂತಾಪ
ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ ನಿಧನಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ. ರಘುಪತಿ ಭಟ್, ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಸಂಚಾಲಕ ವಿವೇಕಾನಂದ ಶೆಣೈ ಸಂತಾಪ ಸೂಚಿಸಿದ್ದಾರೆ.