ಹೊನ್ನಾವರ: ಸಣ್ಣ ಕೋಮುಗಲಭೆ, ಪರೇಶ್ ಮೇಸ್ತ ಸಾವಿನಿಂದಾಗಿ ಜಿಲ್ಲೆಯಾದ್ಯಂತ ಹಬ್ಬಿ ಚುನಾವಣೆಗೆ ವಿಷಯವಾಗಿ, ಬಿಜೆಪಿಗೆ ಪ್ರಚಂಡ ಗೆಲುವು ತಂದುಕೊಟ್ಟಿದ್ದು ಹಳೆಯ ಸಂಗತಿ. ಈಗ ಸಿಬಿಐ ಬಿ-ರಿಪೋರ್ಟ್ ಸಲ್ಲಿಸಿದೆ. ಕಾಂಗ್ರೆಸ್ ಈ ವಿಷಯವನ್ನು ಚುನಾವಣೆಗೆ ಬಳಸಿಕೊಳ್ಳಲು ಈಗಾಗಲೇ ಹೇಳಿಕೆ ನೀಡಲು ಆರಂಭಿಸಿದ್ದು, ಬಿಜೆಪಿ ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಪ್ರಕರಣ ಜೀವಂತವಾಗಿಡುವ ಸಿದ್ಧತೆಯಲ್ಲಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪರೇಶ್ ಮೇಸ್ತ ಪ್ರಕರಣ ವಿಷಯವನ್ನಾಗಿಸುವ ಸಿದ್ಧತೆಯಲ್ಲಿ ರಾಜಕಾರಣಿಗಳಿದ್ದಾರೆ.
ಪರೇಶ್ ಮೇಸ್ತ ಸಾವಿನ ಪ್ರಕರಣ ಕೈಗೆತ್ತಿಕೊಳ್ಳುವಂತೆ ರಾಜ್ಯ ಸರ್ಕಾರ 2017, ಡಿ.13ರಂದು ಸಿಬಿಐ ಚೆನ್ನೈನ ಸ್ಪೆಷಲ್ ಕ್ರೈಂ ಬ್ರಾಂಚ್‌ಗೆ ಪತ್ರ ಬರೆದಿತ್ತು. ಹೊನ್ನಾವರ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 592/ 2017ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಲು 2018, ಏ.23ರಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ತನಿಖೆ ವೇಳೆ ಬೇರೆ ಬೇರೆ ಮೂಲದ ಅಭಿಪ್ರಾಯದ ಜತೆ ಮೆಡಿಕೋ ಲೀಗಲ್ ಸಾಕ್ಷಿಗಳನ್ನು ಪರಿಗಣಿಸಿ ಇದು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಘಟನೆ ಎಂದು ಹೊನ್ನಾವರದ ಪ್ರಧಾನ ಸಿವಿಲ್ ನ್ಯಾಯಾಧೀಶ (ಕಿರಿಯ ವಿಭಾಗ) ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸಿಬಿಐ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ದಿಲೀಪ್‌ಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣ ರಾಷ್ಟ್ರದ ಮಾಧ್ಯಮಗಳ ಗಮನ ಮಾತ್ರವಲ್ಲ ವಾಷಿಂಗ್‌ಟನ್ ಪೋಸ್ಟ್‌ನಲ್ಲೂ ಸುದ್ದಿಯಾಗಿತ್ತು. ನಾಲ್ಕು ಮುಕ್ಕಾಲು ವರ್ಷಗಳ ಕಾಲ ಬಿಜೆಪಿ, ಕಾಂಗ್ರೆಸ್ ಈ ವಿಷಯವನ್ನೆತ್ತಿಕೊಂಡು ಮಾಧ್ಯಮಗಳ ಮುಖಾಂತರ ವಿಧಾನಸಭೆಯಲ್ಲಿ ಸವಾಲ್ ಜವಾಬ್‌ಗ ತೊಡಗಿದ್ದವು. ಸಿಬಿಐ ಬಿ ರಿಪೋರ್ಟ್ ಹಾಕಿದ ಮೇಲೆ ಕಾಂಗ್ರೆಸ್ ಸಾಕ್ಷ್ಯ ನಾಶ ಮಾಡಿತ್ತು ಎಂದು ಬಿಜೆಪಿ ಹೇಳಿದರೆ, ಪ್ರಮೋದ್ ಮುತಾಲಿಕ್ ಸಿಬಿಐ ವರದಿ ಒಪ್ಪಲು ಸಾಧ್ಯವಿಲ್ಲ ಅನ್ನುತ್ತಾರೆ. ಪರೇಶ್ ಮೇಸ್ತ ತಂದೆ ನನಗೆ ತನಿಖೆ ಸಮಾಧಾನವಾಗಿಲ್ಲ, ಬಿಜೆಪಿ ಏನಾದರೂ ಮಾಡದಿದ್ದರೆ ನಾನೇ ಎನ್‌ಐಎ ತನಿಖೆ ಮಾಡಲಿ ಎಂದು ಆಗ್ರಹಿಸುವುದಾಗಿ ಹೇಳುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಆರೋಪ-ಪ್ರತ್ಯಾರೋಪ ಆರಂಭವಾಗಿದೆ.
ಇದು ಹೊಸದೇನಲ್ಲ: ಇಂತಹ ಪ್ರಕರಣಗಳು ಏನೇ ಆಗಲಿ ರಾಜಕೀಯಕ್ಕೆ ಬಳಸಲ್ಪಡುವುದು ಜಿಲ್ಲೆಗೆ ಹೊಸದೇನಲ್ಲ. ಈವರೆಗೂ ಪತ್ತೆಯಾಗದ ಡಾ| ಚಿತ್ತರಂಜನ್ ಹತ್ಯೆ ಇಡೀ ಕರಾವಳಿಯಲ್ಲಿ ಬಿಜೆಪಿಯ ಗೆಲುವಿಗೆ ಕಾರಣವಾಗಿತ್ತು. ನಂತರವೂ ಕೋಮುದ್ವೇಷದ ಜ್ವಾಲೆ ಬಡವರ ಮಕ್ಕಳನ್ನು ಬಲಿಪಡೆಯುತ್ತಲೇ ಇದೆ. ಮುಗ್ಧ ಜನ ಆಕ್ರೋಶಭರಿತರಾಗಿ ರಾಜಕಾರಣಿಗಳ ಭಾವೋದ್ವೇಗದ ಮಾತಿಗೆ ಮರಳಾಗುತ್ತಾರೆ, ಇದು ಮತವಾಗಿ ಪರಿವರ್ತನೆಯಾಗುತ್ತದೆ.
ಅ.3ರಂದು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದು, ನ.16ಕ್ಕೆ ಪ್ರಕರಣ ಮುಂದೂಡಿಕೆಯಾಗಿದೆ. ಕೋಮುಗಲಭೆಯಿಂದ ಕಂಗೆಟ್ಟ ಹೊನ್ನಾವರದ ಬಸ್‌ಸ್ಟ್ಯಾಂಡ್ ಪ್ರದೇಶದ ವ್ಯಾಪಾರ, ವ್ಯವಹಾರ, ಜನಜೀವನ ಇನ್ನೂ ಚೇತರಿಸಿಕೊಂಡಿಲ್ಲ. ಪ್ರಕರಣಕ್ಕೆ ಮೌನಸಾಕ್ಷಿಯಾದ ಅದೇ ಶೆಟ್ಟಿಕೆರೆ, ಕುಂಕುಮ ಬಳಿದುಕೊಂಡ ದೇವದಾರು ಮರ ಮತ್ತು ಅಂದಿನಿಂದ ಇಂದಿನವರೆಗೆ ಕಾವಲು ನಿಂತ ಪೊಲೀಸ್ ಜೀಪು ಏನೋ ಹೇಳುವಂತಿದೆ.
ಈ ಪ್ರಕರಣ ಕುರಿತಂತೆ 2017ರಲ್ಲಿ ನಿತ್ಯ ಎಂಬಂತೆ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ನಂತರವೂ ಆಗಾಗ ಸಿಡಿಯುತ್ತಲೇ ಇತ್ತು. ಈಗ ಪ್ರಕರಣ ಮಗ್ಗಲು ಬದಲಿಸಿದೆ. ಯಾರಿಗೆ ಲಾಭವೋ ಕಾದು ನೋಡಬೇಕು. ಚಿತ್ತರಂಜನ್, ಪರೇಶ್ ಮೇಸ್ತ ಆತ್ಮ ನರಳುವ ಧ್ವನಿ ಕ್ಷೀಣವಾಗಿ ಕೇಳಿಸುತ್ತಿದೆ.
ಅಂದು ಏನಾಗಿತ್ತು? 2017, ಡಿ.6ರಂದು ಪರೇಶ್ ಮೇಸ್ತ ನಾಪತ್ತೆಯಾಗಿದ್ದ. ಡಿ.8ರಂದು ಶೆಟ್ಟಿಕೆರೆಯಲ್ಲಿ ಶವ ದೊರಕಿತ್ತು. ಡಿ.9ರಿಂದ ಜಿಲ್ಲೆಯಾದ್ಯಂತ ಪ್ರಕರಣದ ಕಿಚ್ಚು ಹಚ್ಚಲಾಗಿತ್ತು. ಕುಮಟಾ, ಶಿರಸಿಗಳಲ್ಲಿ ಗಲಭೆಯಾಗಿತ್ತು. ಕುಮಟಾದಲ್ಲಿ ಪೊಲೀಸ್ ಅಧಿಕಾರಿಗಳ ವಾಹನ ಜಖಂ ಆಗಿತ್ತು. ಆಗ ಶಾಸಕರಾಗಿದ್ದ ಕಾಗೇರಿ ಶಿರಸಿಯಲ್ಲಿ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದರು. ಜಿಲ್ಲೆಯ ದೊಡ್ಡ ರಾಜಕಾರಣಿಯೊಬ್ಬರು ಪರೇಶ್ ಮೇಸ್ತ ಸಾವು ಹುಸಿ ಹೋಗಲು ಬಿಡುವುದಿಲ್ಲ ಎಂದಿದ್ದರು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿದ್ದರು. ಡಿ.12ರಂದು ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.