Advertisement
2017ರ ಮೇ 10ರಂದು ಅಪರಾಹ್ನ 2.30ಕ್ಕೆ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ 12 ವರ್ಷದ ಸುಮಿತ್ರಾ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಈ ದಂಪತಿ ಹುಡುಕದ ಜಾಗವಿಲ್ಲ. ತಂತ್ರಜ್ಞಾನ-ಕಾನೂನಿನ ಅರಿವು ಇಲ್ಲದಿದ್ದರೂ ಈ ಅಪ್ಪ-ಅಮ್ಮ ಮಗಳಿಗಾಗಿ ಪೊಲೀಸ್ ಠಾಣೆಯಿಂದ ಹಿಡಿದು ಸಾಧ್ಯವಾಗುವ ಎಲ್ಲ ಕಡೆಗಳಲ್ಲಿಯೂ ‘ನಮ್ಮ ಮಗಳು ಎಲ್ಲಿ?’ ಎಂದು ಹುಡುಕಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ಪೊಲೀಸರು ಕೂಡ ತಮ್ಮ ನೋವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದಾರೆ.
ಆಕೆ ಕಾಣೆಯಾದ ದಿನವೇ ನಗರದೆಲ್ಲೆಡೆ ಹುಡುಕಿದರೂ ಸುಳಿವು ಸಿಗಲಿಲ್ಲ. ಆದ್ದರಿಂದ ಹತ್ತಿರದ ಕಾವೂರು ಠಾಣೆಗೆ
ದೂರು ನೀಡಿದ್ದಾರೆ. ಠಾಣೆಗೆ ಹೋಗಿ ಮಗಳ ಬಗ್ಗೆ ಸುಳಿವು ಇದೆಯೋ ಎಂದು ವಿಚಾರಿಸಿದರೆ, ‘ಹುಡುಕುತ್ತಿದ್ದೇವೆ ಸಾರ್’
ಎಂಬ ಉತ್ತರ ಖಾಯಂ. ಇದರಿಂದ ರೋಸಿ ಹೋಗಿದ್ದ ಅಶೋಕ್ ಅವರು ಎರಡು ಬಾರಿ ಮಂಗಳೂರು ಪೊಲೀಸ್ ಕಮಿಷನರ್ ಭೇಟಿಯಾಗಿ ತನ್ನ ಅಳಲು ತೋಡಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಸ್ಥಳೀಯ ರಾಜಕಾರಣಿಗಳು, ಜಿಲ್ಲಾಧಿಕಾರಿಗಳ ಬಳಿ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ‘ಉದಯವಾಣಿ’ ಕಾವೂರು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ’11 ತಿಂಗಳ ಹಿಂದೆ ಪ್ರಕರಣ ದಾಖಲಾಗಿದೆ. ಈಗಾಗಲೇ ರಾಜ್ಯ, ಹೊರ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿದ್ದೇವೆ. ಎಲ್ಲ ಕೆಲವು ಕಡೆಗಳಲ್ಲಿ ಫೋಟೋಗಳನ್ನು ಹಾಕಿದ್ದೇವೆ. ಸುಮಿತ್ರಾ ಅವರ ಹುಡುಕುವಿಕೆಗೆ ಸರ್ವ ಪ್ರಯತ್ನ ನಡೆಸುತ್ತಿದ್ದೇವೆ’ ಎಂದಿದ್ದಾರೆ.
Related Articles
ಅಶೋಕ್ ಅವರ ಕುಟುಂಬ ದಿನಗೂಲಿ ನೌಕರರಾಗಿದ್ದು, ಒಂದು ಹೊತ್ತಿನ ಊಟ ಮಾಡಬೇಕಾದರೆ ಗಾರೆ ಕೆಲಸಕ್ಕೆ ಹೋಗಲೇಬೇಕಾದ ಪರಿಸ್ಥಿತಿ. ಪತ್ನಿ ಛತ್ರಮ್ಮ ಅವರು ಹತ್ತಿರದ ಮನೆ ಮನೆಗೆ ಕೂಲಿ ಕೆಲಸಕ್ಕೆಂದು ಹೋಗುತ್ತಾರೆ. ಹೀಗಿರುವಾಗ ಇವರ ದಿನದ ಸಂಬಳ ಆಹಾರ ಸಾಮಗ್ರಿಗೇ ಸಾಕಾಗುತ್ತಿತ್ತು. ಚೂರು ಪಾಲು ಉಳಿತಾಯ ಮಾಡಿ ಸುಮಿತ್ರಾ ಅವರಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಇದರೊಡನೆ ಸ್ಕಾಲರ್‌ಶಿಪ್ ಬರುತ್ತಿದ್ದ ಕಾರಣ ಮಗಳೂ ತನ್ನ ಏಳನೇ ತರಗತಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ 8ನೇ ತರಗತಿಗೆ ಸೇರುವ ಹಂತದಲ್ಲಿದ್ದಳು. ಕಲಿಯುವುದರಲ್ಲಿ ಈಕೆ ಬಹಳ ಮುಂದೆ ಇದ್ದಳು. ಇವರ ಮೂವರು ಮಕ್ಕಳ ಪೈಕಿ ಸುಮಿತ್ರಾ ತೀರಾ ಚೂಟಿ. ಓದು ಸಹಿತ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸದಾ ಮುಂದಿದ್ದಳು.
Advertisement
ನನ್ನ ಮಗಳನ್ನು ಹುಡುಕಿಕೊಡಿನಮ್ಮದು ಬಡ ಕುಟುಂಬ. ದುಡಿದ ಕಾಸು ಕೂಡಿಟ್ಟು ಮಗಳ ಸಾಕಿದ್ದೇವೆ. ಇದೀಗ ನಾಪತ್ತೆಯಾಗಿ 11 ತಿಂಗಳು ಕಳೆದರೂ ಸುಳಿವು ಸಿಕ್ಕಿಲ್ಲ. ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸಿ ನನ್ನ ಮಗಳನ್ನು ಹುಡುಕಿ ಕೊಡಬೇಕು.
– ಛತ್ರಮ್ಮ,
ಸುಮಿತ್ರಾ ಅವರ ತಾಯಿ ಹುಡುಕಾಟ ನಡೆಸುತ್ತಿದ್ದೇವೆ
ಎರಡು ತಿಂಗಳ ಹಿಂದೆ ಅಶೋಕ್ ಅವರು ಮಂಗಳೂರಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಎಫ್‌ಐಆರ್ ದಾಖಲೆ ನೀಡಿದ್ದಾರೆ. ಇಲ್ಲಿಂದ ಈ ದಾಖಲೆ ಕಾಣೆಯಾದ ಮಕ್ಕಳ ಬ್ಯೂರೋಗೆ ಸಲ್ಲಿಕೆಯಾಗಿದೆ. ನಾವು ಈ ಮಾಹಿತಿಯನ್ನು ಮಿಸ್ಸಿಂಗ್ ಚೈಲ್ಡ್ ಬ್ಯೂರೋ ಸಾಫ್ಟ್ವೇರ್‌ನಲ್ಲಿ ದಾಖಲಿಸಿ, ಸುಮಿತ್ರಾ ಅವರ ಹುಡುಕಾಟ ನಡೆಸುತ್ತಿದ್ದೇವೆ.
– ಯೋಗೀಶ್ ಎಸ್., ಸಂಯೋಜಕ,
ಕಾಣೆಯಾದ ಮಕ್ಕಳ ಬ್ಯೂರೋ ಮಂಗಳೂರು ನವೀನ್ ಭಟ್ ಇಳಂತಿಲ