ಹಿರೇಕೆರೂರು: ಪಾಲಕರ ವಿಶೇಷ ಕಾಳಜಿಯಿಂದ ವಿಶೇಷ ಚೇತನ ಮಕ್ಕಳು ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂಬುದಕ್ಕೆ ಹಿರೇಕೆರೂರಿನ ಮೇದಾರ ಓಣಿಯ ವಿದ್ಯಾರ್ಥಿನಿ ಗೌತಮಿ ಮಲ್ಲೇಶ ಮೇದಾರ ಸಾಕ್ಷಿಯಾಗಿದ್ದಾಳೆ.
ಇಲ್ಲಿನ ಮೇದಾರ ಓಣಿಯ ನಿವಾಸಿಗಳಾದ ಮಲ್ಲೇಶ ಜ್ಯೋತಿ ದಂಪತಿಯ ಪುತ್ರಿ 10 ವರ್ಷದ ಗೌತಮಿ ಬಹುವಿಧ ನ್ಯೂನತೆಯಿಂದ ಬಳಲುತ್ತಿದ್ದು, ತನಗೆ ಇಷ್ಟವಾಗುವ ಬಟ್ಟೆ, ಊಟ, ಉಪಾಹಾರವನ್ನು ಸಂಜ್ಞೆಯ ಮೂಲಕ ಆಯ್ಕೆ ಮಾಡುತ್ತಾಳೆ. ತನಗೆ ಬೇಕಾದದ್ದನ್ನು ಹಟ ಹಿಡಿದು ಪಡೆದುಕೊಳ್ಳುವ ಮನೋಭಾವ ಅವಳದ್ದಾಗಿದೆ.
ಈ ಮಗುವಿಗೆ ಶಾಲಾ ಪೂರ್ವ ಸಿದ್ಧತಾ ಕೇಂದ್ರದಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು. ಮನೆಯಲ್ಲಿ ಮಗುವಿನ ತಾಯಿ ಜ್ಯೋತಿ ಮೇದಾರ ಅವರ ವಿಶೇಷ ಕಾಳಜಿಯಿಂದಾಗಿ ವಿಶೇಷಚೇತನ ಮಗು ಉತ್ತಮವಾಗಿ ಸಂವೇದನಾ ವಿಕಾಸವಾಗುತ್ತಿದೆ. ಈ ಮಗುವಿಗೆ ಸಂಪೂರ್ಣ ಮಾತನಾಡಲು ಬಾರದಿದ್ದರೂ ಮಾತನಾಡುವ ಭಾಷೆಯನ್ನು ಅರ್ಥ ಮಾಡಿಕೊಂಡು ದಿಕ್ಕುಗಳನ್ನು ಸೂಚಿಸುತ್ತಾಳೆ. ವಾರಗಳನ್ನು ಹೇಳುತ್ತಾಳೆ ಹಾಗೂ ಎಲ್ಲರ ಮಾತಿಗೂ ಸ್ಪಂದಿಸುತ್ತಾಳೆ.
ಈ ಮಗುವಿಗೆ ಸೌಂದರ್ಯೋಪಾಸನೆಯ ಗುಣವೂ ಉತ್ತಮವಾಗಿದ್ದು, ಸೀರೆಯನ್ನು ತೊಟ್ಟು ಮೊಬೈಲ್‌ನಲ್ಲಿ ಫೋಟೋ ತೆಗೆಸಿಕೊಳ್ಳುವುದು ಹಾಗೂ ವಿಡಿಯೋ ಮಾಡಿಸಿಕೊಳ್ಳುವುದು ಇವಳಿಗೆ ಬಹಳ ಇಷ್ಟ. ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ಪ್ರೇರೇಪಿತಳಾಗಿ ಇದೇ ತೆರನಾಗಿ ನಾನು ಕಾಣಬೇಕೆಂದು ಹಠ ಮಾಡುತ್ತಿದ್ದ ಗೌತಮಿಗೆ ಅವರ ತಾಯಿ ಜ್ಯೋತಿಯವರು ಈ ಹಿಂದಿದ್ದ ಟಿಕ್‌ಟಾಕ್ ಯಾಪ್ ಮೂಲಕ ಹಲವು ಅಭಿನಯಗಳನ್ನು ಮಾಡಿದ್ದಾಳೆ. ಗೌತಮಿ ಮಾಡಿದ ಅಭಿನಯಕ್ಕೆ ಸಾವಿರಾರು ಮೆಚ್ಚುಗೆಗಳನ್ನು ಪಡೆದಿದ್ದಾಳೆ.
ಮಗುವಿನಲ್ಲಿರುವ ವಿಶೇಷ ಪ್ರತಿಭೆಯನ್ನು ಪೋಷಕರು ಗುರುತಿಸಿ ಅರಳಿಸುವ ಕೆಲಸ ಮಾಡಿದರೆ ಇಂತಹ ಮಕ್ಕಳು ಬೇಗನೆ ಸ್ಪಂದಿಸುತ್ತಾರೆ ಎಂಬುದಕ್ಕೆ ಗೌತಮಿ ಸಾಕ್ಷಿಯಾಗಿದ್ದಾಳೆ. ಮಗಳಿಗೆ ಮೂರ್ಛೇ ರೋಗವಿರುವುದರಿಂದ ಆಕೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಪ್ರಸ್ತುತ ಕೋವಿಡ್ ದಿಂದಾಗಿ ಬೆಂಗಳೂರಿನಿಂದ ಔಷಧಿ ಪಡೆಯುವುದು ಕಷ್ಟವಾಗಿದೆ ಎನ್ನುತ್ತಾರೆ ಮಗವಿನ ತಾಯಿ ಜ್ಯೋತಿ ಮೇದಾರ. ತಾಲೂಕಿನಲ್ಲಿನ ಇಂತಹ ವಿಶೇಷ ಚೇತನ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಶಿಕ್ಷಕರು ಮನೆಗೆ ಭೇಟಿ ನೀಡಿ ಮನೋಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಪೋಷಕರಿಗೆ ವಿಶೇಷ ಚೇತನ ಮಕ್ಕಳನ್ನು ಪೋಷಿಸುವ ವಿಧಾನಗಳನ್ನು ತಿಳಿಸುತ್ತಿದ್ದಾರೆ.
ವಿಶೇಷ ಚೇತನ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಉತ್ತಮವಾಗಿ ವಿಶೇಷ ಕಾಳಜಿಯಿಂದ ಬೆಳೆಸಲು ಮುಂದಾಗಬೇಕು. ಅಗತ್ಯ ಸಲಹೆ-ಮಾರ್ಗದರ್ಶನಕ್ಕಾಗಿ ಶಿಕ್ಷಣ ಇಲಾಖೆ ಸದಾ ನಿಮ್ಮೊಂದಿಗಿದೆ. ವಿದ್ಯಾರ್ಥಿನಿ ಗೌತಮಿಯನ್ನು ವಿಶೇಷ ಕಾಳಜಿಯಿಂದ ಬೆಳೆಸಿರುವುದಕ್ಕೆ ತಾಯಿಗೆ ಅಭಿನಂದನೆಗಳು.
-ಜಗದೀಶ ಬಳೇಗಾರ, ಕ್ಷೇತ್ರ ಸಮನ್ವಯಾಧಿಕಾರಿ
ಸಿದ್ಧಲಿಂಗಯ್ಯ ಗೌಡರ್