Advertisement

ಮಡಂತ್ಯಾರು ಗ್ರಾಮಸಭೆ

04:10 PM Jan 14, 2018 | Team Udayavani |

ಬೆಳ್ತಂಗಡಿ: ಮಡಂತ್ಯಾರು ಪಾರೆಂಕಿ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು, ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಮಳೆಹಾನಿ ಅನುದಾನ ಮೂಲಕ 2 ಲಕ್ಷ ರೂ. ವೆಚ್ಚದಲ್ಲಿ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಯಿತು. ಆದರೆ ಇದರಿಂದ ರಸ್ತೆ ಧೂಳುಮಯವಾಗಿದೆ. ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದ್ದು, ಶೀಘ್ರ ಸುವ್ಯವಸ್ಥಿತಗೊಳಿಸಿ ಎಂದು ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಸಭಾಂಗಣದಲ್ಲಿ ನಡೆದ ಮಡಂತ್ಯಾರು ಗ್ರಾ.ಪಂ.ನ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಪಾರೆಂಕಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ. ಅವರು ವಿವರಣೆ ನೀಡಿ, ರಸ್ತೆಗೆ ನೀರು ಹರಿಸಿ ಸಮತಟ್ಟು ಮಾಡಿ ಧೂಳು ಉಂಟಾಗದಂತೆ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ಎಂಜಿನಿಯರ್‌ ಅವರಿಗೂ ಸೂಚನೆ ನೀಡಲಾಗಿದೆ ಎಂದರು.

ಬಾವಿ ಸ್ವಚ್ಛ ಯಾರು ಮಾಡುವುದು?
ಕುಕ್ಕಳಬೆಟ್ಟುವಿನಲ್ಲಿ ದ.ಕ. ಜಿ.ಪಂ. ವತಿಯಿಂದ ಬಾವಿ ತೋಡಿ 2 ವರ್ಷಗಳಾದವು. ಆದರೆ ಜನ ಉಪಯೋಗಿಸುವಂತೆ ಸ್ವಚ್ಛ ಮಾಡಿ ಮಾಡಿಕೊಟ್ಟಿಲ್ಲ. ಇತ್ತೀಚೆಗೆ ಗ್ರಾ.ಪಂ. ಬಾವಿ ಸ್ವಚ್ಛ ಮಾಡಿತು. ಬಾವಿ ತೋಡಿಸಿ 2 ವರ್ಷಗಳಾದರೂ ಯಾಕೆ ಜಿ.ಪಂ. ಸುಮ್ಮನೆ ಕುಳಿತಿತ್ತು ಎಂದು ಜಿ.ಪಂ. ಅಭಿಯಂತರನ್ನು ಸ್ಥಳೀಯರು ಪ್ರಶ್ನಿಸಿದರು. ಸೂಕ್ತ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ ಹೊರಬಿತ್ತು.

ಅಂತರ್ಜಲ ಮಟ್ಟ ಹೆಚ್ಚಿಸಿ
ಮಡಂತ್ಯಾರು ಚರ್ಚ್‌ ಧರ್ಮಗುರು ಫಾ| ಬಾಸಿಲ್‌ವಾಸ್‌ ಮಾತನಾಡಿ, ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ನೀರಿಂಗಿಸುವ ಕಾರ್ಯಕ್ರಮಗಳು ನಡೆಯಬೇಕು. ಮಳೆಗಾಲಕ್ಕೆ ಪೂರ್ವತಯಾರಿ ಮಾಡಿಕೊಳ್ಳಬೇಕು. ತೋಡುಗಳಿಗೆ ಸಾಂಪ್ರದಾಯಿಕ ಕಟ್ಟು ನಿರ್ಮಿಸಲು ಜನರು ಮುಂದಾಗಬೇಕು. ಈ ಕಾರ್ಯಕ್ಕೆ ಸೇಕ್ರೆಡ್‌ ಹಾರ್ಟ್‌ ವಿದ್ಯಾಸಂಸ್ಥೆಯ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಸಹಕಾರ ನೀಡುತ್ತಾರೆ ಎಂದರು.

ಸಾಂಪ್ರದಾಯಿಕ ಕಟ್ಟು ನಿರ್ಮಿಸಲು ಸ್ವಯಂಪ್ರೇರಿತವಾಗಿ ಜನರು ಮುಂದೆ ಬಂದರೆ ಗ್ರಾ.ಪಂ. ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. ಮಡಂತ್ಯಾರು ಗ್ರಾಪಂ ಪಿ.ಡಿ.ಒ. ನಾಗೇಶ್‌ ಎಂ. ವರದಿ ವಾಚಿಸಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಜಯಂತಿ ಪಿ. ಉಪಸ್ಥಿತರಿದ್ದರು.

Advertisement

ಬಂಗೇರಕಟ್ಟೆ ಕೆರೆ ಉಲ್ಲೇಖ
ಬಂಗೇರಕಟ್ಟೆ ಕೆರೆ ಅಭಿವೃದ್ಧಿ ಬಗ್ಗೆ ಕೆರೆ ಅಭಿವೃದ್ಧಿ ಸಂಯೋಜಕ ಕೆ.ಎಸ್‌. ಶೆಟ್ಟಿ ಉಲ್ಲೇಖಿಸಿದರು. ಕೆರೆ ಅಭಿವೃದ್ಧಿಗೆ ಶೀಘ್ರದಲ್ಲಿ ಚಾಲನೆ ದೊರೆಯಲಿದ್ದು, ಗ್ರಾ.ಪಂ.ನ ಸಂಪೂರ್ಣ ಸಹಕಾರ ಯಾಚಿಸಿದರು. ಗ್ರಾ.ಪಂ. ಸದಸ್ಯರ ಸಹಮತ ವ್ಯಕ್ತವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next