ಮುಂಬಯಿ: ಶ್ರೀ ಸಂಸ್ಥಾನಂ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಪತಿಗಳಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ತಮ್ಮ ಪಟ್ಟಶಿಷ್ಯರಾದ ಶ್ರೀಮದ್ ವಿದ್ಯಾಧೀಶ ತೀರ್ಥರನ್ನೊಳಗೊಂಡ ಪ್ರಸ್ತುತ ವರ್ಷದ ಚಾತುರ್ಮಾಸ್ಯ ವ್ರತಾಚರಣೆಗೆ ಆ. 2 ರಂದು ಹುಬ್ಬಳ್ಳಿಯ ಶಾಖಾ ಮಠದ ವಿದ್ಯಾಧಿರಾಜ ಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಿದರು.
ಆ ದಿನ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮವಾಗಿ ಸುಪ್ರಭಾತ ಸೇವೆ ನಡೆಯಿತು. ಆನಂತರ ಮೃತ್ತಿಕಾ ಪೂಜನ, ಮಹಾಪೂಜೆ, ಪ್ರಸಾದ ಅನುಗ್ರಹ ಸಂತರ್ಪಣೆ ನೆರವೇರಿತು. ಬಳಿಕ ಶ್ರೀಗಳು ಸಂಜೆ 5.30 ಕ್ಕೆ ವೇದವ್ಯಾಸ ಪೂಜೆಗೈದರು. ಕೇರಳ, ಗೋವಾ, ಬೆಂಗಳೂರು, ಕರಾವಳಿ ಕರ್ನಾಟಕ, ಮುಂಬಯಿ, ಮಹಾರಾಷ್ಟ್ರದ ವಿವಿಧೆಡೆಗಳಿಂದ ಹಾಗೂ ಕೊಲ್ಹಾಪುರ, ಧಾರವಾಡ, ಹುಬ್ಬಳ್ಳಿ, ದೆಹಲಿ ಇನ್ನಿತರೆಡೆಗಳ ಸಮಾಜ ಬಾಂಧವರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಮಾಜದ ಗಣ್ಯರುಗಳಾದ ಕೇಂದ್ರ ಸಮಿತಿ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಅಧ್ಯಕ್ಷ ಶ್ರೀನಿವಾಸ ವಾಸುದೇವ ಶೆಣ್ಣಿದೆಪ್ಪೆ, ಹುಬ್ಬಳ್ಳಿ ವಿದ್ಯಾಧಿರಾಜ ಭವನದ ವ್ಯವಸ್ಥಾಪಕ ಅಧ್ಯಕ್ಷ ರಂಗಪ್ಪ ಕಾಮತ್, ಜಿಎಸ್‌ಬಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಮಚಂದ್ರ ನಾರಾಯಣ ನಾಯಕ್, ರಾಜನ್ ಭಟ್, ದಿನೇಶ್ ರಾಮಚಂದ್ರ, ವೆಂಕಟ್ರಾಯ ಗೋವಿಂದ ಪ್ರಭು, ವಿನಾಯಕ ರಾಮದಾಸ್ ರಾಮನಾಥ್ ಭಟ್, ಜಿ. ಎಸ್. ಕಾಮತ್, ವಿಠuಲ್‌ದಾಸ್ ಶ್ಯಾನ್‌ಭಾಗ್, ಗೋಪಾಲಕೃಷ್ಣ ಪ್ರಭು, ಸುದರ್ಶನ ಕಾಮತ್, ಗಿರೀಶ್ ಶ್ಯಾನ್‌ಭಾಗ್, ಸದಾನಂದ ಶೇಷಗಿರಿ ಕಾಮತ್, ಗಣೇಶ್ ಶೇಷಗಿರಿ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಚಾತುರ್ಮಾಸ್ಯದುದ್ದಕ್ಕೂ ಆ. 15 ರಂದು ನಾಗರ ಪಂಚಮಿ, ಆ. 25 ರಂದು ಶ್ರಾವಣ ಉಪಕ್ರಮ, ಸೆ. 2 ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 13 ರಂದು ಗಣೇಶ ಚತುರ್ಥಿ, ಸೆ. 24 ರಂದು ಅನಂತ ಚತುರ್ದಶಿ, ಇನ್ನಿತರ ಹಬ್ಬಹರಿದಿನಗಳು ವಿವಿಧ ಧಾರ್ಮಿಕ ಪೂಜಾ ಕೈಗೊಂರ್ಯಗಳೊಂದಿಗೆ ನಡೆದು ಕೊನೆಯ ದಿನ ಮೃತ್ತಿಕಾ ವಿಸರ್ಜನೆಯೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಳ್ಳಲಿದೆ.