Advertisement

MLA ಸುನಿಲ್ ಕುಮಾರ್ ರಾಜೀನಾಮೆ ನೀಡದಿದ್ದರೆ ಪರಶುರಾಮನೇ ಶಿಕ್ಷೆ ನೀಡುತ್ತಾನೆ: ಮುತಾಲಿಕ್

03:11 PM Oct 17, 2023 | Team Udayavani |

ಉಡುಪಿ: ಮನೆಮನೆಯಲ್ಲಿ ಆರಾಧನೆ ಮಾಡುವ ಪರಶುರಾಮನಿಗೆ ನೀಚ ರಾಜಕಾರಣಿಯಾದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮೋಸ ಮಾಡಿದ್ದಾರೆ. ಸ್ವಾರ್ಥ, ಭ್ರಷ್ಟಾಚಾರಕ್ಕೆ, ದೇವರು, ದೇವಸ್ಥಾನವನ್ನೂ ಬಿಡುವುದಿಲ್ಲ ಎಂಬುವುದನ್ನು ತೋರಿಸುವ ಮೂಲಕ ತುಳುನಾಡು ಹಾಗೂ ಹಿಂದೂ ಸಮಾಜ ತಲೆತಗ್ಗಿಸುವಂತಹ ಕೆಲಸ ಕಾರ್ಕಳ ಶಾಸಕರಿಂದ ನಡೆದಿದೆ. ಈ ಬಗ್ಗೆ ಪೂರ್ಣ ತನಿಖೆಯಾಗುವವರೆಗೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಕಾಮಗಾರಿ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.

Advertisement

ಉಡುಪಿ ಜಿಲ್ಲೆ ದೇವರ ನಾಡು. ಆಧ್ಯಾತ್ಮಿಕತೆ ಇರುವ ಜಿಲ್ಲೆಯಲ್ಲಿ ಇಂತಹ ಅಪಚಾರ ಎಸಗಿರುವ ಶಾಸಕ ಇನ್ನೂ ಅಧಿಕಾರಕ್ಕೆ ಅಂಟಿಕೊಂಡಿರುವುದು ಶೋಭೆ ತರುವ ವಿಚಾರವಲ್ಲ. ಹಿಂದುತ್ವದ ಹೋರಾಟಕ್ಕೆ ಅಪಮಾನ ಮಾಡುವ ಜತೆಗೆ ಶಾಸಕ ಸ್ಥಾಾನಕ್ಕೆ ಕಳಂಕ ಉಂಟುಮಾಡಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಪರಶುರಾಮನೇ ಅವರಿಗೆ ಶಿಕ್ಷೆ ನೀಡುತ್ತಾನೆ ಎಂದರು.

ಚುನಾವಣೆ ನಿಮಿತ್ತ ತರಾತುರಿಯಿಂದ ಥೀಮ್ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿಯನ್ನು ಉದ್ಘಾಟಿಸಲಾಗಿದೆ. ಆರಂಭದಲ್ಲಿ ಎಂಜಿನಿಯರ್ ಒಂದು ವರ್ಷಗಳ ಕಾಲಾವಕಾಶ ಕೇಳಿದ್ದರು. ಆದರೆ ಆ ಸಂದರ್ಭದಲ್ಲಿ ಚುನಾವಣೆ ಮುಗಿಯುವ ಕಾರಣ 41 ದಿನಗಳಲ್ಲಿ ಕೆಲಸ ಮುಗಿಸಲು ಶಾಸಕರು ಸೂಚಿಸಿದ್ದರು. ಅದರಂತೆ ಅಲ್ಲಿ ಅನುಮತಿ ಇಲ್ಲದಿದ್ದರೂ ಕಳಪೆ ಕಾಮಗಾರಿ ನಡೆಸಿ, ನಿಯಮಾವಳಿಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ. ಅದೇ ಬಡವರು ಮನೆ ಕಟ್ಟಿದ್ದರೆ ಇಷ್ಟು ಹೊತ್ತಿಗಾಗಲೇ ಧ್ವಂಸ ಮಾಡುತ್ತಿದ್ದರು. ರಾಜಕಾರಣಿ ಕಂದಾಯ ಇಲಾಖೆಯ ಆದೇಶವನ್ನು ಉಲ್ಲಂಘಿಸಿದರೂ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾದರೂ ಹೇಗೆ? ಅನುಮತಿ ಇಲ್ಲದ ಸ್ಥಳಕ್ಕೆ ಜಿಲ್ಲಾಡಳಿತ ಯಾವ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:Chitradurga; ಬಿಜೆಪಿ ಪಕ್ಷದವರಿಗೆ ಕಲೆಕ್ಷನ್ ಮಾಡಿ ಅಭ್ಯಾಸವಾಗಿದೆ: ಜಮೀರ್ ಅಹಮದ್ ಖಾನ್

33 ಅಡಿ ಎತ್ತರದ ಕಂಚಿನ ಮೂರ್ತಿ ಎಂದು ಆರಂಭದಲ್ಲಿ ಶಾಸಕ ಸುನಿಲ್ ಕುಮಾರ್ ತಿಳಿಸಿದ್ದರು. ಆದರೆ ಇವತ್ತು ಆ ಮೂರ್ತಿಯೆ ಇಲ್ಲವಾಗಿದೆ. ಈ ಮೂಲಕ ಚುನಾವಣೆಯಲ್ಲಿ ಗೆಲ್ಲಿಸಿದ ಕಾರ್ಕಳದ ಜನತೆಗೆ ಶಾಸಕರು ಮೋಸ ಎಸಗಿದ್ದಾರೆ ಎಂದರು.

Advertisement

ಈ ಅವ್ಯವಹಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೂ ಶಾಮಿಲಾಗಿರುವುದು ತಿಳಿಯುತ್ತದೆ. ಈಗ ಕಾಂಗ್ರೆಸ್ ಆಡಳಿತದಲ್ಲಿ ಆ ಮೂರ್ತಿಯೇ ಮಾಯವಾಗಿದೆ. ಒಂದೊಂದು ಭಾಗವನ್ನೂ ತೆಗೆಯಲಾಗಿದೆ. ಆದರೂ ಕಾಂಗ್ರೆಸ್‌ ನವರು ಬಾಯಿ ಮುಚ್ಚಿ ಕುಳಿತುಕೊಂಡಿರುವುದು ಏಕೆ ಎಂದರು.

ಈ ಬಗ್ಗೆ ಜಿಲ್ಲಾಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸೂಕ್ತ ತನಿಖೆಯಗಬೇಕು. ಅದುವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದರು.

ಶಾಸಕ ಸ್ಥಾನಕ್ಕೆ ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು. ಜತೆಗೆ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು. ಹಿಂದಿನ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದು, ಅವರನ್ನು ಕೂಡಲೇ ಅಮಾನತು ಮಾಡಬೇಕು. ಅಲ್ಲಿ ನಿರ್ಮಿಸಲಾದ ಹೊಟೇಲ್‌ಗೆ ಅನುಮತಿ ಇಲ್ಲ. ಮೂರ್ತಿಯೂ ನಕಲಿ, ಕಟ್ಟಡಕ್ಕೂ ಅನುಮತಿ ಇಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಈ ಬಾರಿ ಅ.30ರಿಂದ ನ.5ರವರೆಗೆ ದತ್ತಮಾಲೆ ಅಭಿಯಾನ ನಡೆಯಲಿದೆ. ನಾಗಸಾಧುಗಳು ಬರಲಿದ್ದಾರೆ. ಶೋಭಾಯಾತ್ರೆ, ಧರ್ಮಸಭೆ ಸಹಿತ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ಸುದರ್ಶನ ಪೂಜಾರಿ, ಸಂಘಟನಾ ಕಾರ್ಯದರ್ಶಿ ಕೀರ್ತಿರಾಜ್ ಕಿದಿಯೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next