ಸವದತ್ತಿ: ಪರಸಗಡ ನಾಟಕೋತ್ಸವದ 25ನೇ ವರ್ಷಾಚರಣೆ ನಿಮಿತ್ತ ಕೋಟೆಯಲ್ಲಿ ಫೆ.19ರಿಂದ ಮಾ.27ರವರೆಗೆ ಮೂರು ಹಂತದಲ್ಲಿ 25 ದಿನ, 25 ನಾಟಕಗಳು ಬೆಂಗಳೂರಿನ ಕನ್ನಡ ಮತ್ತು ಸಾಂಸ್ಕೃತಿಕ ನಿರ್ದೇಶನಾಲಯ ಮತ್ತು ಸ್ಥಳೀಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ
ಸಹಯೋಗದಲ್ಲಿ ಜರುಗಲಿವೆ.
ಫೆ.19ರಿಂದ 28ರವರೆಗೆ ಪ್ರಥಮ, ಮಾ.5ರಿಂದ 13ರವರೆಗೆ ದ್ವಿತೀಯ, ಮಾ.20 ರಿಂದ 27ರವರೆಗೆ ತೃತೀಯ ಹಂತದಲ್ಲಿ ಒಟ್ಟು 25 ನಾಟಕಗಳು ಪ್ರದರ್ಶನ ಕಾಣಲಿವೆ ಎಂದು ಸಂಘಟನೆ ಪ್ರಮುಖ ಜಾಕೀರ್ ನದಾಫ್ ತಿಳಿಸಿದ್ದಾರೆ.
ಹವ್ಯಾಸಿ ರಂಗಭೂಮಿ ಕುರಿತು ರಂಗಕರ್ಮಿಗಳಿಗೆ ಪ್ರೇಕ್ಷಕರಿಗೆ ಪರಿಚಯವಿಲ್ಲದ 1997ರ ಕಾಲದಲ್ಲಿ ರಂಗಾಸಕ್ತರಿಂದ ರಂಗಾರಾಧನಾ ಸಾಂಸ್ಕೃತಿಕ ಸಂಘಟನೆ ಜನ್ಮ ತಾಳಿತು. ಸಂಸ್ಥೆಯು 2000ರಿಂದ ಪರಸಗಡ ನಾಟಕೋತ್ಸವ ಹೆಸರಿನಲ್ಲಿ ನಾಟಕಗಳ ಉತ್ಸವ ಆಯೋಜಿಸುತ್ತ ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸಿದೆ.
ನಿನಾಸಂ ಪಧವೀದರ ವಿನೋದ ಅಂಬೇಕರ ಆರಂಭಿಸಿದ ರಂಗ ತರಬೇತಿ ಶಿಬಿರದಲ್ಲಿ ಮೃತ್ಛಕಟಿಕ ಮೊದಲ ನಾಟಕ ಪ್ರಚಾರಪಡಿಸಿದಾಗ ಕೇವಲ 9 ಟಿಕೆಟ್ ಮಾರಾಟದಿಂದ 135 ರೂ. ಸಂಗ್ರಹವಾಗಿತ್ತು. ಆ ಸಂದಿಗ್ಧ ಪರಿಸ್ಥಿತಿ ಎದುರಿಸಿ ಇದೀಗ 25 ನಾಟಕ ಪ್ರದರ್ಶಿಸಲು ಸಂಸ್ಥೆ ಸಜ್ಜಾಗಿದೆ. 5 ನಾಟಕಗಳಿಂದ ಆರಂಭವಾದ ಉತ್ಸವ ಇದೀಗ 9ಕ್ಕೂ ಅಧಿಕ ನಾಟಕ ಪ್ರದರ್ಶಿಸುವ ಮಟ್ಟಿಗೆ ರಂಗಾಸಕ್ತ ಸೇರಿ ಜನತೆಯನ್ನು ಸೆಳೆಯುತ್ತಿದೆ. ಉತ್ಸವದಲ್ಲಿ ನಿನಾಸಂ,
ಶಿವಸಂಚಾರ, ಜಮುರಾ, ಬೆಳಗಾವಿ, ಧಾರವಾಡ, ಗದಗ, ಇಳಕಲ್ಲ, ಶಿವಮೊಗ್ಗ ಹಾಗೂ ಪ್ರಖ್ಯಾತ ತಂಡಗಳು ಭಾಗಿಯಾಗಿವೆ.
ಬಾಗಲಕೋಟೆ, ಹುಕ್ಕೇರಿ, ಕೂಡಲಸಂಗಮ, ಇಳಕಲ್ಲ, ಹುನಗುಂದ, ಬೆಳಗಾವಿ, ನಾಗಮಂಗಲ, ಬೆಂಗಳೂರು, ಮೈಸೂರು, ವಕ್ಕುಂದ, ಕಿತ್ತೂರ ಮತ್ತು ಬೆಳವಡಿಗಳಲ್ಲಿ ಸಂಸ್ಥೆಯ ನಾಟಕಗಳು ಯಶಸ್ವಿ ಪ್ರದರ್ಶನ ಕಂಡಿವೆ. ರಂಗ ಚಂದ್ರಮಾ, ರಂಗ ಆರಾಧಕ, ರಂಗ ಚಂದ್ರ ಪ್ರಶಸ್ತಿಗಳು ಸಂಸ್ಥೆಯಿಂದ ಪ್ರಧಾನವಾಗಲಿದ್ದು, ನಾಟಕೋತ್ಸವ ಯಶಸ್ವಿ ಪ್ರದರ್ಶನಕ್ಕೆ ಮಹನೀಯರ ಸಲಹೆ ಮತ್ತು ಪೋಷಣೆಯೂ ಇದೆ.