Advertisement
ಮಿಮ್ಸ್‌ನಲ್ಲಿ ತಂತ್ರಜ್ಞರು ಮಾಡಬೇಕಾದ ಬಹಳಷ್ಟು ಕೆಲಸವನ್ನು ಪ್ರಾಕ್ಟಿಕಲ್ ಹೆಸರಿನಲ್ಲಿ ವಿದ್ಯಾರ್ಥಿಗಳೇ ಮಾಡುತ್ತಿದ್ದಾರೆ. ಪ್ಯಾರಾಮೆಡಿಕಲ್ ಕಲಿಯಲು ಬರುವ ವಿದ್ಯಾರ್ಥಿಗಳ ಪೈಕಿ ಹುಡುಗಿಯರಿಗಿಂತ ಹುಡುಗರಿಗೆ ಹೆಚ್ಚು ಕೆಲಸ ನೀಡಲಾಗುತ್ತಿದೆ. ಹಗಲು-ರಾತ್ರಿ ಎನ್ನದೆ ದುಡಿಸಿಕೊಳ್ಳುತ್ತಿರುವುದರಿಂದ ಅವರಿಗೆ ಓದುವುದಕ್ಕೆ ಸಮಯಾವಕಾಶವೇ ಸಿಗದಂತಾಗಿದೆ. ಈ ಕೆಲಸದ ಒತ್ತಡ ಸಹಿಸಲಾಗದೆ ಎಷ್ಟೋ ವಿದ್ಯಾರ್ಥಿಗಳು ಅರ್ಧಕ್ಕೇ ಕೋರ್ಸ್ ಬಿಟ್ಟು ಹೋಗುತ್ತಿದ್ದಾರೆ. ಇದು ವಿಚಿತ್ರವೆನಿಸಿದರೂ ಸತ್ಯವಾಗಿದೆ.
Related Articles
Advertisement
ಮೊದಲನೇ ವರ್ಷದಲ್ಲಿ ಎಲ್ಲಾ ವಿಭಾಗದವರಿಗೂ ಒಂದೇ ಮಾದರಿಯ ತರಗತಿಯನ್ನು ತೆಗೆದುಕೊಳ್ಳಲಾಗುತ್ತದೆ. ಎರಡನೇ ವರ್ಷದಿಂದ ಅವರವರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪ್ರತ್ಯೇಕಗೊಳ್ಳುತ್ತಾರೆ.
ಆಸ್ಪತ್ರೆಯ ಎಕ್ಸ್-ರೇ, ಲ್ಯಾಬೋರೇಟರಿ, ಡಯಾಲಿಸಿಸ್, ಎಂಆರ್‌ಡಿ, ರಕ್ತನಿಧಿ ಕೇಂದ್ರ, ಪೆಥಾಲಜಿ, ಸ್ಕ್ಯಾನಿಂಗ್ ಸೆಂಟರ್, ಎಕೋ, ಇಸಿಜಿ, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗದಲ್ಲಿ ಸರ್ಕಾರಿ ಸಿಬ್ಬಂದಿ ಇದ್ದರೂ ಬೇಡಿಕೆಯಷ್ಟಿಲ್ಲ. ಈ ಕೊರತೆ ನೀಗಿಸಲು ಹೊರ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರ ನಡುವೆಯೂ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹಾಕಲಾಗುತ್ತಿದೆ. ತಂತ್ರಜ್ಞರ ನಿಗದಿಯಷ್ಟು ಇಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಅಧಿಕವಾಗಿರುವುದರಿಂದ ರೋಗಿಗಳ ಒತ್ತಡವನ್ನು ದೂರ ಮಾಡುವ ಉದ್ದೇಶದಿಂದ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳನ್ನೇ ಅಲ್ಲಿನ ಕೆಲಸಕ್ಕೆ ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಮಿಮ್ಸ್ ವಲಯದಿಂದಲೇ ಕೇಳಿ ಬರುತ್ತಿವೆ.
ವಾರದಲ್ಲಿ ಮೂರು ದಿನ ಥಿಯರಿ: ಪ್ರತಿ ದಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಥಿಯರಿ ಇರುವುದಿಲ್ಲ. ಪ್ರಾಕ್ಟಿಕಲ್ಸ್ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಆಯಾ ವಿಭಾಗದ ಬೋಧಕರು ವಾರದಲ್ಲಿ ಎರಡರಿಂದ ಮೂರು ದಿನ ಮಾತ್ರ ಥಿಯರಿ ತರಗತಿಗಳನ್ನು ತೆಗೆದುಕೊಳ್ಳುವರು. ಹಿಂದೆಲ್ಲಾ ಥಿಯರಿಗೆ 45 ಅಂಕಗಳಿದ್ದು, ಈಗ ಗರಿಷ್ಠ ಅಂಕವನ್ನು 100 ಕ್ಕೆ ನಿಗದಿಪಡಿಸಲಾಗಿದೆ. ಪ್ರಾಕ್ಟಿಕಲ್ಸ್ ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯವೋ ಅದೇ ರೀತಿ ಥಿಯರಿಯೂ ಮುಖ್ಯವಾಗಿದೆ. ಹೆಚ್ಚು ಕಾಲ ಆಸ್ಪತ್ರೆಯ ವಿವಿಧ ತಾಂತ್ರಿಕ ವಿಭಾಗದಲ್ಲೇ ಇರುವ ವಿದ್ಯಾರ್ಥಿಗಳು ಥಿಯರಿಯನ್ನು ಓದಲು, ಅದನ್ನು ಅರ್ಥೈಸಿಕೊಂಡು ಬರೆಯಲಾಗದೆ ಪರೀಕ್ಷೆಯಲ್ಲಿ ನಪಾಸಾಗುತ್ತಿದ್ದಾರೆ. ಇದು ಫಲಿತಾಂಶ ಕುಸಿಯುವುದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಕಮರುತ್ತಿರುವ ಭವಿಷ್ಯ: ಬೋಧಕರು ವಿದ್ಯಾರ್ಥಿಗಳನ್ನು ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕ ತರಗತಿ ಹೆಸರಿನಲ್ಲಿ ದುಡಿಸಿಕೊಳ್ಳುವ ಮೂಲಕ ಅವರ ಭವಿಷ್ಯವನ್ನು ಕಮರಿಹೋಗುವಂತೆ ಮಾಡುತ್ತಿದ್ದಾರೆ. ಪ್ಯಾರಾಮೆಡಿಕಲ್ ಮಹತ್ವವನ್ನು ಬೋಧಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿಲ್ಲ. ಕೋರ್ಸ್‌ನ ಉಪಯೋಗ ಪಡೆದು ಭವಿಷ್ಯವನ್ನು ಯಾವ ರೀತಿ ಉಜ್ವಲಗೊಳಿಸಿಕೊಳ್ಳಬೇಕೆಂಬ ವಿಚಾರ ತಿಳಿಯದ ವಿದ್ಯಾರ್ಥಿಗಳು ಅರ್ಧಂಬರ್ಧ ಕೋರ್ಸ್ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಟೆಕ್ನಿಷಿಯನ್ಸ್‌ಗಳ ಜೊತೆ ವಿದ್ಯಾರ್ಥಿಗಳ ಹೊಂದಾಣಿಕೆ: ಪ್ಯಾರಾಮೆಡಿಕಲ್ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿರುವ ಆಯಾ ವಿಭಾಗಗಳ ತಂತ್ರಜ್ಞರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಲಿಯುವ ಆಸಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಏಕೆಂದರೆ, ಪ್ಯಾರಾಮೆಡಿಕಲ್ ಕೋರ್ಸ್ ಪೂರ್ಣಗೊಳಿಸದಿದ್ದರೂ ಆಸ್ಪತ್ರೆಗಳಲ್ಲಿ ಕಲಿಸಿದ ತಂತ್ರಜ್ಞರ ನೆರವಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶವೂ ಇದರಲ್ಲಿದೆ. ಇದೇ ಕಾರಣಕ್ಕೆ ತಂತ್ರಜ್ಞರು ಮಾಡಬೇಕಾದ ಕೆಲಸವನ್ನೆಲ್ಲಾ ವಿದ್ಯಾರ್ಥಿಗಳೇ ಮಾಡುತ್ತಿದ್ದಾರೆ. ತಂತ್ರಜ್ಞರ ಗೈರಾದಾಗಲೂ ವಿದ್ಯಾರ್ಥಿಗಳೇ ಎಲ್ಲಾ ಕೆಲಸವನ್ನು ನಿಭಾಯಿಸುತ್ತಿದ್ದು, ಥಿಯರಿ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಫಲಿತಾಂಶ ಕುಸಿಯುವುದಕ್ಕೆ ಮತ್ತೂಂದು ಕಾರಣವಾಗಿದೆ. ಕಲಿತಷ್ಟೇ ಸಾಕು ಎಂದು ಹಲವು ವಿದ್ಯಾರ್ಥಿಗಳು ಕೋರ್ಸ್ ಕೈಬಿಟ್ಟು ಉದ್ಯೋಗದ ಹಾದಿ ಹಿಡಿಯುತ್ತಿದ್ದಾರೆ.
● ಮಂಡ್ಯ ಮಂಜುನಾಥ್