Advertisement
ಅರ್ಹತಾಸುತ್ತಿನಲ್ಲಿ 7ನೇ ಸ್ಥಾನ ಪಡೆದಿದ್ದ ರುಬಿನಾ ಫೈನಲ್ನಲ್ಲಿ ಅದ್ಭುತವಾಗಿ ತಿರುಗಿಬಿದ್ದರು. ಆರಂಭದಲ್ಲಿ 6ನೇ ಸ್ಥಾನಿಯಾಗಿದ್ದ ಅವರು ನಂತರ 4ನೇ ಸ್ಥಾನಕ್ಕೇರಿದರು. ಕಡೆಗೆ 3ನೇ ಸ್ಥಾನಕ್ಕೆ ತಲುಪಿ ಕಂಚನ್ನು ಖಾತ್ರಿಪಡಿಸಿಕೊಂಡರು.
Related Articles
Advertisement
ರುಬಿನಾ ಫ್ರಾನ್ಸಿಸ್ 1999ರಲ್ಲಿ ಮಧ್ಯಪ್ರದೇಶದಲ್ಲಿ ಜನಿಸಿದರು. ಹುಟ್ಟುವಾಗಲೇ ಕಾಲಿನ ನ್ಯೂನತೆಯಿತ್ತು.
ರುಬಿನಾ ತಂದೆ ಸೈಮನ್ ಫ್ರಾನ್ಸಿಸ್ ಜಬಲ್ಪುರ್ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ರುಬಿನಾಗೆ ಶೂಟಿಂಗ್ ತರಬೇತಿ ಕೊಡಿಸಲು ತೀವ್ರ ಹಣಕಾಸಿನ ಮುಗ್ಗಟ್ಟು ಕಾಡಿದಾಗ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಆರಂಭಿಸಿದರು. ಬಾಲ್ಯದಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದ ರುಬಿನಾ, 2006ರಲ್ಲಿ ಜಬಲ್ಪುರ್ದಲ್ಲಿ ಶೂಟಿಂಗ್ ಅಕಾಡೆಮಿಯೊಂದರ ಮೂಲಕ ಈ ಸ್ಪರ್ಧೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. 2015ರಲ್ಲಿ ರುಬಿನಾ ವೃತ್ತಿಪರ ಕ್ರೀಡೆಗೆ ಅಡಿಯಿಟ್ಟರು.
ಪ್ಯಾರಾ ಶೂಟಿಂಗ್ ವಿಶ್ವವಿಜೇತೆ:
2021ರಲ್ಲಿ ಪೆರುವಿನಲ್ಲಿ ನಡೆದಿದ್ದ ವಿಶ್ವ ಶೂಟಿಂಗ್ ಪ್ಯಾರಾ ನ್ಪೋರ್ಟ್ಸ್ ಕಪ್ನಲ್ಲಿ ಸ್ಪರ್ಧಿಸಿ, ವಿಶ್ವ ದಾಖಲೆ (238.1 ಅಂಕ) ಸಹಿತ ಬಂಗಾರ ಗೆದ್ದ ಕಾರಣ ರುಬಿನಾಗೆ ಟೋಕಿಯೊ ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಲಭಿಸಿತ್ತು. ಹೀಗೆ ಟೋಕಿಯೋದಲ್ಲಿ ಸ್ಪರ್ಧಿಸಿದ್ದ ರುಬಿನಾ, ಅಲ್ಲಿ 7ನೇ ಸ್ಥಾನ ಪಡೆದಿದ್ದರು. ಇದಕ್ಕೂ ಮುನ್ನ 2017ರಲ್ಲಿ ಬ್ಯಾಂಕಾಕ್ನಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಶೂಟಿಂಗ್ನಲ್ಲೂ ಜೂನಿಯರ್ ವಿಶ್ವದಾಖಲೆ ನಿರ್ಮಿಸಿದ್ದರು. 19ನೇ ವಯಸ್ಸಿನಲ್ಲಿ 2018ರ ಏಷ್ಯನ್ ಪ್ಯಾರಾ ಗೇಮ್ಸ್ಗೆ ಅರ್ಹತೆ ಪಡೆದಿದ್ದರು. 2019ರಲ್ಲಿ ಕ್ರೊವೇಶಿಯಾದಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಚಾಂಪಿಯನ್ಶಿಪ್ನಲ್ಲಿ ಕಂಚಿನ ಸಾಧನೆ ಮೆರೆದಿದ್ದರು.
ಗಗನ್ ನಾರಂಗ್ “ಗ್ಲೋರಿ’ಯೇ ಪ್ರೇರಣೆ: ರುಬಿನಾ ಫ್ರಾನ್ಸಿಸ್ಗೆ ಶಾಲಾ ಕಲಿಕೆಗಿಂತ ಹೆಚ್ಚೇನೋ ಸಾಧಿಸಬೇಕೆನ್ನುವ ಹಂಬಲ. ಶೂಟಿಂಗ್ ದಿಗ್ಗಜ ಗಗನ್ ನಾರಂಗ್ ಅವರ ಅಕಾಡೆಮಿ, “ಗನ್ಸ್ ಫಾರ್ ಗ್ಲೋರಿ’ ಎನ್ನುವ ಕಾರ್ಯಕ್ರಮದಡಿಯಲ್ಲಿ ಶೂಟಿಂಗ್ ಪ್ರಚರುಪಡಿಸುವ ಸಲುವಾಗಿ ರುಬಿನಾ ಅವರಿದ್ದ ಶಾಲೆಗೆ ಭೇಟಿ ನೀಡಿತ್ತು. ಈ ವೇಳೆ ಶೂಟಿಂಗ್ ಶಿಬಿರಕ್ಕೆ ಸೇರಿಕೊಂಡ ರುಬಿನಾ, ತನ್ಮಯತೆಯಿಂದ ಶೂಟಿಂಗ್ನಲ್ಲಿ ತೊಡಗಿಕೊಂಡರು. ಜಬಲ್ಪುರ್ ಅಕಾಡೆಮಿಯಲ್ಲಿ ಕೋಚ್ ನಿಶಾಂತ್ ನಾಥ್ವಾನಿ ಅವರಿಂದ ಆರಂಭಿಕ ತರಬೇತಿ ಪಡೆದ ರುಬಿನಾ, ಬಳಿಕ 2017ರಲ್ಲಿ ಭೋಪಾಲ್ನ ಎಂಪಿ ಶೂಟಿಂಗ್ ಅಕಾಡೆಮಿಯಲ್ಲಿ ಕೋಚ್ ಜಸ್ಪಾಲ್ ರಾಣಾ ಅವರ ಗರಡಿಯಲ್ಲಿ ಪಳಗಿದರು.
ಪೆಟ್ರೋಲ್ ಹಾಕಿಸಲು ಕಾಸಿಲ್ಲದೆ ಪರದಾಡಿದ್ದ ಅಪ್ಪ: ಬಾಲ್ಯದಿಂದಲೂ ರುಬಿನಾ ಬಹಳ ಕಷ್ಟದ ದಿನಗಳನ್ನು ದಾಟಿ ಬಂದಿದ್ದಾರೆ. ಹೀಗೆಂದು ರುಬಿನಾ ಅವರ ತಂದೆಯೇ ಹೇಳಿಕೊಂಡಿದ್ದಾರೆ. “ಆರಂಭದ ದಿನಗಳಲ್ಲಿ ನಾವು ಬಹಳಷ್ಟು ಕಷ್ಟಪಟ್ಟಿದ್ದೇವೆ. ರುಬಿನಾ ಅವರನ್ನು ಜಬಲ್ಪುರ್ನ ಶೂಟಿಂಗ್ ಅಕಾಡೆಮಿಗೆ ಕರೆದೊಯ್ಯಲು ಬೈಕ್ಗೆ ಪೆಟ್ರೋಲ್ ಹಾಕಿಸಲು ಕೂಡ ನನ್ನ ಬಳಿ ಹಣ ಇರುತ್ತಿರಲಿಲ್ಲ. ಹೀಗಾಗಿ ರುಬಿನಾ ಅಭ್ಯಾಸ ಮುಗಿಸುವವರೆಗೂ ನಾನು ಅಲ್ಲೇ ಕಾಯುತ್ತ ನಿಲ್ಲುತ್ತಿದ್ದೆ. ಏಕೆಂದರೆ ಎರಡು ಬಾರಿ ಹೋಗಿ ಬರಲು ಪೆಟ್ರೋಲಿಗೆ ನನ್ನಲ್ಲಿ ಹಣದ ಸಮಸ್ಯೆ ಇತ್ತು. ಬಳಿಕ ರುಬಿನಾಳ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲಾರಂಭಿಸಿದ ಬಳಿಕ ನಾವು ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಧ್ಯವಾಯಿತು’ ಎಂದು ರುಬಿನಾರ ತಂದೆ, ಬದುಕಿನ ಸವಾಲಿನ ದಿನಗಳನ್ನು ನೆನಪಿಸಿಕೊಂಡರು.
ಏನಿದು ಎಸ್ಎಚ್1 ವಿಭಾಗ?:
ರುಬಿನಾ ಫ್ರಾನ್ಸಿಸ್ ಕಂಚು ಗೆದ್ದಿರುವುದು ಎಸ್ಎಚ್1 ವಿಭಾಗದ ಶೂಟಿಂಗ್ನಲ್ಲಿ. ಇಲ್ಲಿ “ಎಸ್’ ಎನ್ನುವುದು ಶೂಟಿಂಗ್ನ ಸೂಚಕ. ದೇಹದ ಕೆಳಭಾಗದಲ್ಲಿ ಸಮಸ್ಯೆ ಇರುವ, ಆದರೆ ಗನ್ ಹಿಡಿದುಕೊಳ್ಳಲು ಸಮರ್ಥರಿರುವ ಕ್ರೀಡಾಪಟುಗಳಿಗೆ ರೈಫಲ್ ಅಥವಾ ಪಿಸ್ತೂಲ್ನಲ್ಲಿ ಸ್ಪರ್ಧಿಸಲು ಈ ವಿಭಾಗದಲ್ಲಿ ಅವಕಾಶ ನೀಡಲಾಗುತ್ತದೆ. ನಿಂತು ಅಥವಾ ವೀಲ್ಚೇರ್/ಕುರ್ಚಿಯಲ್ಲಿ ಕುಳಿತುಕೊಂಡು ಸ್ಪರ್ಧಿಸಲು ಅವಕಾಶವಿರುತ್ತದೆ.