ಒಂದು ಸಿನಿಮಾ ಬಳಿಕ ಪುನಃ ಅದೇ ತಂಡ ಸೇರಿಕೊಂಡು ಮತ್ತೂಂದು ಸಿನಿಮಾ ಮಾಡುವುದು ತೀರಾ ವಿರಳ. ಆದರೆ, “ಪರದೇಸಿ ಕೇರಾಫ್ ಲಂಡನ್’ ಚಿತ್ರ ಅದನ್ನು ಸುಳ್ಳು ಮಾಡಿದೆ. ಈ ಹಿಂದೆ, “ರಾಜ ಲವ್ಸ್ ರಾಧೆ’ ಚಿತ್ರ ಮಾಡಿದ್ದ ತಂಡ, ಆ ಚಿತ್ರದ ಬಿಡುಗಡೆಗೂ ಮುನ್ನವೇ ಈಗ “ಪರದೇಸಿ ಕೇರಾಫ್ ಲಂಡನ್’ ಚಿತ್ರಕ್ಕೆ ಅಣಿಯಾಗಿದೆ. ಬುಧವಾರ ಚಿತ್ರಕ್ಕೆ ಮುಹೂರ್ತವೂ ನಡೆದಿದೆ.
ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ರಾಘವೇಂದ್ರ ಹೀರೋ. ಎಂ. ರಾಜಶೇಖರ್ ನಿರ್ದೇಶಕರು. ಬಳ್ಳಾರಿ ಜಿಲ್ಲೆ ಸಿರುಗುಪ್ಪದ ಬಿ. ಬದರಿನಾರಾಯಣ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. “ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ಮನರಂಜನೆ ಚಿತ್ರ.
ಜತೆಗೆ ಫ್ಯಾಮಿಲಿ ಡ್ರಾಮ ಕೂಡ ಇದೆ. ಇಲ್ಲಿ ಶುದ್ಧ ಮನರಂಜನೆಗೆ ಒತ್ತು ಕೊಡಲಾಗಿದೆ. ಸಿನಿಮಾ ನೋಡಲು ಬರುವ ಪ್ರೇಕ್ಷಕನಿಗೆ ಬೇಕಿರುವುದು, ಅಪ್ಪಟ ಮನರಂಜನೆ. ಅದನ್ನು ಇಲ್ಲಿ ಕಾಣಬಹುದು. ಮತ್ತದೇ ತಂಡವನ್ನಿಟ್ಟುಕೊಂಡು ಮಾಡೋಕೆ ಕಾರಣ, ಹಿಂದಿನ ಸಿನಿಮಾದಲ್ಲಿದ್ದ ಬಾಂಧವ್ಯ ಮತ್ತು ಹೊಂದಾಣಿಕೆ. ನಿರ್ಮಾಪಕರು ಬಿಇ ಓದುತ್ತಿದ್ದ ಸಂದರ್ಭದ ಗೆಳೆಯರು. ಅವರಿಗೆ ಒಳ್ಳೆಯ ಚಿತ್ರ ಮಾಡುವ ಆಸೆ ಇತ್ತು.
ಅದಕ್ಕೆ ತಕ್ಕ ಕಥೆಯೂ ನನ್ನಲ್ಲಿತ್ತು. ಕೇಳಿದ ಕೂಡಲೇ ಚಿತ್ರ ಮಾಡುವ ಮನಸು ಮಾಡಿದ್ದಾರೆ. ಅವರ ನಂಬಿಕೆ ಹುಸಿಯಾಗದಂತೆ ಒಳ್ಳೆಯ ಚಿತ್ರ ಮಾಡುವ ಗ್ಯಾರಂಟಿ ಕೊಡ್ತೀನಿ. “ಪರದೇಸಿ’ ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ದಿಕ್ಕಿಲ್ಲದವ, ಇನ್ನೊಂದು ಪರದೇಶದಿಂದ ಬಂದವ. ಈ ಎರಡೂ ಪದಗಳಿಗೂ ಕನೆಕ್ಟ್ ಆಗುವಂತ ಕಥೆ ಇಲ್ಲಿದೆ. ಹಾಗಾಗಿ ಈ ಶೀರ್ಷಿಕೆ ಇಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟರು ನಿರ್ದೇಶಕ ರಾಜಶೇಖರ್.
ಚಿತ್ರ ಲಂಡನ್‌ನಲ್ಲೂ ನಡೆಯುತ್ತಾ? ಪತ್ರಕರ್ತರ ಪ್ರಶ್ನೆಯೊಂದು ತೂರಿಬಂತು. ಅದಕ್ಕೆ ಉತ್ತರವಾಗಿದ್ದು, ನಟ ವಿಜಯರಾಘವೇಂದ್ರ. “ಈ ಚಿತ್ರದ ಸಸ್ಪೆನ್ಸ್ ಅದೇ’ ಅಂತ ಮಾತಿಗಿಳಿದರು. “ಕಥೆಯ ತಿರುವು ಶೀರ್ಷಿಕೆಯಲ್ಲಿದೆ. ಹಾಗಾಗಿ, ಇದು ಲಂಡನ್‌ನಲ್ಲಿ ನಡೆಯುತ್ತಾ, ಇಲ್ಲವಾ ಅನ್ನೋದೇ ಗೌಪ್ಯ. ಸದ್ಯಕ್ಕೆ ಕಥೆ ಎಲ್ಲೆಲ್ಲಿ ಓಡಾಡುತ್ತೋ, ಅಲ್ಲೆಲ್ಲಾ ಚಿತ್ರೀಕರಣ ಆಗುತ್ತೆ. ಒಳ್ಳೆಯ ಮನರಂಜನೆಯಂತೂ ಇಲ್ಲಿ ಸಿಗಲಿದೆ.
ದೊಡ್ಡ ಆ್ಯಕ್ಷನ್ ಏನೂ ಇಲ್ಲ. ಫ್ಯಾಮಿಲಿ ಕುಳಿತು ನೋಡುವ ಅಚ್ಚುಕಟ್ಟಾದ ಚಿತ್ರವಂತೂ ಹೌದು. ವಿಭಿನ್ನವಲ್ಲದಿದ್ದರೂ, ವಿಶೇಷತೆಗಳಿಗೇನೂ ಕೊರತೆ ಇಲ್ಲ’ ಎಂಬುದು ವಿಜಯ್ ರಾಘವೇಂದ್ರ ಮಾತು. ನಿರ್ಮಾಪಕ ಬದರಿನಾರಾಯಣ ಅವರಿಗೆ ರಾಜಶೇಖರ್ ಕಾಲೇಜು ಗೆಳೆಯರು. ಅವರ ಮೇಲಿನ ನಂಬಿಕೆಯಿಂದ ಚಿತ್ರ ಮಾಡಲು ಮುಂದಾಗಿದ್ದಾರೆ. ಇನ್ನು, ಈ ಚಿತ್ರಕ್ಕೆ ಪೂಜಾ ಹುಣಸೂರು ಮತ್ತು ಸ್ನೇಹಾ ನಾಯಕಿಯರು. ಈ ಪೈಕಿ ಪೂಜಾ ಹುಣಸೂರು ಅವರಿಗಿದು ಮೂರನೇ ಚಿತ್ರ. ಸ್ನೇಹಾ ಮೂಲತಃ ಸಾಫ್ಟ್ವೇರ್ ಉದ್ಯೋಗಿ.
ಮಾಡೆಲಿಂಗ್ ಕ್ಷೇತ್ರದಿಂದ ನೇರ “ಪರದೇಸಿ’ ಜೊತೆಗೆ ಬಂದಿದ್ದಾರೆ. ಉಳಿದಂತೆ ತಬಲಾ ನಾಣಿ, ಶೋಭರಾಜ್, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಯತಿರಾಜ್ ನಟಿಸುತ್ತಿದ್ದಾರೆ. ವೀರ್‌ಸಮರ್ಥ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ಕೆ.ಕಲ್ಯಾಣ್, ನಾಗೇಂದ್ರಪ್ರಸಾದ್, ಕವಿರಾಜ್ ಅವರ ಸಾಹಿತ್ಯವಿದೆ. ಕೆ.ಚಿದಾನಂದ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮಾರ್ಚ್ 5 ರಿಂದ ಬೆಂಗಳೂರು, ಸಿರುಗುಪ್ಪ, ಮೈಸೂರು ಇತರೆಡೆ ಒಂದೇ ಹಂತದ ಚಿತ್ರàಕರಣ ನಡೆಯಲಿದೆ.