ಹೊಸಪೇಟೆ: ಹೊಸದಿಲ್ಲಿಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಯೋಧ ಎಸ್.ಆರ್. ಶ್ರೀನಿವಾಸ್ ಅವರ ಅಂತ್ಯಸಂಸ್ಕಾರ ಸ್ವಗ್ರಾಮ ತಾಲೂಕಿನ ಕಮಲಾಪುರದ ಎಚ್‌ಪಿಸಿಯಲ್ಲಿ ಮಂಗಳವಾರ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಮಧ್ಯಾಹ್ನ 12ಕ್ಕೆ ಗ್ರಾಮಕ್ಕೆ ಬಂದ ಯೋಧನ ಪಾರ್ಥಿವ ಶರೀರವನ್ನು ಕಮಲಾಪುರದ ಸತ್ಯಮ್ಮ ದೇಗುಲದಿಂದ ತ್ರಿವರ್ಣ ಧ್ವಜದೊಂದಿಗೆ ಯುವಕರು ಹಾಗೂ ಹಿರಿಯರು ವಾಹನದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಯುವಕರು ಸೇರಿದಂತೆ ಗ್ರಾಮಸ್ಥರು ಅಮರ್ ಹೈ, ಅಮರ ಹೈ, ಶ್ರೀನಿವಾಸ್ ಅಮರ ಹೈ ಎಂಬ ಘೋಷಣೆ ಮೊಳಗಿಸಿದರು. ಮೆರವಣಿಗೆ ನಂತರ ಎಚ್‌ಪಿಸಿಯ ಶ್ರೀನಿವಾಸ್ ಅವರ ಮನೆಯ ಮುಂದೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಕಮಲಾಪುರದ ಜನರು ತಂಡೋಪತಂಡವಾಗಿ ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು.
ಯೋಧ ಶ್ರೀನಿವಾಸ್ ಅವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತು. ಪತ್ನಿ ವನಜಾ, ಮಕ್ಕಳಾದ ಓಂಕಾರ್ (21) ಮತ್ತು ಮುಖೇಶ್ (17) ಸೇರಿದಂತೆ ಸಂಬಂಧಿಕರ ರೋದನ ಮುಗಿಲು ಮುಟ್ಟಿತು. ಅಲ್ಲಿ ಸೇರಿದ್ದ ಜನರ ಕಣ್ಣುಗಳು ಕೂಡ ತೇವಗೊಂಡವು. ಪಟ್ಟಣದ ಎಚ್‌ಪಿಸಿ ಬಳಿ ಹಿಂದೂ ಧರ್ಮದ ವಿಧಿವಿಧಾನಗಳೊಂದಿಗೆ ಮೃತ ಯೋಧನ ಅಂತ್ಯ ಸಂಸ್ಕಾರ ನೆರವೇರಿತು. ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಯ್ಯದ್ ಅಮಾನುಲ್ಲಾ, ಮುಖ್ಯಾಧಿಕಾರಿ ನಾಗೇಶ್, ಮುಖಂಡ ರಾಜಶೇಖರ್ ಹಿಟ್ನಾಳ್, ಸಮಿವುಲ್ಲಾ, ಕೋಟಾಲ್ ವೀರೇಶ್ ಅಂತಿಮ ದರ್ಶನ ಪಡೆದರು.