ಉಡುಪಿ: ನಿಮಗೆ ರಕ್ಷಿತ್ ಶೆಟ್ಟಿ ನಿರ್ದೇಶನದ ʼಉಳಿದವರು ಕಂಡಂತೆʼ ಚಿತ್ರದ “ಪೇಪರ್ ಪೇಪರ್ ಮೆಣಸಿನ ಪೇಪರ್” ಹಾಡು ನೆನಪಿರಬಹುದು. ಆ ಹಾಡಿನ ದೃಶ್ಯದಲ್ಲಿ ಕೆಲವು ಹುಡುಗರು ಮುಖಕ್ಕೆ ಬಣ್ಣ ಬಳಿದು, ಕೈಯಲ್ಲಿ ಪೇಪರ್ ಹಿಡಿದು ಬೀದಿಯಲ್ಲಿ ಸುತ್ತುತ್ತಿರುತ್ತಾರೆ. ಇವರನ್ನು ಮತ್ತೆ ನೋಡುವ ಆಸೆಯಿದೆಯೇ? ಹಾಗಾದರೆ ಇಂದು ನಾಳೆ ಉಡುಪಿಗೆ ಬನ್ನಿ.
ಅಷ್ಟಮಿ ಅಂದ್ರೆ ಉಡುಪಿ ಜಿಲ್ಲೆಯವರಿಗಿಂತಲೂ ಬೇರೆ ಜಿಲ್ಲೆಯಿಂದ ಕೆಲಸಕ್ಕಾಗಿ ನಮ್ಮ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರ ಮಕ್ಕಳಿಗೆ ಅದೇನೋ ಸಂತೋಷ. ಮನೆಯಲ್ಲೇ ಇರುವ ಬಟ್ಟೆಗಳನ್ನು ಹಾಕಿ, ಮುಖಕ್ಕೆ ಅಂಗಡಿಗಳಲ್ಲಿ ಸಿಗುವ ಒಂದಿಷ್ಟು ಬಣ್ಣಗಳನ್ನು ಹಚ್ಚಿ, ಕೈಯಲ್ಲೋಂದು ಪೇಪರ್ ಹಿಡಿದುಕೊಂಡು ಮನೆ ಮನೆಗೆ ಹೋಗುತ್ತಾರೆ ಈ ಮಕ್ಕಳು. ಇವರೇ ಪೇಪರ್ ವೇಷದ ಮಕ್ಕಳು.
ಮುಗ್ಧತೆ ಈ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತದೆ. ಊರಿನ ಮಕ್ಕಳು ಇಂಥಹ ವೇಷದಲ್ಲಿ ಸ್ವಲ್ಪ ದೂರನೇ ಉಳಿಯುತ್ತಾರೆ. ಆದರೆ ಈ ಮಕ್ಕಳು ಯಾವುದೇ ಅಂಜಿಕೆ ಇಲ್ಲದೆ ಪೇಪರ್ ಪೇಪರ್ ಅನ್ನುತ್ತಾ ಮನೆ ಮನೆಗೆ, ಅಂಗಡಿಗೆ ಹೋಗಿ ಹಣ ಕೇಳುತ್ತಾರೆ. ಅಷ್ಟಮಿಯ ಸಂಭ್ರಮದ ದಿನ ನೀವು ಉಡುಪಿಗೆ ಬಂದರೆ ನೀವು ಇಂತಹ ಪೇಪರ್ ವೇಷದ ಹುಡುಗರನ್ನು ಬೀದಿ ಬೀದಿಯಲ್ಲಿ ಕಾಣಬಹುದು.
ಹೀಗೆ ಸಂಗ್ರಹಿಸಿದ ಹಣದಿಂದ ತಮ್ಮ ಶಾಲೆಗೆ ಪುಸ್ತಕಗಳನ್ನು ಕೊಳ್ಳಲು, ಅಷ್ಟಮಿಯ ಜಾತ್ರೆಗೆ ಖರ್ಚು ಮಾಡುತ್ತಾರಂತೆ. ಒಟ್ಟಾರೆಯಾಗಿ ಉಡುಪಿ ಕೃಷ್ಣಾಷ್ಟಮಿ, ವಿಟ್ಲಪಿಂಡಿಯ ದೊಡ್ಡ ದೊಡ್ಡ ವೇಷಗಳ ನಡುವೆ ಇಂತಹ ಪುಟ್ಟ ಪೇಪರ್ ವೇಷದ ಹುಡುಗರು ನಿಮ್ಮ ಮನಸನ್ನು ಮುದಗೊಳಿಸುವುದಂತೂ ನಿಜ.
ಪೂರ್ಣಿಮಾ ಪೆರ್ಣಂಕಿಲ