ವಾರಾಣಸಿ:ಬಾಳೆ ದಿಂಡಿನಿಂದ ಏನು ಮಾಡಬಹುದು? ಪಲ್ಯವೋ, ಖೀಚಡಿಯೋ ಮಾಡಬಹುದು. ಅದನ್ನು ಬಿಟ್ಟು ಇನ್ನೇನು ಸಾಧ್ಯ ಎಂಬ ಉಡಾಫೆ ಬೇಡ. ಅದರಿಂದ ಕಾಗದ ತಯಾರು ಮಾಡಲು ಸಾಧ್ಯವೇ ಎಂಬ ಬಗ್ಗೆ ಪರೀಕ್ಷೆಯೂ ಈಗ ನಡೆಯುತ್ತಿದೆ.
ಅಂದ ಹಾಗೆ ಈ ಪ್ರಯೋಗಕ್ಕೆ ಮುಂದಾಗಿರುವುದು ವಾರಾಣಸಿಯ ಐಐಟಿಯ ಸ್ಕೂಲ್ ಆಫ್ ಬಯೋಕೆಮಿಕಲ್ ಎಂಜಿನಿಯರಿಂಗ್ ವಿಭಾಗ. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಶಾಲ್ ಮಿಶ್ರಾ ಈ ಸಾಹಸಕ್ಕೆ ಕೈಹಾಕಿದ್ದಾರೆ.
ಅಡುಗೆ ಮನೆಯ ತ್ಯಾಜ್ಯ, ಬಾಳೆ ದಿಂಡು ಸೇರಿ ಇತರೆ ವಸ್ತುಗಳಿಂದ ಸಾವಯವ ಗೊಬ್ಬರ ಮತ್ತು ಕಾಗದ ತಯಾರು ಮಾಡುವುದರ ಬಗ್ಗೆ ಲಕ್ನೋ ಸಮೀಪದ ರಾಯ್‌ಪುರ್ ಗ್ರಾಮದ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಬಾಳೆಯ ಕಾಂಡದ ನಾರು ತೆಗೆಯಬೇಕು. ನಂತರ ಅದನ್ನು ಸೋಡಿಯಂ ಹೈಡ್ರಾಕ್ಸೆಡ್‌ನಿಂದ ತೊಳೆಯಬೇಕು. ತೊಳೆಯಲಾಗಿರುವ ನಾರನ್ನು ಮತ್ತಷ್ಟು ಸದೃಢವಾಗಿ ಮಾಡಬೇಕು.
ಕಾಗದ ತಯಾರಿಕೆಯಲ್ಲಿ ಹಲವು ಹಂತಗಳಿವೆ. ಬೆಳೆಯ ಕೊಯ್ಲು, ಶುಚಿಗೊಳಿಸುವುದು, ತುಂಡು ಮಾಡುವುದು, ತೊಳೆಯುವುದು, ನಾರನ್ನು ಹದಗೊಳಿಸುವುದು, ಮತ್ತು ಅದನ್ನು ಒಣಗಿಸುವುದು ಕೊನೆಯ ಹಂತ. ಕಾಗದ ತಯಾರಿಕೆಗೆ ಬೇಕಾಗಿರುವ ಬಾಳೆ ಪೂರ್ಣ ಪ್ರಮಾಣದಲ್ಲಿ ಬೆಳೆದಿರಬೇಕಾಗುತ್ತದೆ ಎಂದು ಡಾ.ವಿಶಾಲ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಅದನ್ನು ತುಂಡು ಮಾಡಿ, ಒಳಗಿನ ನಾರು ತೆಗೆಯಬೇಕು. ನಂತರ ಬೇಯಿಸಿ ಒಣಗಿಸಬೇಕು. ಈ ಪ್ರಕ್ರಿಯೆಯಿಂದ ನಾರು ಮತ್ತು ಕಾಂಡವನ್ನು ಸುಲಭವಾಗಿ ಬೇರ್ಪಡಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ರೈತರ ಹಾಗೂ ಗ್ರಾಮೀಣ ಭಾಗದ ಅರ್ಥ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಯುವಕರಿಗೆ ಸ್ಟಾರ್ಟ್‌ಅಪ್ ಸ್ಥಾಪಿಸಲೂ ನೆರವಾಗಲಿದೆ ಎಂದೂ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.