Advertisement
ಬಂಟ್ವಾಳ: ಕನ್ನಡ ಸಾಹಿತ್ಯ ಲೋಕಕ್ಕೆ ಬಲುದೊಡ್ಡ ಕೊಡುಗೆ ನೀಡಿದ ಬಂಟ್ವಾಳ ತಾಲೂಕಿನ ಸಾಹಿತಿಗಳಲ್ಲಿ ಪಂಜೆ ಮಂಗೇಶರಾಯರು ಅಗ್ರಗಣ್ಯರು. ಬಂಟ್ವಾಳದಲ್ಲಿ ಹುಟ್ಟಿದ ಅವರು “ಕವಿಶಿಷ್ಯ’ ಎಂಬ ಕಾವ್ಯನಾಮದಿಂದ ಬರೆದವರು. ಮಕ್ಕಳಿಗೆ ಬಹು ಪ್ರಿಯವಾಗುವಂತಹ ಸಾಹಿತ್ಯವನ್ನೂ ರಚಿಸಿದ್ದಾರೆ.
ನವೋದಯ ಕಾಲದ ಸಾಹಿತಿಯಾಗಿದ್ದ ಪಂಜೆಯವರು ಜಾನಪದ ಅಧ್ಯಯನ, ಕಾವ್ಯ, ಅನುವಾದದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಕೊಂಕಣಿ, ತುಳು, ಕನ್ನಡ, ಇಂಗ್ಲಿಷ್ ಹೀಗೆ ಹಲವು ಭಾಷೆಗಳಲ್ಲಿ ಪಾಂಡಿತ್ಯವನ್ನು ಸಾ ಧಿಸಿ ದ್ದರು. ಪಂಚಕಜ್ಜಾಯ, ತೆಂಕಣಗಾಳಿಯಾಟ, ಹುತ್ತರಿಹಾಡು ಪಂಜೆಯವರ ಪ್ರಮುಖ ಕಾವ್ಯ ಸಂಕಲನಗಳು. ಐತಿಹಾಸಿಕ ಕಥಾವಳಿ, ಕೋಟಿ ಚೆನ್ನಯ, ಅಜ್ಜಿ ಸಾಕಿದ ಮಗ ಪ್ರಮುಖ ಗ್ರಂಥಗಳಾಗಿವೆ. ಮಕ್ಕಳ ಸಾಹಿತ್ಯದಲ್ಲಿ ಅವರ ಸೇವೆ ವಿಶೇಷವಾಗಿದೆ. ಪಂಜೆಯವರು 1934ರಲ್ಲಿ ರಾಯಚೂರಿನಲ್ಲಿ ಜರಗಿದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದರು. 1937ರಲ್ಲಿ ಅವರ ದೇಹಾಂತವಾಯಿತು.
Related Articles
ಪಂಜೆಯವರ ಹೆಸರಿನಲ್ಲಿ ಬಂಟ್ವಾಳದಲ್ಲಿ ಪ್ರತೀ ವರ್ಷ ಕಾರ್ಯಕ್ರಮವೊಂದನ್ನು ಆಯೋಜಿಸಿ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕೆಲಸವಾಗಬೇಕಿದೆ. ಬಂಟ್ವಾಳ ನಗರ ಪ್ರದೇಶ ಅಥವಾ ತಾಲೂಕಿನ ಯಾವುದಾದರೊಂದು ಭಾಗದಲ್ಲಿ ಅವರ ಹೆಸರಿನಲ್ಲಿ ರಸ್ತೆ, ವೃತ್ತ ನಿರ್ಮಾಣ ಮಾಡಬೇಕಿದೆ.
Advertisement
ಬಂಟ್ವಾಳದಲ್ಲಿದೆ ಸ್ಮಾರಕಪಂಜೆ ಮಂಗೇಶರಾಯರು ಬಂಟ್ವಾಳದಲ್ಲಿ ಹುಟ್ಟಿರುವ ಹಿನ್ನೆಲೆಯಲ್ಲಿ ಅವರ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ. ಹಳೆಯ ಸ್ಮಾರಕ ಇದಾಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯ ಪ್ರವೇಶ ದ್ವಾರದ ಪಕ್ಕದಲ್ಲೇ ಇದೆ. ಆದರೆ ತಾಲೂಕಿನ ಬಹುತೇಕ ಮಂದಿಗೆ ಪಂಜೆಯವರು ಬಂಟ್ವಾಳದವರು, ಇಲ್ಲಿ ಅವರ ಹೆಸರಿನಲ್ಲಿ ಸ್ಮಾರಕವೊಂದಿದೆ ಎಂಬ ಮಾಹಿತಿಯೇ ಇಲ್ಲ. ಸರಕಾರ ಅಥವಾ ಸ್ಥಳೀಯಾಡಳಿತ ಸ್ಮಾರಕವನ್ನು ನವೀಕರಣಗೊಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ. ಸಮುದಾಯ ಭವನ ನಿರ್ಮಾಣ
ಪಂಜೆಯವರು ಬಂಟ್ವಾಳದಲ್ಲಿ ಹುಟ್ಟಿದ ನೆನಪಿಗಾಗಿ ಬಂಟ್ವಾಳದಲ್ಲಿ ಸ್ಮಾರಕವಿದ್ದರೂ ಅವರ ಹೆಸರು ಶಾಶ್ವತವಾಗಿರಬೇಕು ಎಂದು ಸರಕಾರದ ಅನುದಾನದಿಂದ ಬೃಹತ್ ಪಂಜೆ ಮಂಗೇಶರಾಯ ಭವನವೊಂದು ನಿರ್ಮಾಣಗೊಳ್ಳುತ್ತಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯ ಬಳಿ ಈ ಭವನ ನಿರ್ಮಾಣವಾಗುತ್ತಿದ್ದು, ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಭವನಕ್ಕೆ ಅನುದಾನ ತಂದಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಲಾನ್ಯಾಸ ನೆರವೇರಿಸಿದ್ದರು.