ಪಾನಿಪುರಿ ಹೆಸರು ಕೇಳಿದರೆ ಯಾರಿಗೆ ತಾನೇ ಬಾಯಲ್ಲಿ ನೀರೂರಿವುದಿಲ್ಲ ಹೇಳಿ..? ಎಷ್ಟೇ ದೊಡ್ಡ ಶ್ರೀಮಂತ ವ್ಯಕ್ತಿ ಕೂಡ ತನ್ನ ಭಾರಿ ಭೂರಿ ಭೋಜನಕ್ಕಿಂತಲೂ ಮಿಗಿಲಾದ ರಸಗವಳದ ರುಚಿಯನ್ನು ಈ ಪುಟ್ಟ ಪೂರಿಯಲ್ಲಿ ಕಾಣುವುದೇ ಇದರ ಶ್ರೇಷ್ಠತೆ.
ಬೀದಿಬದಿಯ ಮಹಾರಾಜ ಎಂದೇ ಕರೆಯಿಸಿಕೊಳ್ಳುವ ಪಾನಿಪುರಿ ತನ್ನ ಅನೂಹ್ಯವಾದ ರುಚಿಗೆ ಹೆಸರುವಾಸಿ. ಪೂರ್ತಿಯಾಗಿ ಉಬ್ಬಿದ್ದ ಪುಟ್ಟ ಪೂರಿಯನ್ನು ಮಸಾಲೆ ಮತ್ತು ಪಾನಿಯೊಡನೆ ಇಡಿಯಾಗಿ ಬಾಯಿಯೊಳಗಿಟ್ಟು ಜಗಿದಾಗ ಕುರುಕುರು ಸ್ವರದಲ್ಲಿ ಪುಡಿಯಾಗುವ ಪೂರಿ, ಅದರೊಂದಿಗೆ ಒಸರುವ ರಸ ಒಂದು ಧಾರೆಯಾಗಿ ನಿಮ್ಮ ನಾಲಿಗೆಯ ಅಷ್ಟೂ ರುಚಿ ಸಂವೇದಕಗಳನ್ನು ಆವರಿಸಿ ಬಿಡುತ್ತದೆ.
ಚೂರ್ ಚೂರು ಖಾರ, ಸಿಹಿಯೊಂದಿಗೆ ಬಿಸಿ ಬಿಸಯಾಗಿ ತಿನ್ನುವುದೇ ಒಂದು ರೀತಿಯಲ್ಲ ಮಜ. ಖಾರದ ಸುಳಿವಿನೊಂದಿಗೆ ಸಿಹಿ ಮತ್ತು ಮಸಾಲೆಯುಕ್ತವಾಗಿ ಇರುವ ಪೂರಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಆದರೆ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಅಭಿರುಚಿಯನ್ನು ಹೊಂದಿರುತ್ತಾನೆ.
ಖಾರ ಬೇಕೇ, ಬೇಡವೇ ಕೊಂಚ ಸಿಹಿಯಾಗಿದ್ದರೆ ಒಳಿತೇ, ಹುಳಿ ಹೆಚ್ಚು ಬೇಕೇ, ಬೇಡವೇ ಪಾನಿಪೂರಿ ತಯಾರಾಗುವ ಮುನ್ನ ಅಂಗಡಿಯಾತನಿಗೆ ಹೇಳಿದರೆ ಸಾಕು, ಅದೇ ಕ್ಷಣದಲ್ಲಿ ನಿಮ್ಮೆದುರಗಿಗೆ ರುಚಿ ರುಚಿಯಾಗಿ, ಸಿಹಿ ಖಾರವಾಗಿ ಪುರಿಯೊಳಗಿಂದ ಸಣ್ಣ ಹಬೆಯಾಡುತ್ತಾ, ಅಲಂಕಾರಗೊಂಡು ಸವಿಯಲು ಸಿದ್ಧವಾಗಿರುತ್ತದೆ. ಸಂಜೆ ಹೊತ್ತಿಗೆ, ತಂಗಾಳಿ ಬೀಸವಾಗ ಒಂದು ಪ್ಲೇಟ್ ಪಾನಿಪುರಿ ತಿಂದರೇ, ಆಗುವ ಸಂತೋಷಕ್ಕೆ ಏನು ಹೆಸರಿಡಬೇಕೆನ್ನುವುದೇ ತಿಳಿಯದು..!
ಮಳೆಗಾಲದ ಸಂಜೆಗೆ ಹನಿ ಹನಿ ಸಂಜೆ ಮಳೆ ಬೀಳುವ ಹೊತ್ತ್ತಿಎಗ ಪಾನಿಪುರಿ ಇಲ್ಲದೇ ಇದ್ದರೇ ಆ ದಿನ ಒಂದು ರೀತಿಯಲ್ಲಿ ನಿರಸವೆನ್ನಿಸುತ್ತದೆ. ಮಳೆಯ ಚಳಿಗೆ ಬಿಸಿ ಬಿಸಿ ಪಾನಿಪುರಿಯೋ ಅಥವಾ ಮಸಾಲಪುರಿ ತಿನ್ನುವ ಭರದಲ್ಲಿ ಸಣ್ಣಕ್ಕೆ ನಾಲಿಗೆ ಸುಟ್ಟು ಹೋಗುವುದು, ನಂತರ ಬಿಸಿಯನ್ನು ತಣಿಸಿ ತಿನ್ನುವುದೇ ಕಲ್ಪನೆ ಮಾಡಿಕೊಂಡರೇ ಸಾಕು ತಿಂದಷ್ಟೇ ಹಿತವೆನ್ನಿಸುತ್ತದೆ. ವಾವ್ಹ್.. ಪಾನಿಪುರಿ ಅದೆಷ್ಟು ರುಚಿ. ಕಾಲೇಜು ದಿನಗಳಲ್ಲಿ ಪಾನಿಪರಿಗೆ ಎಡಿಕ್ಟ್ ಆಗದೇ ಇರುವವರು ಬಹಳ ಕಡಿಮೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಒಂದು ಸುತ್ತಿನ ಪಾನಿಪುರಿ ಹೊಟ್ಟೆ ಪೂಜೆ ಆದರೇ ಮಾತ್ರ ಎನೋ ಮನಸ್ಸಿಗೆ ಸಮಾಧಾನ .
ಬೀದಿ ಬೀದಿಯ ಮೂಲೆಯಲ್ಲೂ ಒಂದು ಮಸಾಲಾಪುರಿ ಗಾಡಿ ಕಾಣಲಿಲ್ಲವೆಂದರೆ ಆ ರಸ್ತೆ ಇದ್ದೂ ವ್ಯರ್ಥವೆಂದೇ ಅರ್ಥ. ಸಂಜೆ ಹೊತ್ತಲ್ಲಿ ಇಂಪಾದ ಗಾಳಿ ಹಾಗೂ ಹನಿ ಮಳೆ ಒಂದು ಪ್ಲೇಟ್ ಪಾನಿಪುರಿ… ಸ್ವರ್ಗಕ್ಕೆ ಮೂರೇ ಗೇಣು. ಅದೇನೋ ಗೊತ್ತಿಲ್ಲ ಬೇಡ ಬೇಡ ಅಂದರು ಸೆಳೆಯುವ ಶಕ್ತಿ ಪಾನಿಪುರಿಯಲ್ಲಿದೆ.
ಆಕರ್ಷ ಆರಿಗ
ಎಸ್ ಡಿ ಎಮ್ ಕಾಲೇಜು, ಉಜಿರೆ.
ಇದನ್ನೂ ಓದಿ : ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್