ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರತದ ಬದಲಾವಣೆಗೆ ಬರಲಿಲ್ಲ. ಭಾರತ ದುಸ್ಥಿತಿಗೆ ತಲುಪಿದೆ ಎನ್ನುವ ಕಾರಣಕ್ಕೆ ಅವರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದು, ಮೂರು ದಶಕಗಳ ಹಿಂದೆ ನರಮೇಧ ನಡೆಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಟ ಹಾಗೂ ನಿರ್ದೇಶಕ ಪ್ರಕಾಶ ಬೆಳವಾಡಿ ಹೇಳಿದರು.
ಸೋಮವಾರ ಸವಾಯಿ ಗಂಧರ್ವ ಹಾಲ್‌ನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ದಿ ಕಾಶ್ಮೀರ ಫೈಲ್ಸ್ ಚಿತ್ರ ಕುರಿತಾದ ಸಂವಾದದಲ್ಲಿ ಅವರು ಮಾತನಾಡಿದರು.
1971ರ ಯುದ್ಧಾನಂತರ ಬಾಂಗ್ಲಾ, ಇನ್ನೊಂದು ಸಂದರ್ಭದಲ್ಲಿ ಟಿಬೆಟಿಯನ್ನರು ಭಾರತಕ್ಕೆ ಬಂದರು. ಅವರಿಗೆ ನಿರಾಶ್ರಿತ ಕೇಂದ್ರಗಳನ್ನು ಆರಂಭಿಸಲಾಯಿತು. ವಿವಿಧ ಸೌಲಭ್ಯ ನೀಡಲಾಯಿತು. ಆದರೆ ಕಾಶ್ಮೀರಿ ಪಂಡಿತರು ಹೊರಬಂದಾಗ ಬಾಳಾಠಾಕ್ರೆ ಅವರು ಶೇ.5 ಮೀಸಲಾತಿ ನೀಡಿದರು. ಆದರೆ ಬೇರೆ ಯಾವ ರಾಜ್ಯಗಳೂ ಮನಸ್ಸು ಮಾಡಲಿಲ್ಲ. ಹಿಂದೆ ಕಳೆದುಕೊಂಡ ಆಸ್ತಿ, ಮನೆ ವಾಪಸ್ ಸಿಗುತ್ತದೆಯೋ ಗೊತ್ತಿಲ್ಲ. 32 ವರ್ಷದ ಹಿಂದಿನ ಹಿಂಸೆಗೆ ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಸತ್ಯವನ್ನು ಮುಚ್ಚಿಟ್ಟು ಶಾಂತಿ ಸ್ಥಾಪಿಸಲು ಸಾಧ್ಯಕ್ಕೆ ಮರಳುವ ಪಂಡಿತರಿಗೆ ಸೂಕ್ತ ರಕ್ಷಣೆ ಸೌಲಭ್ಯ ನೀಡಬೇಕು ಎಂದರು.
ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಸುಮಾರು 30 ಕೋಟಿ ರೂ. ಖರ್ಚು ಮಾಡಲಾಗಿತ್ತು. 40 ಕೋಟಿ ರೂ. ಗಳಿಕೆ ನಿರೀಕ್ಷೆ ಇತ್ತು. ಆದರೆ 400 ಕೋಟಿ ರೂ. ಗಳಿಸುವ ಯಾವ ನಿರೀಕ್ಷೆ ಇರಲಿಲ್ಲ. ಸತ್ಯವನ್ನು ಮುಚ್ಚಿಟ್ಟು ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎನ್ನುವುದು ಈ ಚಿತ್ರಕ್ಕೆ ಸಿಕ್ಕ ಮನ್ನಣೆ, ಜನಪ್ರಿಯತೆಯೇ ಸಾಕ್ಷಿ. ಇದು ಭಾರತದ ಗೆಲುವಾಗಿದೆ. ವಿವೇಕ ಅಗ್ನಿಹೋತ್ರಿ ಅವರು 700 ಕಾಶ್ಮೀರಿ ಪಂಡಿತರ ಕುಟುಂಬಗಳ ವಿಡಿಯೋ ಸಾಕ್ಷೀಕರಣ ಮಾಡಿ ಅದರ ಆಧಾರದ ಮೇಲೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಐದು ವರ್ಷದ ಹಿಂದೆ ವಿವೇಕ ಅಗ್ನಿಹೋತ್ರಿ ಅವರು ಸ್ಕ್ರಿಪ್ಟ್ ಕಳುಹಿಸಿದಾಗ ಇದೊಂದು ದೊಡ್ಡ ಸಾಹಸ ಎಂದು ಒಪ್ಪಿಕೊಂಡಿದ್ದೆ. ಭಾರತದಲ್ಲಿ ಅದೆಷ್ಟೋ ನಿಗೂಢ ಸಾವುಗಳು ಸಂಭವಿಸಿವೆ. ಮರೆತ ಹಾಗೂ ತಡೆಯಲಾದ ಸತ್ಯಗಳು ನಮ್ಮ ಮುಂದಿವೆ. ಅವುಗಳನ್ನು ಅರಗಿಸಿಕೊಳ್ಳುವುದು ಕಷ್ಟ ಎನ್ನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜ್ಞಾ ಪ್ರವಾಹ ಸಂಯೋಜಕ ರಘುನಂದನ ಮಾತನಾಡಿ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದರೆ ಏನಾಗಿಬಿಡುತ್ತದೆಯೋ ಎನ್ನುವ ಮನಸ್ಥಿತಿಯಿತ್ತು. ರದ್ದಾದ ನಂತರ ಏನೂ ಆಗಲಿಲ್ಲ. ಈ ರಾಜ್ಯವನ್ನು ಪ್ರತ್ಯೇಕ ಎಂದು ಬಿಂಬಿಸಿ ಜನರನ್ನು ನಂಬಿಸಿದ್ದರು. ಬದಲಾದ ನಂತರದಲ್ಲಿ ಅಲ್ಲಿನ ಮುಸ್ಲಿಮರು ರಾಷ್ಟ್ರಧ್ವಜ ಹಾರಿಸಿದ್ದಾರೆ. ಅಲ್ಲಿನ ಮೀಸಲಾತಿ ರದ್ದಾದ ನಂತರ ಪಾಕಿಸ್ತಾನ ಆಕ್ರಮಿತ ಭಾರತ ವಾಪಸ್ ಬರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ದೇವಸ್ಥಾನಗಳ ಮೇಲೆ ಜಿಹಾದಿಗಳು ಆಕ್ರಮಣ ಮಾಡಿದರೂ ಅದರ ಮೂಲಸ್ವರೂಪ ಉಳಿಸಿಕೊಂಡಿರುವುದು ನಮ್ಮ ಸೈನಿಕರು ಎಂದರು.
ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅವರು ಸಂವಾದ ಕಾರ್ಯಕ್ರಮ ನಿರ್ವಹಿಸಿದರು.