Advertisement
ಡೊಂಬಿವಲಿ ಪಶ್ಚಿಮದ ಜನಗಣಮನ ಶಾಲೆಯ ಆವರಣದಲ್ಲಿ ನಡೆದ ವೈವಿಧ್ಯಮಯ ಸ್ವರ ಸಂಧ್ಯಾ ಕಾರ್ಯಕ್ರಮವು ಗಣೇಶ ಆರಾಧನೆಯೊಂದಿಗೆ ಪ್ರಾರಂಭಗೊಂಡಿತು. ಆನಂತರ ಜಗನ್ನಾಥ ದಾಸರ “ರಾಮ ಬಾರೋ ತಂದೆ ತಾಯಿ ಬಾರೋ’ ಎಂದು ಗುರು ರಾಘವೇಂದ್ರರನ್ನು ತಮ್ಮ ಸುಮಧುರ ಕಂಠ ಮಾಧುರ್ಯದಿಂದ ಆಹ್ವಾನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಪಂಢಾರಾಪುರದಲ್ಲಿ ವಿಠೊಬನೆಂಬ ಓರ್ವ ಸಾವುಕಾರ’ ಎಂಬ ಜನಪ್ರಿಯ ದಾಸರ ಪದವನ್ನು ಪ್ರಸ್ತುತಪಡಿಸಿದ ಪಂಡಿತ್ ಶೇಷಗಿರಿದಾಸರು, ಪುರಂದರದಾಸರ ಭಾಗ್ಯದ ಲಕ್ಷ್ಮೀ ಭಾರಮ್ಮಾ, ಹೇಳವನಕಟ್ಟೆ ಗಿರಿಯಮ್ಮ ರಚಿಸಿದ “ಹನುಮಂತ ಹನುಮಂತ’ ರಚನೆಯು ಕೇಳುಗರನ್ನು ಮಂತ್ರಮುಗ್ಧಗೊಳಿಸಿತು.
ಅಧಿಕ ಕಾಲ ತಮ್ಮ ಗಾನಸುಧೆಯನ್ನು ಹರಿಸಿದ ಪಂಡಿತ್ ಶೇಷಗಿರಿದಾಸರು ಕಾರ್ಯಕ್ರಮದ ಕೊನೆಯಲ್ಲಿ ಪುರಂದರದಾಸರ “ತೋಳ ತೋಳ ರಂಗಾ’ ಎಂಬ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದಾಗ ಇಡೀ ಸಭಾಗೃಹವೇ ಎದ್ದು ನಿಂತು ಕರತಾಡನದ ಮೂಲಕ ಗೌರವ ಸೂಚಿಸಿತು. ಈ ಅವಿಸ್ಮರಣೀಯ ಸ್ವರ ಸಂಧ್ಯಾ ಕಾರ್ಯಕ್ರಮಕ್ಕೆ ಹಾರ್ಮೋನಿಯಂದಲ್ಲಿ ಶ್ರೀಪಾದದಾಸ, ತಬಲಾದಲ್ಲಿ ಗೋಪಾಲ ಗುಡಬಡ್ಡಿ, ತಾಳದಲ್ಲಿ ಸ್ಥಳೀಯ ಕಲಾವಿದ ವಿಜಯ ಕುಲಕರ್ಣಿ ಅವರು ಸಹಕರಿಸಿದರು. ದಿನವಿಡೀ ಬಿಸಿಲಿನ ಬೇಗೆಯಲ್ಲಿ ಬೆಂದ ಮುಂಬಯಿಯ ಸಂಗೀತಾಭಿಮಾನಿಗಳ ಮನಸ್ಸಿಗೆ ಪಂಡಿತ್ ಶೇಷಗಿರಿದಾಸರ ಅದ್ಭುತ ಗಾಯನ ಮುದನೀಡಿತು. ಗುರುರಾಜ ಪೋತನೀಸ