Advertisement
ಕಾರ್ಖಾನೆಯನ್ನು ಗುತ್ತಿಗೆ ಪಡೆಯಲು ನಿರಾಣಿ ಕಂಪನಿ ಹಾಗೂ ಎನ್‌ಎಸ್‌ಎಲ್ ಕಂಪನಿಗಳು ಟೆಂಡರ್ ಹಾಕಿದ್ದವು. ಹಣಕಾಸು ಟೆಂಡರ್ ಪ್ರಕ್ರಿಯೆಯಲ್ಲಿ ಎನ್‌ಎಸ್‌ಎಲ್ ಕಂಪನಿ ತಿರಸ್ಕೃತಗೊಂಡಿದ್ದರಿಂದ ಅಂತಿಮವಾಗಿ ನಿರಾಣಿ ಕಂಪನಿಗೆ ಟೆಂಡರ್ ದೊರಕಿದೆ. ದುಡಿಯುವ ಬಂಡವಾಳದ ಕೊರತೆಯಿಂದ ಕಾರ್ಖಾನೆಯನ್ನು ಈವರೆಗೆ ಆರಂಭಿಸಲು ಸಾಧ್ಯವಾಗಿರಲಿಲ್ಲ. 2010ರಿಂದ 2018ರವರೆಗೆ ರಾಜ್ಯಸರ್ಕಾರಗಳು 103.46 ಕೋಟಿ ರೂ. ಹಣವನ್ನು ಕಾರ್ಖಾನೆಗೆ ದುಡಿಯುವ ಬಂಡವಾಳ ನೀಡಿದ್ದರೂ ಕಾರ್ಖಾನೆ ಪ್ರಗತಿಯತ್ತ ಮುನ್ನಡೆಯಲೇ ಇಲ್ಲ. ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಲಾಗಿದ್ದರೂ ಆಧುನಿಕ ಯಂತ್ರೋಪಕರಣಗಳ ಬಳಕೆ , ವಿಧಿ-ವಿಧಾನಗಳ ರೂಪುರೇಷೆ ಕ್ರಮಬದ್ಧತೆಯಿಂದ ಕೂಡಿರದ ಕಾರಣ ಕಬ್ಬು ಅರೆಯುವಿಕೆ ಪರಿಪೂರ್ಣಗೊಳ್ಳಲಿಲ್ಲ. ಕಬ್ಬು ಅರೆಯುವಿಕೆ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡದಿರುವುದು ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣವಾಗಿತ್ತು ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಮೂರು ಕಾರ್ಖಾನೆ ಹೊಂದಿರುವ ನಿರಾಣಿ ಉದ್ಯಮ ಸಮೂಹ, ಇದೀಗ ಹಲವು ಕಾರಣಗಳಿಂದ ಸ್ಥಗಿತಗೊಂಡ ಮೂರು ಕಾರ್ಖಾನೆಗಳ ಒಡೆತನ ಪಡೆದಿದೆ. ಬಾದಾಮಿ ತಾಲೂಕಿನ ಬಾದಾಮಿ ಶುಗರ್ ಹಾಗೂ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದವು. ಈ ಎರಡೂ ಕಾರ್ಖಾನೆಗಳನ್ನು ನಿರಾಣಿ ಖರೀದಿಸಿ ಪುನಾರಂಭಿಸಲು ಮುಂದಾಗಿದ್ದಾರೆ. ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳಿಗೆ ಲೀಜ್ ಪಡೆದು 4 ವರ್ಷದಿಂದ ಸ್ಥಗಿತಗೊಂಡ ಈ ಸಹಕಾರಿ ಕಾರ್ಖಾನೆ ಪುನಃ ಆರಂಭಿಸಲು ಮುಂದಾಗಿದ್ದಾರೆ.