ಮಂಡ್ಯ: ವಿ.ಸಿ.ನಾಲೆಗೆ ಕಾರೊಂದು ಉರುಳಿ ಬಿದ್ದು, ಐವರು ಸಾವನ್ನಪ್ಪಿರುವ ದುರಂತ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ಮಂಗಳವಾರ ಸಂಜೆ ನಡೆದಿದೆ.
ಶಿವಮೊಗ್ಗ ನೋಂದಣಿ ಹೊಂದಿರುವ ಇಂಡಿಗೋ ವಿಸ್ತಾ ಕಾರು ಮಂಗಳವಾರ ಸಂಜೆ 4.45 ರ ವೇಳೆಯಲ್ಲಿ ಮೈಸೂರಿನಿಂದ ಬರುವಾಗ ಬನಘಟ್ಟದ ಬಳಿ ಇರುವ ವಿ.ಸಿ.ನಾಲೆಯ ತಡೆಗೋಡೆಗೆ ಡಿಕ್ಕಿ ಹೊಡೆದು ನಂತರ ಉರುಳಿ ಬಿದ್ದಿದೆ. ಕಾರಿ ನೀರಿನಲ್ಲಿ ಮುಳುಗಿದ್ದರಿಂದ ಕಾರಿನಲ್ಲಿದ್ದವರು ಹೊರ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆಯಷ್ಟೇ ವಿ.ಸಿ.ನಾಲೆಗೆ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡಲಾಗಿತ್ತು. ಇದರಿಂದ ನಾಲೆ ತುಂಬಿ ಹರಿಯುತ್ತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿದೆಯೋ ಅಥವಾ ಅಜಾಗರೂಕತೆಯೋ ಗೊತ್ತಿಲ್ಲ. ನಾಲೆಯ ತಡೆಗೋಡೆ ಬೇಧಿಸಿಕೊಂಡು ಕಾರು ಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ತುಂಬಿ ಹರಿಯುತ್ತಿದ್ದ ನಾಲೆಗೆ ಬಿದ್ದಿದ್ದರಿಂದ ಕಾರು ಸಂಪೂರ್ಣ ಮುಳುಗಿತ್ತು. ಇದರಿಂದ ಮೊದಲು ಪತ್ತೆ ಹಚ್ಚಲು ಕಷ್ಟವಾಗಿತ್ತು. ನಂತರ ವಿ.ಸಿ.ನಾಲೆಗೆ ಇಳಿದ ಅಗ್ನಿಶಾಮಕ ಸಿಬಂದಿಗಳು ಕಾರಿಗಾಗಿ ಪರಿಶೀಲನೆ ನಡೆಸಿದರು. ಸುಮಾರು 3 ಗಂಟೆಗಳ ಬಳಿಕ ಕಾರನ್ನು ಪತ್ತೆ ಹಚ್ಚಲಾಯಿತು. ನಂತರ ಕ್ರೇನ್ ಕರೆಸಿ ಕಾರನ್ನು ಹೊರತೆಗೆಯಲಾಯಿತು. ಬಳಿಕ ಕಾರಿನಲ್ಲಿದ್ದವರು ಎಲ್ಲರೂ ಪುರುಷರಾಗಿದ್ದು, ಕಾರು ಶಿವಮೊಗ್ಗ ನೋಂದಣಿಯ ನಂಬರ್ ಹೊಂದಿದೆ. ಕಾರಿನಲ್ಲಿದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.