Advertisement

ಗೋವಾ: 186 ಪಂಚಾಯತಿಗಳಿಗೆ ಚುನಾವಣಾ ದಿನಾಂಕ ಘೋಷಣೆ ಮಾಡಿದ ಪಂಚಾಯತ್ ಸಚಿವ

02:33 PM Apr 22, 2022 | Team Udayavani |

ಪಣಜಿ: ರಾಜ್ಯದಲ್ಲಿ 186 ಗ್ರಾಮ ಪಂಚಾಯತಿಗಳ ಅವಧಿ ಜೂನ್ ಎರಡನೇಯ ವಾರದಲ್ಲಿ ಮುಕ್ತಾಯಗೊಳ್ಳಲಿದ್ದು ಜೂನ್ 4 ರಂದು ಚುನಾವಣೆ ನಡೆಸಲು ಗೋವಾ ರಾಜ್ಯ ಚುನಾವಣಾ ಆಯೋಗ ಪ್ರಸ್ತಾವನೆ ಕಳುಹಿಸಿದೆ. ಪಂಚಾಯತಿಗಳಿಗೆ ಈಗಾಗಲೇ ಸಮರ್ಪಕ ಮೀಸಲಾತಿ ಕಲ್ಪಿಸಿರುವುದರಿಂದ ಮೀಸಲಾತಿಗಾಗಿ ವಾರ್ಡ ಸಂಖ್ಯೆ ಹೆಚ್ಚಿಸುವುದು ಅಸಾಧ್ಯ ಎಂದು ರಾಜ್ಯ ಪಂಚಾಯತಿ ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದರು.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಸಲಹೆಯ ಮೇರೆಗೆ ರಾಜ್ಯ ಚುನಾವಣಾ ಆಯೋಗದಿಂದ ವಾರ್ಡ್ ಗಳ ಪುನಾರಚನೆ ಮಾಡಬೇಕಾಗುತ್ತಿದೆ. ಈ ಕಾರ್ಯ ಪೂರ್ಣಗೊಂಡ ನಂತರ ವಿವಿಧ ಪಂಚಾಯತಿಗಳಿಗೆ ಮೀಸಲು ವಾರ್ಡಗಳಿಗೆ ಅಧಿಸೂಚನೆ ಹೊರಡಿಸಲಾಗುವುದು. 186 ಪಂಚಾಯತಿ ಹಾಗೂ ಇನ್ನುಳಿದ ಮೂರು ಪಂಚಾಯತಿಗಳ 17 ವಾರ್ಡಗಳಿಗೆ ಚುನಾವಣೆ ನಡೆಯಲಿದೆ. ಸರ್ಕಾರ ಈಗಾಗಲೇ ಪರಿಶಿಷ್ಠ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಸಾಕಷ್ಟು ಮೀಸಲಾತಿ ನೀಡಿದೆ ಎಂದು ಸಚಿವ ಮಾವಿನ್ ಗುದಿನ್ಹೊ ಹೇಳಿದರು.
ಪಂಚಾಯತಿ ಚುನಾವಣೆ ಪಕ್ಷದ ಮಟ್ಟದಲ್ಲಿ ನಡೆಯುವುದಿಲ್ಲ. ಪಂಚಾಯತಿಗಳಲ್ಲಿ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಮಾಜದಲ್ಲಿ ಉತ್ತಮ ಕೆಲಸ, ಅಭಿವೃದ್ಧಿ ಕೆಲಸ ಮಾಡಿದವರಿಗೆ ಅವಕಾಶ ನೀಡಬೇಕು.

Advertisement

ಪಕ್ಷದ ಮಟ್ಟದಲ್ಲಿ ಚುನಾವಣೆ ನಡೆಯದ ಕಾರಣ ಒಂದೇ ಪಕ್ಷದ ಹಲವರು ಚುನಾವಣೆಗೆ ಸ್ಫರ್ಧಿಸಿ ತಮ್ಮ ಅದೃಷ್ಠ ಪರೀಕ್ಷಿಸಬಹುದು. ಇದರಿಂದಾಗಿ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ಕಾರ್ಯಕರ್ತರನ್ನು ಕೆರಳಿಸುವ ಪರಿಸ್ಥಿತಿ ಬರುವುದಿಲ್ಲ ಎಂದು ಮಾವಿನ್ ಗುದಿನ್ಹೊ ಅಭಿಪ್ರಾಯಪಟ್ಟರು.

ಗ್ರಾ.ಪಂ ಚುನಾವಣೆ ಜೂನ್ 4 ರಂದು ನಿಗಧಿಯಾಗಿದ್ದು ಅಧಿಸೂಚನೆ ಹೊರಡಿಸಿದ ನಂತರ ಚುನಾವಣಾ ಕಾರ್ಯಕ್ರಮ ಸಿದ್ಧಗೊಳ್ಳಲಿದೆ. ಮುಂದಿನ ಆರ್ಥಿಕ ವರ್ಷಗಳಲ್ಲಿ ಪಂಚಾಯತಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ಪಂಚಾಯತ್ ಸಚಿವ ಮಾವಿನ್ ಗುದಿನ್ಹೊ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next