Advertisement
ತೆಂಕ ಎಡಪದವು ಗ್ರಾಮದ ಟೆಂಪೋ ಪಾರ್ಕ್ ಬಳಿ ತೋಡಿನಲ್ಲಿ ತ್ಯಾಜ್ಯ ರಾಶಿ ಬಿದ್ದು ದುರ್ವಾಸನೆ ಬೀರುತ್ತಿತ್ತು. ಹಲವು ತಿಂಗಳಿಂದ ಈ ಸಮಸ್ಯೆಯಿದ್ದರೂ ಗ್ರಾ.ಪಂ. ಸ್ಪಂದಿಸಿರಲಿಲ್ಲ. ಈ ಬಗ್ಗೆ ಗ್ರಾ.ಪಂ. ಆಡಳಿತ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದರೂ ಕಸ ಬೀಳುವುದು ತಪ್ಪಲಿಲ್ಲ. ಇದರಿಂದ ಬೇಸತ್ತ ಟೆಂಪೋ ಚಾಲಕ- ಮಾಲಕರು “ಉದಯವಾಣಿ’ಗೆ ಕರೆ ಮಾಡಿದ್ದರು.
ಕಸದ ಜತೆಗೆ ಸತ್ತ ನಾಯಿ, ಬೆಕ್ಕು, ಇಲಿ, ಹೆಗ್ಗಳ, ಕೋಳಿ ಹಾಗೂ ಮೀನಿನ ತ್ಯಾಜ್ಯವನ್ನೂ ಎಸೆಯುತ್ತಿದ್ದರು. ಇದು ದುರ್ವಾಸನೆ ಬೀರುತ್ತಿದ್ದು, ಉಸಿರುಗಟ್ಟಿದಂತೆ ಆಗುತ್ತಿತ್ತು ಎಂದು ಟೆಂಪೋ ಚಾಲಕ-ಮಾಲಕರು ವಿವರಿಸಿದರು. ಪೊಲೀಸ್ ಠಾಣೆಗೆ ನೀಡಿದ ದೂರಿನ ಯಥಾಪ್ರತಿಯನ್ನೂ ತೋರಿಸಿದರು. ಈ ಕುರಿತು ಎಡಪದವು ಗ್ರಾ.ಪಂ. ಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೋಗಮಲ್ಲಣ್ಣ ಅವರನ್ನು ದೂರವಾಣಿಯಲ್ಲಿ ವಿಚಾರಿಸಿದಾಗ, ತಕ್ಷಣವೇ ಕಸ ತೆರವು ಮಾಡಿಸುವುದಾಗಿ ಹೇಳಿ, ಜೆಸಿಬಿ ತರಿಸಿದರು. ಉದಯವಾಣಿ’ಯ ಸಕಾಲಿಕ ಸ್ಪಂದನೆಯಿಂದ ಸಮಸ್ಯೆ ಬಗೆಹರಿದಿರುವುದಕ್ಕೆ ಟೆಂಪೋ ಚಾಲಕ – ಮಾಲಕರು ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದೆ ಈ ಸ್ಥಳವನ್ನು ಸ್ವಚ್ಛವಾಗಿಡುವುದಕ್ಕೆ ಗ್ರಾ.ಪಂ. ಕಾಳಜಿ ವಹಿಸಬೇಕು, ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.