ಆಳಂದ: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಒಂದೆಡೆ ಚುನಾವಣೆಗೆ ಸ್ಪರ್ಧಿಸಿದ್ದ ಗ್ರಾಪಂ ಸದಸ್ಯನೊಬ್ಬನ ಮದುವೆಯೂ ಅದೇ ದಿನ ಜರುಗಿದ ಅಪರೂಪದ ಪ್ರಸಂಗ ತಾಲೂಕಿನ ಚಿಂಚನಸೂರದಲ್ಲಿ ನಡೆದಿದೆ.
ಚಿಂಚನಸೂರ ಗ್ರಾಪಂ ಸದಸ್ಯ ರಾಧಾಕೃಷ್ಣ ಧನ್ನಿ ಎನ್ನುವ ಮದುವೆ ನಿಶ್ಚಿತವಾದ ದಿನವೇ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಹೀಗಾಗಿ ಆಯ್ಕೆಗೊಂಡ ವಿಷಯ ತಿಳಿದು ಸಂಭ್ರಮಿಸಿ, ತಕ್ಷಣವೇ ಕಲಬುರಗಿ ಕಲ್ಯಾಣ ಮಂಟಪಕ್ಕೆ ತೆರಳಿ, ದಾರಿ ಕಾಯುತ್ತ ಕುಳಿತಿದ್ದ ಬಂಧುಗಳನ್ನು ಸಂತಸಗೊಳಿಸಿದರು.
ಚಿಂಚನಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ದಿಲೀಪ ಘಂಟಿ, ಉಪಾಧ್ಯಕ್ಷರಾಗಿದ್ದ ವಿಠಾಬಾಯಿ ಮದನ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಮದುವೆ ದಿನವೇ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ರಾಧಾಕೃಷ್ಣ ಅವರಿಗೆ ಅಧಿಕಾರ ಹಾಗೂ ಬಾಳ ಸಂಗಾತಿ ಎರಡು ಒಂದೇ ಸಲ ಒಲಿದು ಬಂತು.
ಗ್ರಾಪಂನ ಒಟ್ಟು 16 ಸದಸ್ಯ ಬಲ ಹೊಂದಿರುವ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅಧ್ಯಕ್ಷತೆಯಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ರಾಧಾಕೃಷ್ಣ ಧನ್ನಿ ಹಾಗೂ ರೇವಣಸಿದ್ದಪ್ಪ ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಪಾಟೀಲ ಹಾಗೂ ಲಕ್ಷ್ಮೀ ಹದಗಿಲ್ ಸ್ಪರ್ಧಿಸಿದ್ದರು. ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ರಾಧಾಕೃಷ್ಣ ಧನ್ನಿ ಒಂಭತ್ತು ಮತ ಪಡೆದು ಗೆಲವು ಸಾಧಿಸಿದರೆ, ಉಪಾಧ್ಯಕ್ಷರಾಗಿ ಶಕುಂತಲಾ ಪಾಟೀಲ ಎಂಟು ಮತಗಳನ್ನು ಪಡೆದು ವಿಜಯದ ನಗೆ ಬೀರಿದರು. ಒಬ್ಬ ಸದಸ್ಯರ ಮತ ಅಸಿಂಧುವಾಯಿತು. ಇಲ್ಲಿ ಬಿಜೆಪಿ ಬೆಂಬಲಿತರು ಕಳೆದ ಚುನಾವಣೆಯಲ್ಲಿ ಹೆಚ್ಚಿನ ಸದಸ್ಯರು ಚುನಾಯಿತರಾಗಿದ್ದರು. ಬಿಜೆಪಿ ಬೆಂಬಲಿತ ಸದಸ್ಯರು 15 ತಿಂಗಳು ಅಧಿಕಾರದಲ್ಲಿ ಇದ್ದರು. ಈಗ ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿರುವುದು ವಿಶೇಷ. ಸಿಪಿಐ ಬಾಸು ಚವ್ಹಾಣ, ಪಿಎಸ್‌ಐ ವಾತ್ಸಲ್ಯ, ಶಿರಸ್ತೇದಾರ ಮಹೇಶ ಸಜ್ಜನ ಇದ್ದರು.
ಬಂಧುಬಾಂಧವರಿಂದ ಮೆರವಣಿಗೆನಿ
ಗದಿಯಂತೆ ಕಲಬುರಗಿಯಲ್ಲಿ ರಾಧಾಕೃಷ್ಣ ಧನ್ನಿ ಅವರ ಮದುವೆ ಮೂಹರ್ತ ಮಧ್ಯಾಹ್ನ ನಿಗದಿಯಾಗಿತ್ತು. ಕಲಬುರಗಿಯಿಂದಲೇ ಬೆಳಗ್ಗೆ ಗ್ರಾಪಂ ಕಚೇರಿಗೆ ಆಗಮಿಸಿ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿದರು. ಫಲಿತಾಂಶ ಘೋಷಣೆಯಾದ ತಕ್ಷಣವೇ ನೇರವಾಗಿ ಕಲಬುರಗಿಗೆ ಕಾರ್‌ನಲ್ಲಿ ತೆರಳಿ ವಧುವಿಗೆ ತಾಳಿ ಕಟ್ಟಿದರು. ಮದುವೆ ಮಂಟಪದಲ್ಲಿ ಮೊದಲೇ ಹಾಜರಿದ್ದ ಬಂಧುಗಳು ನೂತನ ವಧುವರರಿಗೆ ಶುಭಾಶಯ ಹೇಳಿದರು. ಸಂಜೆ ಗ್ರಾಮದಲ್ಲಿ ರಾಧಾಕೃಷ್ಣನ ಮದುವೆಯಾಗಿದ್ದಕ್ಕೆ ಹಾಗೂ ಗ್ರಾಪಂ ಅಧ್ಯಕ್ಷನಾಗಿದ್ದಕ್ಕೆ ಬಂಧುಗಳು, ಮಿತ್ರರು ಖುಷಿಯಾಗಿ ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು.
–ಮಹಾದೇವ ವಡಗಾಂವ