Advertisement

ಕರಿಮೆಣಸು ಕೃಷಿ ಯಶಸ್ಸಿಗೆ ಪಂಚಸೂತ್ರ

03:45 AM Apr 24, 2017 | Harsha Rao |

ಒಂದು ಕರಿಮೆಣಸಿನ ಬಳ್ಳಿಯಿಂದ ಪಡೆಯಬಹುದಾದ ಗರಿಷ್ಠ ಇಳುವರಿ ಎಷ್ಟು ಕಿಲೋಗ್ರಾಮ…? 17 ಕಿಲೋಗ್ರಾಮ್‌ ಎಂದು ತೋರಿಸಿಕೊಟ್ಟಿ¨ªಾರೆ ದಕ್ಷಿಣಕನ್ನಡದ ನೆಟ್ಟಣಿಗೆ ಮುಟ್ನೂರು ಗ್ರಾಮದ ಎಸ್‌. ಜಗನ್ನಾಥ ಶೆಟ್ಟಿ.  

Advertisement

ಕಳೆದವಾರ ಸಮೃದ್ಧಿ ಗಿಡಗೆಳೆತನ ಸಂಘದ ಸದಸ್ಯರೊಂದಿಗೆ ಅವರ ಎರಡು ಎಕರೆ ಅಡಿಕೆ ತೋಟಕ್ಕೆ ಭೇಟಿ ಕೊಟ್ಟಿದ್ದೆವು. 450 ಅಡಿಕೆ ಮರಗಳ ಆ ತೋಟದಲ್ಲಿ ಸುತ್ತಾಡುವಾಗ ಕಂಡದ್ದು ಪ್ರತಿಯೊಂದು ಅಡಿಕೆ ಮರಕ್ಕೂ ಹಬ್ಬಿದ್ದ ಸೊಂಪಾಗಿ ಬೆಳೆದಿದ್ದ ಪಣಿಯೂರು ತಳಿಯ ಕರಿಮೆಣಸಿನ ಬಳ್ಳಿಗಳು. ಬುಡದಿಂದಲೇ ಪುಷ್ಟವಾಗಿ ಬೆಳೆದಿದ್ದ ಆ ಬಳ್ಳಿಗಳಲ್ಲಿ ನೇತಾಡುವ ಕರಿಮೆಣಸಿನ ಗೊಂಚಲುಗಳು.

ಇಂತಹ ಉತ್ತಮ ಫ‌ಸಲು ಪಡೆಯಲು ಮಾಡಬೇಕಾದ್ದೇನು? ಎಂಬ ಪ್ರಶ್ನೆಗೆ ಜಗನ್ನಾಥ ಶೆಟ್ಟರದ್ದು ನೇರಾನೇರ ಉತ್ತರ. ಪ್ರತಿಯೊಂದು ಬಳ್ಳಿಯನ್ನು ವಾರಕ್ಕೆ ಒಂದೆರಡು ಬಾರಿಯಾದರೂ ಗಮನಿಸಬೇಕು ಎಂಬುದು ಮೊದಲನೇ ಸೂತ್ರ. ಆಗ ಕರಿಮೆಣಸಿನ ಬಳ್ಳಿಗೆ ಏನಾಗುತ್ತಿದೆ ಎಂಬುದು ತಿಳಿಯುತ್ತದೆ ಎನ್ನುತ್ತಾರೆ ಅವರು.

ಪ್ರತಿಯೊಂದು ಕರಿಮೆಣಸಿನ ಬಳ್ಳಿಯ ಬುಡಕ್ಕೆ ಎರಡು ವರ್ಷಕ್ಕೊಮ್ಮೆ ಹೊಸಮಣ್ಣು ಹಾಕಬೇಕೆಂಬುದು ಎರಡನೇ ಸೂತ್ರ. ಹಾಗೆಯೇ, ಅಡಿಕೆ ಮರಕ್ಕೆ ಹಾಕುವ ಗೊಬ್ಬರವಲ್ಲದೆ, ಪ್ರತೀ ಬಳ್ಳಿಗೂ ಪ್ರತ್ಯೇಕ ಗೊಬ್ಬರ ಒದಗಿಸಬೇಕು ಎಂಬುದು ಮೂರನೇ ಸೂತ್ರ. ಸೆಪ್ಟಂಬರಿನಿಂದ ಮೇ ತಿಂಗಳ ವರೆಗೆ, ತಿಂಗಳಿಗೆ ಎರಡು ಸಲ ಪ್ರತಿಯೊಂದು ಅಡಿಕೆಮರ-ಕರಿಮೆಣಸಿನ ಬುಡಕ್ಕೆ ತಲಾ 12.5 ಗ್ರಾಮ್‌ ದ್ರವ-ರಾಸಾಯನಿಕ ಗೊಬ್ಬರ ಒದಗಿಸುತ್ತಾರೆ ಜಗನ್ನಾಥ ಶೆಟ್ಟಿ. ಕೋಳಿಗೊಬ್ಬರವನ್ನೂ ವರುಷಕ್ಕೆ ಎರಡು ಸಲ ಹಾಕುತ್ತಾರೆ. ಕರಿಮೆಣಸಿನ ಬಳ್ಳಿಯ ಬುಡಕ್ಕೆ ಸೊಪ್ಪು ಹಾಕಬಾರದು; ಅವು ಕೊಳೆತು ಬಳ್ಳಿಗೆ ಬೂಷ್ಟು ರೋಗ ಬಾಧಿಸುವ ಸಾಧ್ಯತೆ ಜಾಸ್ತಿ ಎಂಬುದು ಅವರ ಸಲಹೆ.

ಜಗನ್ನಾಥ ಶೆಟ್ಟರು ಕೃಷಿಗೆ ತೊಡಗಿದ್ದು 1996ರಲ್ಲಿ. ಆರಂಭದ ವರುಷಗಳಲ್ಲಿ ಅವರು 7 ದನಗಳನ್ನು ಸಾಕುತ್ತಿದ್ದರು. ಅನಂತರ ಒಂದು ದನದ ಕಾಲು ಮುರಿಯಿತು. ಆ ದನಕ್ಕೆ ಚಿಕಿತ್ಸೆ ಕೊಡಿಸಿದರೂ ಅದರ ಕಾಲು ಸರಿಯಾಗಲಿಲ್ಲ. ಅದರ ಆರೈಕೆ ಮಾಡಿ ಅವರಿಗೆ ಸಾಕೋಸಾಕಾಯಿತು. ಕೊನೆಗೆ ದನಸಾಕಣೆ ಬೇಡವೇ ಬೇಡವೆಂದು ನಿರ್ಧರಿಸಿದರು. ದನ ಸಾಕುತ್ತಿ¨ªಾಗ ಕರಿಮೆಣಸಿನ ಬಳ್ಳಿಗಳ ಬುಡಕ್ಕೆ ಸೆಗಣಿಗೊಬ್ಬರ ಹಾಕುತ್ತಿದ್ದರು. ಅದರಿಂದಾಗಿ ಕಾಡುಹಂದಿಗಳ ಕಾಟ ಜೋರಾಗಿತ್ತು. ದನಸಾಕಣೆ ನಿಲ್ಲಿಸಿದ ನಂತರ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರ ಹಾಕಬೇಕಾಯಿತೆಂದು ಜಗನ್ನಾಥ ಶೆಟ್ಟಿ ವಿವರಿಸಿದರು. 

Advertisement

ಅವರ ತೋಟದಲ್ಲಿರುವ ಬಹುಪಾಲು ಕರಿಮೆಣಸಿನ ಬಳ್ಳಿಗಳ ವಯಸ್ಸು 15 ವರ್ಷ. ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಕರಿಮೆಣಸಿನ ಬಳ್ಳಿಗಳ ಬುಡದಲ್ಲಿ ಬೆಳೆದಿರುವ ಕಳೆ ತೆಗೆದು ಬೋಡೋì ದ್ರಾವಣ ಸಿಂಪಡಿಸಬೇಕು. ಅನಂತರ ಕರಿಮೆಣಸಿನ ಎಲೆಗಳಲ್ಲಿ ಕಪ್ಪು ಚುಕ್ಕೆ ಕಂಡಾಗೆಲ್ಲ ಬೋರ್ಡೊ ದ್ರಾವಣ ಸಿಂಪಡಿಸಬೇಕು ಎಂಬುದು ಜಗನ್ನಾಥ ಶೆಟ್ಟರ ನಾಲ್ಕನೇ ಸೂತ್ರ. ಈ ಕ್ರಮದಿಂದ ಬೂಸ್ಟ್‌ ರೋಗ ನಿಯಂತ್ರಿಸಲು ಸಾಧ್ಯವೆಂಬುದು ಅವರ ಅನುಭವ. ಜೊತೆಗೆ, ಬಳ್ಳಿಗಳ ಬುಡದಲ್ಲಿ ಬೂಸ್ಟಿನ ಬೆಳವಣಿಗೆ ಕಂಡರೆ ಅದನ್ನು ತಕ್ಷಣವೇ ಚೂರಿಯಿಂದ ಹೆರೆದು ತೆಗೆಯಬೇಕು, ಉದಾಸೀನ ಮಾಡಬಾರದೆಂದು ಎಚ್ಚರಿಸುತ್ತಾರೆ.

ನಾವು ಭೇಟಿಯಿತ್ತಾಗ ಜಗನ್ನಾಥ ಶೆಟ್ಟರ ತೋಟದಲ್ಲಿ ಕರಿಮೆಣಸಿನ ಕೊಯ್ಲು ನಡೆಯುತ್ತಿತ್ತು. ಕರಿಮೆಣಸು ಹಣ್ಣಾಗಿ ಕೆಂಪು ಬಣ್ಣಕ್ಕೆ ತಿರುಗುವಾಗ ಕೊಯ್ದು, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಉತ್ತಮ ಬೆಲೆಯಿ¨ªಾಗ ಮಾರಬೇಕೆಂಬುದು ಶೆಟ್ಟರ ಐದನೇ ಸೂತ್ರ. ಸುಮಾರು 30 ಅಡಿ ಎತ್ತರದ ವರೆಗಿನ ಕರಿಮೆಣಸಿನ ಗೊಂಚಲುಗಳ ಕೊಯ್ಲಿಗೆ ಅಲ್ಯುಮಿನಿಯಂ ಏಣಿಯ ಬಳಕೆ. ಅದಕ್ಕಿಂತ ಎತ್ತರದಲ್ಲಿರುವ ಗೊಂಚಲುಗಲ ಕೊಯ್ಲಿಗೆ ಬಿದಿರಿನ ಕೊಕ್ಕೆ ಬಳಕೆ. ಅವರೇ ಸ್ವತಃ ಕೊಯ್ಲು ಮಾಡುವುದಲ್ಲದೆ, ಕೆಲಸದ ಆಳುಗಳಿಂದಲೂ ಕೊಯ್ಲು ಮಾಡಿಸುತ್ತಾರೆ. ಕೊಯ್ಲಿನ ನಂತರ ಯಂತ್ರದ ಮೂಲಕ ಗೊಂಚಲಿನಿಂದ ಕರಿಮೆಣಸು ಬೇರ್ಪಡಿಸಿ, ಬಿಸಿಲಿನಲ್ಲಿ ಒಣಗಿಸುತ್ತಾರೆ. 

ಅಡಿಕೆ ಮರಗಳಿಗೆ ಕರಿಮೆಣಸಿನ ಬಳ್ಳಿ ಹಬ್ಬಿಸಿ, ಕರಿಮೆಣಸಿನ ಕೃಷಿ ಮಾಡುವಾಗ, ತೋಟದೊಳಗೆ ಕೊಕ್ಕೋದಂತಹ ಗಿಡಗಳನ್ನು ಉಪಬೆಳೆಯಾಗಿ ಬೆಳೆಸಬಾರದು ಎಂಬುದು ಅವರ ಕಿವಿಮಾತು. ತೋಟದ ಗಡಿಯಲ್ಲಿ ಕೊಕ್ಕೋ ಗಿಡ ಬೆಳೆಸಬಹುದು ಎನ್ನುತ್ತಾರೆ.

1992ರಲ್ಲಿ ಪುತ್ತೂರಿನ ಕಾಲೇಜಿನಲ್ಲಿ ಬಿ.ಎ. ಪದವಿ ಗಳಿಸಿದ ಜಗನ್ನಾಥ ಶೆಟ್ಟಿ ತಮ್ಮ ತಂದೆಯ ನಿಧನದ ನಂತರ ಅನಿವಾರ್ಯವಾಗಿ ಕೃಷಿಗೆ ಇಳಿದವರು. ಇವರಿಗೆ ಪತ್ನಿ ಅರುಣಾ ಅವರಿಂದ ಪೂರ್ತಿ ಸಹಕಾರ. ಈಗ ಶೆಟ್ಟರಿಗೆ ಅಡಿಕೆ-ಕರಿಮೆಣಸು ಕೃಷಿಯಲ್ಲಿ ಇಪ್ಪತ್ತು ವರುಷಗಳ ಅನುಭವ. ಅವರ ಮನೆಯ ಕೆಳಗಿನ ಬಯಲಿನಲ್ಲಿ ಅಡಿಕೆ – ಕರಿಮೆಣಸು ತೋಟ. ಅದನ್ನೇ ನಂಬಿದರೆ ಸಾಲದೆಂದು, ಮೇಲಿನ ಗುಡ್ಡದಲ್ಲಿ 10 ವರುಷಗಳ ಮುನ್ನ 430 ರಬ್ಬರ್‌ ಸಸಿ ನೆಟ್ಟು ಬೆಳೆಸಿದರು. ಕಳೆದ ವರುಷದಿಂದ ಆ ರಬ್ಬರಿನ ತೋಟದಲ್ಲಿ ಟ್ಯಾಪಿಂಗ್‌ ಶುರು.

ಜಗನ್ನಾಥ ಶೆಟ್ಟರ ಸರವು ಮನೆ ಮತ್ತು ತೋಟಕ್ಕೆ ಪುತ್ತೂರಿನಿಂದ ಅರ್ಧ ಗಂಟೆಯ ಹಾದಿ. ಪುತ್ತೂರು- ಸುಳ್ಯ ಹೆ¨ªಾರಿಯಲ್ಲಿ ಕಾವು ದಾಟಿದ ನಂತರ, ಸಾಂತ್ಯ ಬಸ್‌ ನಿಲ್ದಾಣದ ಮುಂಚೆ ಎಡಕ್ಕೆ (ಕಾಂಕ್ರೀಟ್‌ ರಸ್ತೆಗೆ) ತಿರುಗಿ ಮುಂದುವರಿದರೆ ಸರವು ಮನೆಯ ಅಂಗಳ ತಲಪುತ್ತೇವೆ. 

ಈಗ ಒಣಗಿಸಿದ ಕರಿಮೆಣಸಿನ ಬೆಲೆ ಕಿಲೋಗ್ರಾಮಿಗೆ ರೂ.700. ಹಾಗಾದರೆ ಜಗನ್ನಾಥ ಶೆಟ್ಟರ ಆದಾಯ ವರ್ಷಕ್ಕೆ ಎಷ್ಟು ಲಕ್ಷ ರೂಪಾಯಿ ಎಂದು ಲೆಕ್ಕ ಹಾಕುವ ಮುನ್ನ, ಅಂದು ಅವರು ಹೇಳಿದ ಒಂದು ಮಾತನ್ನು ನೆನಪು ಮಾಡಿಕೊಳ್ಳಬೇಕು.  ಕೃಷಿಯಲ್ಲಿ ಕೈತುಂಬ ಲಾಭವಿದೆ. ಆದರೆ ಆರಾಮದ ಕೃಷಿ ಎಂಬುದಿಲ್ಲ. ದಿನವಿಡೀ ಕೆಲಸ ಮಾಡಲು ತಯಾರಿದ್ದರೆ ಮಾತ್ರ ಕೃಷಿಗೆ ಇಳಿಯಬೇಕು. (ಸಂಪರ್ಕ 9449773595 ರಾತ್ರಿ 8ರಿಂದ 9 ಗಂಟೆ)

– ಅಡ್ಕೂರು ಕೃಷ್ಣರಾವ್

Advertisement

Udayavani is now on Telegram. Click here to join our channel and stay updated with the latest news.

Next