Advertisement
ಇನ್ನು, ಮಂಡ್ಯ ಚುನಾವಣೆ ಕಾವು ಜೋರಾಗುತ್ತಿದ್ದು, ನೀನಾ.. ನಾನಾ? ಅನ್ನೋ ಹಣಾಹಣಿ ಜೋರಾಗಿದೆ. ಎಲ್ಲಾದಕ್ಕೂ ಏಪ್ರಿಲ್ 18ರಂದು ಚುನಾವಣೆ ಮುಗಿದ ಬಳಿಕ ಉತ್ತರ ಸಿಗಲಿದೆ. ಆದರೆ, ಭಟ್ಟರ “ಪಂಚತಂತ್ರ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲೇ ಮಂಡ್ಯ ಎಲೆಕ್ಷನ್ ರಿಸೆಲ್ಟ್ ಏನಾಗಬಹುದು ಅಂತ ಗೊತ್ತಾಗಲಿದೆಯಂತೆ! ಹೌದು, “ಪಂಚತಂತ್ರ’ ಚಿತ್ರದ ಸಾರಾಂಶ ಇಂದಿನ ರಾಜಕೀಯ ಸನ್ನಿವೇಶಕ್ಕೆ ಕನೆಕ್ಟ್ ಆಗುವಂತಿದ್ದು, ಚಿತ್ರವನ್ನು ನೋಡಿದ ಅನೇಕರು “ಮಂಡ್ಯದಲ್ಲಿ ಎಲೆಕ್ಷನ್ ನಡೆಯುತ್ತಿರುವಾಗಲೇ ಕಾದು ನೋಡಿ ಚಿತ್ರವನ್ನು ಬಿಡುಗಡೆ ಮಾಡಿದ್ದೀರಾ?’ ಎಂದು ಭಟ್ಟರನ್ನು ಕೇಳುತ್ತಿದ್ದಾರಂತೆ. ಅಲ್ಲದೆ, ಸೋಷಿಯಲ್ ಮೀಡಿಯಾಗಳಲ್ಲಿ “ಮಂಡ್ಯ ಎಲೆಕ್ಷನ್ ಯಾರ್ ಗೆಲ್ತಾರೆ ಅಂತ ಪೋಲಿ ಭಟ್ರಾ ಪಂಚತಂತ್ರ ಫಿಲಂ ಕ್ಲೈಮ್ಯಾಕ್ಸ್‌ನಲ್ಲಿ ಮೊದ್ಲೇ ಹೇಳವ್ರೆ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಯೋಗರಾಜ್ ಭಟ್, “ಚಿಕ್ಕವರು ತಮ್ಮ ಯೋಚನೆಯಲ್ಲಿ ದೊಡ್ಡವರಾಗುತ್ತಾರೆ. ಇನ್ನು ದೊಡ್ಡವರು, ಚಿಕ್ಕವರು ಗೆಲ್ಲಲು ಹೃದಯವಂತರಾಗುತ್ತಾರೆ. ಸಿನಿಮಾದಲ್ಲಿ ಹಿರಿಯರು ಮತ್ತು ಕಿರಿಯರ ನಡುವಿನ ಜುಗಲ್‌ಬಂದಿ ಅದೆಲ್ಲವನ್ನೂ ತೋರಿಸುತ್ತದೆ. ಗೆಲ್ಲಬಲ್ಲೆ ಹೃದಯವನ್ನು… ನಿತ್ಯ ಬಾಳ ಸಮರವನ್ನು… ಮಮತೆಯಿಂದ ಮಾತ್ರ, ಇದೇ ಪಂಚತಂತ್ರ ಎನ್ನುವ ಜಯಂತ ಕಾಯ್ಕಿಣಿ ಅವರ ಸಾಲುಗಳೇ ಪಂಚತಂತ್ರದ ಕ್ಲೈಮ್ಯಾಕ್ಸ್‌ಗೆ ಪ್ರೇರಣೆಯಾಗಿದ್ದು, ಅದಕ್ಕೆ ಹೊಂದಿಕೊಂಡಂತೆ ಉಳಿದೆಲ್ಲವೂ ಬಂದಿರುವುದು ಕಾಕತಾಳೀಯವಷ್ಟೇ’ ಎನ್ನುತ್ತಾರೆ. ಇವೆಲ್ಲದರ ನಡುವೆ ‘ಪಂಚತಂತ್ರ’ದ ರಿಮೇಕ್ ಮತ್ತು ಡಬ್ಬಿಂಗ್ ರೈಟ್ಸ್ ಉತ್ತಮ ಬೆಲೆಗೆ ಮಾರಾಟವಾಗಿವೆಯಂತೆ. ಅಲ್ಲದೆ “ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ಅಲ್ಲಿನ ಹಲವು ಹಿರಿಯ ನಿರ್ಮಾಪಕರು ಉತ್ಸುಕರಾಗಿದ್ದು, ಆ ಬಗ್ಗೆ ಕೂಡ ಮಾತುಕತೆ ಶುರುವಾಗಿದೆ’ ಎನ್ನುತ್ತಾರೆ ಭಟ್ಟರು. ಇದೇ ವೇಳೆ ಹಾಜರಿದ್ದ ಚಿತ್ರದ ನಾಯಕ ನಟ ವಿಹಾನ್, ನಾಯಕಿ ಸೋನಾಲ್, ನಟ ಕಂ ನಿರ್ಮಾಪಕ ಕರಿಸುಬ್ಬು, ಸಾಗರ್, ನಂದು, ಛಾಯಾಗ್ರಹಕ ಜ್ಞಾನ ಮೂರ್ತಿ, ನಿರ್ಮಾಪಕರು ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರು “ಪಂಚತಂತ್ರ’ದ ಅನುಭವಗಳನ್ನು ಹಂಚಿಕೊಂಡರು.