ಬೆಳಗಾವಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದೂತ್ವದ ಫೈರ್ ಬ್ರ್ಯಾಂಡ್ ಅಷ್ಟೇ ಅಲ್ಲ, ಲಿಂಗಾಯತ ಪಂಚಮಸಾಲಿ ಸಮುದಾಯದ ಫೈರ್ ಬ್ರ್ಯಾಂಡ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಯತ್ನಾಳ ಅವರನ್ನು ಬಿಜೆಪಿ ಕಡೆಗಣಿಸುವುದಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಹತ್ತಿಕ್ಕುವ ಯತ್ನ ನಡೀತಿದೆ. ಆದರೆ ಹುಲಿ ಯಾವತ್ತಿದ್ದರೂ ಹುಲಿಯೇ. ಏನೇ ಹತ್ತಿಕ್ಕಿದ್ದರೂ ಮತ್ತೆ ಪುಟಿದೇಳುವ ಶಕ್ತಿ ಈ ಸಮಾಜ ಅವರಿಗೆ ಕೊಟ್ಟಿದೆ ಎಂದರು.
ಇದನ್ನೂ ಓದಿ : ಬಿಳಿಗಿರಿರಂಗನಾಥ ದೇಗುಲದ ಅರ್ಚಕರು ನೌಕರರು ಸೇರಿ 17 ಮಂದಿಗೆ ಕೋವಿಡ್: ದೇವಸ್ಥಾನಕ್ಕೆ ಬೀಗ
ಲಿಂಗಾಯತ ಸಮುದಾಯ ರಾಜಕೀಯ ಇತಿಹಾಸ ನೋಡಿದರೆ ಸಮುದಾಯದ ಪರ ಧ್ವನಿ ಎತ್ತುವವರ ಹತ್ತಿಕ್ಕುವ ಯತ್ನ ನಡೆದಿದೆ. ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಧ್ವನಿ ಎತ್ತಿದ ಮೇಲೆ ಫೈರ್ ಬ್ರ್ಯಾಂಡ್ ಆಗಿದ್ದಾರೆ ಎಂದರು.
ಯತ್ನಾಳ ಅವರನ್ನು ಸ್ಥಳೀಯ ಸಣ್ಣಪುಟ್ಟ ಬಿಜೆಪಿ ನಾಯಕರು ಕಡೆಗಣಿಸುವ ಯತ್ನ ಮಾಡಬಹುದು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ ಕಡೆಗಣಿಸುವುದಿಲ್ಲ ಎಂದರು.
ಕರ್ನಾಟಕದಲ್ಲಿ ಬಹುಸಂಖ್ಯಾತ ಪಂಚಮಸಾಲಿ ಜನಾಂಗ ಅವರಿಗೆ ಗೊತ್ತಿದೆ. ಯಡಿಯೂರಪ್ಪರ ಜನಾಂಗ ಕೇವಲ ಎರಡು ಪರ್ಸೆಂಟ್, ಪಂಚಮಸಾಲಿ ಜನಾಂಗ 80 ಪರ್ಸೆಂಟ್. ನಿಜವಾಗಿ ಹೆಚ್ಚು ಜನಸಂಖ್ಯೆ ಇರು ಜನಾಂಗ ಇದು ಅಂತಾ ಕೇಂದ್ರ ಸರ್ಕಾರಕ್ಕೆ ಮನದಟ್ಟಾಗಿದೆ ಎಂದರು.