Advertisement

ಪಂಚಮಸಾಲಿ ಮೂರನೇ ಪೀಠಕ್ಕೆ ಶ್ರೀಕಾರ

04:10 PM Jun 25, 2021 | Team Udayavani |

ಜಮಖಂಡಿ: ರಾಜ್ಯದ ಹರಿಹರ ಮತ್ತು ಕೂಡಲಸಂಗಮ ಪಂಚಮಸಾಲಿ ಸಮಾಜ ಪೀಠದ ಕಾರ್ಯವೈಖರಿಗೆ ನೊಂದಿರುವ ಶ್ರೀಗಳು ಮತ್ತು ಭಕ್ತರು ಪರ್ಯಾಯವಾಗಿ ಮೂರನೇ ಪಂಚಮಸಾಲಿ ಪೀಠದ ಸ್ಥಾಪನೆಗಾಗಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.

Advertisement

ನಗರದಲ್ಲಿ ಪಂಚಮಸಾಲಿ ಮೂರನೇ ಪೀಠದ ಸ್ಥಾಪನೆಗಾಗಿ ನಡೆದ ಅಂತಿಮ ಸಭೆಯಲ್ಲಿ 30ಕ್ಕೂ ಹೆಚ್ಚು ಶ್ರೀಗಳು ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಸಮಾಜದ ಒಳಿತಿಗಾಗಿ ರಾಜಕೀಯ ಹೊರತಾಗಿ ಧಾರ್ಮಿಕ ಸೇವೆಗಳಿಗೆ ಸ್ಪರ್ಶ ನೀಡುವ ನಿಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೆ ಮೂರನೇ ಪೀಠದ ಅವಶ್ಯಕತೆಯಿದೆ. ಸಮಾಜದ ಮಠಾಧೀಶರು ಸೇರಿ ಸಾಮೂಹಿಕ ಪ್ರಯತ್ನದ ಮೂಲಕ ಮೂರನೇ ಪೀಠ ಆರಂಭಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಈ ಹಿಂದೆ ಅಥಣಿ ತಾಲೂಕಿನ ಕಕಮರಿ ಮಠದಲ್ಲಿ ಮೂರನೇ ಪೀಠ ಸ್ಥಾಪನೆಗೆ ಪೀಠಿಕೆ ಹಾಕುವ ಮೂಲಕ ಸಭೆ ನಡೆಸಿ ಚರ್ಚಿಸಲಾಗಿತ್ತು. ಜಮಖಂಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 30ಕ್ಕೂ ಹೆಚ್ಚು ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರನೇ ಪೀಠದ ಸ್ಥಾಪನೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಯಾವುದೇ ಭೇದ-ಭಾವವಿಲ್ಲದೇ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುವ ಮಾನದಂಡ ಪ್ರಮುಖವಾಗಿದೆ. ಈಗಿರುವ ಎರಡು ಪೀಠಗಳಿಂದ ಸಮಾಜ, ಸಮುದಾಯದ ಅಭಿವೃದ್ಧಿಯಾಗುತ್ತಿಲ್ಲ. ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಶ್ರೀಗಳು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ಸಮಾಜದ ಗೌರವ ಕಾಪಾಡುವ ನಿಟ್ಟಿನಲ್ಲಿ ಮೂರನೇ ಪೀಠ ಕೆಲಸ ಮಾಡಲಿದೆ.

ಸ್ವಾರ್ಥವೇ ತುಂಬಿರುವ ಎರಡು ಪೀಠದಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ನಮ್ಮ ಸಮಾಜದ ಕೆಲ ರಾಜಕೀಯ ಮುಖಂಡರನ್ನು ಮಾತ್ರ ಪೀಠಗಳು ಮೇಲೆತ್ತುವ ಕೆಲಸ ಮಾಡುತ್ತಿವೆ. ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ಕರೆದುಕೊಂಡು ಹೋಗುವ ದೂರದೃಷ್ಟಿ ವಿಚಾರಗಳೊಂದಿಗೆ ಮೂರನೇ ಪೀಠ ಶೀಘ್ರದಲ್ಲಿ ಅಂತಿಮ ರೂಪ ಪಡೆದುಕೊಳ್ಳಲಿದೆ ಎಂದು ಭಾಗವಹಿಸಿದ್ದ ಶ್ರೀಗಳು ಮಾಹಿತಿ ನೀಡಿದ್ದಾರೆ.

ಕಕಮರಿಯ ರಾಯಲಿಂಗೇಶ್ವರ ಶ್ರೀ, ನೆಲೋಗಿಯ ಶಿವಾನಂದಮಠದ ಸಿದ್ಧಲಿಂಗ ಶ್ರೀ, ಬಬಲೇಶ್ವರದ ಮಹಾದೇವ ಶ್ರೀ, ಮನಗೂಳಿಯ ಸಂಗನಬಸವ ಶ್ರೀ, ಕಾಜಿಬೀಳಗಿಯ ಚಿನ್ಮಯಾನಂದ ಶ್ರೀ, ಆಲಗೂರ ಗ್ರಾಮದ ಧರಿದೇವರು, ಕಂಚನೂರ ಕಮರಿಮಠದ ಶ್ರೀ ಸೇರಿದಂತೆ ವಿವಿಧ ಜಿಲ್ಲೆಗಳ 30ಹೆಚ್ಚು ಶ್ರೀಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next